Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಮೊಟ್ಟೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಬೆಳೆಯುವ ಮಕ್ಕಳಿಗೆ ಮೊಟ್ಟೆ ಕೊಡಬೇಕು ಎನ್ನುತ್ತಾರೆ. ಆದರೆ ಮೊಟ್ಟೆ ತಿನ್ನಲು ಮಕ್ಕಳು ಹಿಂದೇಟು ಹಾಕುವುದು ಸಹಜ. ಅಂತಹ ಮಕ್ಕಳಿಗಾಗಿ ಎಗ್‌ ಚಾಟ್‌ ಮಾಡಿಕೊಡಿ. ಇದನ್ನ ಅವರು ಇಷ್ಟಪಟ್ಟು ತಿನ್ನದೇ ಇದ್ರೆ ಕೇಳಿ.

ಎಗ್‌ ಚಾಟ್‌ ರೆಸಿಪಿ
ಎಗ್‌ ಚಾಟ್‌ ರೆಸಿಪಿ

ಮೊಟ್ಟೆ ಪೌಷ್ಟಿಕ ಆಹಾರವಾದ್ರೂ ಮಕ್ಕಳಿಗೆ ಮೊಟ್ಟೆ ತಿನ್ನೋದು ಇಷ್ಟವಾಗದೇ ಇರಬಹುದು. ಪ್ರತಿದಿನ ಮೊಟ್ಟೆ ಬೇಯಿಸಿ ಕೊಟ್ರೆ ಮಕ್ಕಳಿಗೆ ಬೇಸರವಾಗುವುದು ಸಹಜ. ಅದರ ಬದಲು ತಿಂಡಿಯಿಂದ ಬಗೆ ಬಗೆ ಖಾದ್ಯಗಳನ್ನು ತಯಾರಿಸಿ ಕೊಡಬಹುದು. ಹೊಸ ರುಚಿಗಳು ಮಕ್ಕಳಿಗೆ ಇಷ್ಟವಾಗದೇ ಇರಲು ಸಾಧ್ಯವಿಲ್ಲ. ಅದರಲ್ಲೂ ಮಕ್ಕಳಿಗೆ ಚಾಟ್‌ ರುಚಿ ಹೆಚ್ಚು ಇಷ್ಟವಾಗುತ್ತದೆ. ನಿಮ್ಮ ಮಕ್ಕಳು ಚಾಟ್‌ಪ್ರಿಯರಾಗಿದ್ರೆ ಎಗ್‌ಚಾಟ್‌ ಮಾಡಿ ತಿನ್ನಿಸಬಹುದು. ಇದು ಆರೋಗ್ಯಕ್ಕೂ ಉತ್ತಮ, ರುಚಿಗೂ ಸೈ. ಇದಕ್ಕೆ ಬೇಯಿಸಿದ ಮೊಟ್ಟೆ ಹಾಗೂ ಒಂದಿಷ್ಟು ಸಾಮಗ್ರಿಗಳಿದ್ದರೆ ಸಾಕು, ಇದು ಥಟ್ಟಂತ ತಯಾರಾಗೋ ರೆಸಿಪಿ ಕೂಡ ಹೌದು. ಹಾಗಾದ್ರೆ ಎಗ್‌ಚಾಟ್‌ ರೆಸಿಪಿ ತಯಾರಿಸೋದು ಹೇಗೆ ನೋಡಿ.

ಎಗ್ ಚಾಟ್ ರೆಸಿಪಿಗೆ ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಮೊಟ್ಟೆಗಳು - ನಾಲ್ಕು, ಟೊಮೆಟೊ - ಎರಡು, ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಹಸಿಮೆಣಸು - 4, ಈರುಳ್ಳಿ - 1, ಕೊತ್ತಂಬರಿ ಪುಡಿ - 2 ಚಮಚ, ಪುದಿನ ರಸ - ಎರಡು ಚಮಚ, ಉಪ್ಪು - ರುಚಿಗೆ, ಅರಿಶಿನ - ಚಿಟಿಕೆ, ಮೆಣಸಿನಕಾಯಿ - 1 ಚಮಚ, ಚಾಟ್ ಮಸಾಲ - 1 ಚಮಚ, ಕರಿಬೇವು - ಸ್ವಲ್ಪ, ಎಣ್ಣೆ - ಸ್ವಲ್ಪ, ಸಾಸಿವೆ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ

ಎಗ್ ಚಾಟ್ ರೆಸಿಪಿ ತಯಾರಿಸುವ ವಿಧಾನ

ಮೊಟ್ಟೆಗಳನ್ನು ಮೊದಲೇ ಬೇಯಿಸಿ, ಸಿಪ್ಪೆ ತೆಗೆದು ಇರಿಸಿಕೊಳ್ಳಿ. ಬೇಯಿಸಿದ ಮೊಟ್ಟೆಗಳನ್ನು ತುಂಡುಗಳಾಗಿ ಕತ್ತರಿಸಿ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ಮತ್ತು ಹಳದಿ ಭಾಗವನ್ನು ಒಂದು ಬೌಲ್‌ನಲ್ಲಿ ಹಾಕಿ. ಬಿಳಿ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಹಳದಿ ಭಾಗವನ್ನು ಪುಡಿ ಮಾಡಿಕೊಳ್ಳಿ. ಈಗ ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದ ಮೇಲೆ ಕತ್ತರಿಸಿದ ಹಸಿಮೆಣಸು, ಜೀರಿಗೆ ಮತ್ತು ಸಾಸಿವೆ ಸೇರಿಸಿ ಫ್ರೈ ಮಾಡಿ. ನಂತರ ಸಣ್ಣಗೆ ಕತ್ತರಿಸಿದ ಟೊಮೆಟೊ ಚೂರು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ಜೊತೆಗೆ ಮೆಣಸಿನಕಾಯಿ, ಉಪ್ಪು, ಚಾಟ್ ಮಸಾಲ ಮತ್ತು ಅರಿಶಿನ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಅವುಗಳಲ್ಲಿ ನಾಲ್ಕೈದು ಚಮಚ ನೀರು ಸೇರಿಸಿ ಮಿಕ್ಸ್ ಮಾಡಿ. ನೀರು ಕುದಿಯಲು ಆರಂಭಿಸಿದ ನಂತರ ಪುದಿನಾ ರಸ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಮೊದಲೇ ತಯಾರಿಸಿದ ಮೊಟ್ಟೆಯ ಹಳದಿ ಭಾಗದ ಪುಡಿ ಹಾಗೂ ಬಿಳಿ ಭಾಗವನ್ನು ಸೇರಿಸಿ, ಮಿಶ್ರಣ ಮಾಡಿ. ಅದರ ಮೇಲೆ ಚಾಟ್‌ ಮಸಲಾ ಉದುರಿಸಿ. ಒಂದು ಮಿಕ್ಸ್‌ ಕೊಡಿ. ಈಗ ನಿಮ್ಮ ಮುಂದೆ ರುಚಿಯಾದ ಚಾಟ್‌ ಮಸಾಲ ತಿನ್ನಲು ಸಿದ್ಧ.

ಬೆಳಗಿನ ಉಪಾಹಾರದ ಸಮಯದಲ್ಲಿ ಅಥವಾ ಸಂಜೆಯ ತಿಂಡಿಯಾಗಿಯೂ ಸಹ ಇದನ್ನು ಬಳಸಬಹುದು. ಇದು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಜೊತೆಗೆ ಮೊಟ್ಟೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಇದು ಆರೋಗ್ಯಕ್ಕೂ ಉತ್ತಮ. ಇದನ್ನು ತಯಾರಿಸಲು ಕೇವಲ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೊಟ್ಟೆಯನ್ನು ಬೇಯಿಸಿ ರೆಡಿಯಾಗಿಟ್ಟರೆ ಸಾಕು. ಇನ್ನೇಕೆ ತಡ ಇಂದೇ ಎಗ್‌ ಚಾಟ್‌ ತಯಾರಿಸಿ ನಿಮ್ಮ ಮನೆ ಮಕ್ಕಳಿಗೆ ತಿನ್ನಲು ಕೊಡಿ. ದೊಡ್ಡವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

Whats_app_banner