ಬ್ಯಾಚುಲರ್‌ಗಳಿಗೆ ಇಷ್ಟವಾಗುವ ಚೀಸಿ ಎಗ್ ರೋಸ್ಟ್ ರೆಸಿಪಿ; ಬ್ರೇಕ್‌ಫಾಸ್ಟ್, ಸಂಜೆಯ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು
Cheesy Egg Roast: ಮೊಟ್ಟೆಯಿಂದ ಮಾಡುವ ಬಗೆಬಗೆಯ ಡಿಶ್‌ಗಳು ಹಲವರಿಗೆ ಫೇವರೆಟ್. ಆರೋಗ್ಯಕ್ಕೂ ಮೊಟ್ಟೆ ಒಳ್ಳೆಯದು. ಬಹುತೇಕ ವೆಜ್ ಹಾಗೂ ನಾನ್‌ವೆಜ್ ಪ್ರಿಯರು ಮೊಟ್ಟೆ ಸೇವಿಸುವುದರಿಂದ, ಇದರಿಂದ ಮಾಡಬಹುದಾದ ಸರಳ ರೆಸಿಪಿಯೊಂದನ್ನು ನೋಡೋಣ. ಮಕ್ಕಳು, ಬ್ಯಾಚುಲರ್ಸ್ ಎಲ್ಲರೂ ಈ ರೆಸಿಪಿ ಇಷ್ಟಪಡುತ್ತಾರೆ.

ಬ್ಯಾಚುಲರ್‌ಗಳಿಗೆ ದಿಢೀರ್ ಅಂತಾ ಆಗುವ ಸುಲಭ ಅಡುಗೆಗಳು ಬೇಕು. ಇದೇ ವೇಳೆ ನಿತ್ಯ ಕೆಲಸಕ್ಕೆ ಹೋಗುವಾಗ ಬೇಗನೆ ಮನೆಕೆಲಸ ಮಾಡಿ ಮುಗಿಸುವವರು ಕೂಡಾ ಸುಲಭವಾಗಿ ಏನು ಮಾಡಬಹುದು ಎಂದು ನೋಡುತ್ತಾರೆ. ಇಂಥಾ ಸಮಯದಲ್ಲಿ ಮೊಟ್ಟೆಯ ರೆಸಿಪಿಗಳು ಬೇಗ ನೆನಪಿಗೆ ಬರುತ್ತವೆ. ಮೊಟ್ಟೆಯಿಂದ ಹಲವು ಬಗೆಯ ಅಡುಗೆಗಳನ್ನು ಬೇಗನೆ ಮಾಡಬಹುದು. ನಾವಿವತ್ತು ಮೊಟ್ಟೆಯಿಂದ ಚೀಸಿ ಎಗ್ ರೋಸ್ಟ್ (Cheesy egg roast) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮೊಟ್ಟೆಯಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಮತ್ತು ಪ್ರೋಟೀನ್ ಕೂಡಾ ಇವೆ. ಹೀಗಾಗಿ ಈ ಡಿಶ್ ನಿಮ್ಮ ಆರೋಗ್ಯಕ್ಕೂ ಒಂದಷ್ಟು ಪ್ರಯೋಜನ ಕೊಡುತ್ತದೆ.
ಬೆಳಗ್ಗೆ ಗಡಿಬಿಡಿಯಲ್ಲಿ ತಿಂದು ಹೋಗುವವರು ಮತ್ತೆ ಸಂಜೆ ವೇಳೆ ಸ್ನ್ಯಾಕ್ಸ್ ಬೇಕೆನ್ನುವವರು ಈ ರೆಸಿಪಿ ಟ್ರೈ ಮಾಡಬಹುದು.
ಚೀಸೀ ಎಗ್ ರೋಸ್ಟ್ ಮಾಡಲು ಬೇಕಾಗುವ ಪದಾರ್ಥಗಳು
- 8 - ಬೇಯಿಸಿದ ಮೊಟ್ಟೆ
- 2 - ಚೀಸ್ ಸ್ಲೈಸ್
- 1½ ಚಮಚ -ಕೆಂಪು ಮೆಣಸಿನಕಾಯಿ ಪೇಸ್ಟ್
- 1 ಟೀಸ್ಪೂನ್ -ಶುಂಠಿ ಬೆಳ್ಳುಳ್ಳಿ ಪೇಸ್ಟ್
- ರುಚಿಗೆ ತಕ್ಕಷ್ಟು ಉಪ್ಪು
- ಪುಡಿಮಾಡಿದ ಕರಿಮೆಣಸು
- ½ ಟೀಸ್ಪೂನ್ ಕೆಂಪು ಮೆಣಸಿನ ಪುಡಿ
- ¼ ಟೀಸ್ಪೂನ್ ಅರಿಶಿನ ಪುಡಿ
- ½ ಟೀಸ್ಪೂನ್ ಚಾಟ್ ಮಸಾಲಾ (ಸಿಂಪಡಿಸಲು)
- ½ ಟೀಸ್ಪೂನ್ ಗರಂ ಮಸಾಲಾ ಪುಡಿ
- ½ ಟೀಸ್ಪೂನ್ ಜೀರಿಗೆ ಪುಡಿ
- 1 ಚಮಚ ಕಡಲೆ ಹಿಟ್ಟು
- 2 ಟೀಸ್ಪೂನ್ ಮೊಸರು
- ಬೆಣ್ಣೆ
- 1 ನಿಂಬೆ
- ಮಯನೇಸ್
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಈರುಳ್ಳಿ ರಿಂಗ್ಸ್ (ಸರ್ವ್ ಮಾಡಲು)
- ಹಸಿರು ಚಟ್ನಿ (ಸರ್ವ್ ಮಾಡಲು)
ಮಾಡುವ ವಿಧಾನ
ಮೊದಲು ಮ್ಯಾರಿನೇಶನ್ ಮಾಡಲು ಒಂದು ಬಟ್ಟಲಿಗೆ ಕೆಂಪು ಮೆಣಸಿನಕಾಯಿ ಪೇಸ್ಟ್ ಹಾಕಿಕೊಳ್ಳಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ, ಕಡಲೆ ಹಿಟ್ಟು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೊಟ್ಟೆಯನ್ನು ಕತ್ತರಿಸದೆ ಅದರ ಮೇಲೆ ಚಾಕುವಿನಿಂದ ಮಾರ್ಕ್ಸ್ ಮಾಡಿ. ಇದನ್ನು ಮ್ಯಾರಿನೇಶನ್ ಮಿಶ್ರಣಕ್ಕೆ ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. 10ರಿಂದ 15 ನಿಮಿಷಗಳ ಕಾಲ ಪಕ್ಕಕ್ಕೆ ಮ್ಯಾರಿನೇಟ್ ಆಗಲು ಇಟ್ಟುಬಿಡಿ.
ಒಂದು ನಾನ್ ಸ್ಟಿಕ್ ಗ್ರಿಲ್ ಪ್ಯಾನ್ ಒಲೆ ಮೇಲೆ ಇಟ್ಟು ಬಿಸಿ ಮಾಡಿ. ಇದಕ್ಕೆ ಬೆಣ್ಣೆಯನ್ನು ಹಾಕಿ ಮೊಟ್ಟೆಗಳನ್ನು ಅದರ ಮೇಲೆ ಇಡಿ. ಮೇಲಿನಿಂದ ಸ್ವಲ್ಪ ಕರಗಿದ ಬೆಣ್ಣೆಯನ್ನು ಚಿಮುಕಿಸಿ. 2ರಿಂದ 3 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
ಮೊಟ್ಟೆಯನ್ನು ಫ್ಲಿಪ್ ಮಾಡಿ ಸ್ವಲ್ಪ ಮಮತ್ತೆ ಬೆಣ್ಣೆಯನ್ನು ಚಿಮುಕಿಸಿ ಮತ್ತು ಇನ್ನೊಂದು ಬದಿಯನ್ನೂ 2-3 ನಿಮಿಷಗಳ ಕಾಲ ಬೇಯಿಸಿ. ಪ್ರತಿ ಮೊಟ್ಟೆಯ ಮೇಲೆ ಕಾಲು ಭಾಗದಷ್ಟು ಚೀಸ್ ಸ್ಲೈಸ್ ಇಡಿ. ಆ ಚೀಸ್ ಕರಗುವವರೆಗೆ ಬೇಯಿಸಿ.
ಈಗ ಒಂದು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ. ಇದಕ್ಕೆ ನಿಂಬೆ ರಸ ಹಿಂಡಿ, ಚಾಟ್ ಮಸಾಲಾ ಮತ್ತು ಸ್ಟಫ್ ಮೇಯನೇಸ್ ಅನ್ನು ಸಿಂಪಡಿಸಿ. ಮೇಲಿನಿಂದ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ, ಆನಿಯನ್ ರಿಂಗ್ಸ್ ಮತ್ತು ಹಸಿರು ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸರ್ವ್ ಮಾಡಿ.
ಇನ್ನಷ್ಟು ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ