ಚಳಿಗಾಲದಲ್ಲಿ ಸಂಜೆ ಹೊತ್ತು ಡಿಫ್ರೆಂಟ್ ರುಚಿಯ ಕುರುಕಲು ತಿಂಡಿ ತಿನ್ಬೇಕು ಅನ್ನಿಸಿದ್ರೆ ಶಾವಿಗೆ ಪಕೋಡ ಮಾಡಿ, ರುಚಿಯಂತೂ ಸೂಪರ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಸಂಜೆ ಹೊತ್ತು ಡಿಫ್ರೆಂಟ್ ರುಚಿಯ ಕುರುಕಲು ತಿಂಡಿ ತಿನ್ಬೇಕು ಅನ್ನಿಸಿದ್ರೆ ಶಾವಿಗೆ ಪಕೋಡ ಮಾಡಿ, ರುಚಿಯಂತೂ ಸೂಪರ್‌

ಚಳಿಗಾಲದಲ್ಲಿ ಸಂಜೆ ಹೊತ್ತು ಡಿಫ್ರೆಂಟ್ ರುಚಿಯ ಕುರುಕಲು ತಿಂಡಿ ತಿನ್ಬೇಕು ಅನ್ನಿಸಿದ್ರೆ ಶಾವಿಗೆ ಪಕೋಡ ಮಾಡಿ, ರುಚಿಯಂತೂ ಸೂಪರ್‌

ಚಳಿಗಾಲ ಜೋರಾಗಿದೆ, ಭಾನುವಾರ ಬೇರೆ. ಏನಾದ್ರೂ ಸ್ಪೆಷಲ್ ಆಗಿ ಕುರುಕಲು ತಿಂಡಿ ಮಾಡ್ಬೇಕು ಅಂತ ಮನಸ್ಸು ಬಯಸುತ್ತಿದ್ರೆ ನಿಮಗಾಗಿ ಇಲ್ಲಿದೆ ಒಂದು ರೆಸಿಪಿ. ಅದುವೇ ಶಾವಿಗೆ ಪಕೋಡ. ಇದೇನಪ್ಪಾ ಶಾವಿಗೆಯಲ್ಲಿ ಪಕೋಡ ಕೂಡ ಮಾಡ್ತಾರಾ ಅಂತ ಕೇಳ್ಬೇಡಿ. ಇದನ್ನು ಮಾಡೋದು ಹೇಗೆ ಅಂತ ಮುಂದೆ ಓದಿ.

ಶಾವಿಗೆ ಪಕೋಡ ರೆಸಿಪಿ
ಶಾವಿಗೆ ಪಕೋಡ ರೆಸಿಪಿ

ಚಳಿಗಾಲದಲ್ಲಿ ಕುರುಕಲು ತಿಂಡಿ ತಿನ್ನೋಕೆ ಸಖತ್ ಆಗಿರುತ್ತೆ. ಚುಮುಚುಮು ಚಳಿಯಲ್ಲಿ ಬಿಸಿ ಬಿಸಿ ತಿಂಡಿ ತಿಂತಾ ಇದ್ರೆ, ನಾಲಿಗೆ ಮತ್ತೂ ಬೇಕು ಮತ್ತೂ ಬೇಕು ಅಂತ ಕೇಳುತ್ತೆ. ಹಾಗಂತ ಯಾವಾಗಲೂ ಈರುಳ್ಳಿ ಪಕೋಡ, ಆಲೂಗೆಡ್ಡೆ ಬಜ್ಜಿ, ಮೆಣಸಿಕ ಬಜ್ಜಿ ತಿಂದ್ರೆ ಏನು ಚೆನ್ನಾಗಿರುತ್ತೆ ಹೇಳಿ. ಅದಕ್ಕಾಗಿ ನೀವು ಈ ಬಾರಿ ಡಿಫ್ರೆಂಟ್ ಆಗಿರೋ ಪಕೋಡ ಟ್ರೈ ಮಾಡಿ. ಇದನ್ನ ಮಾಡೋದು ಶಾವಿಗೆಯಲ್ಲಿ.

ಇದೇನಪ್ಪಾ ಇದು ಉಪ್ಪಿಟ್ಟು, ಪಾಯಸ ಮಾಡುವ ಸೇಮಿಯ ಅಥವಾ ಶಾವಿಗೆಯಲ್ಲಿ ಪಕೋಡ ಮಾಡ್ತಾರಾ ಅಂತ ಮೂಗಿನ ಮೇಲೆ ಬೆರಳಿಡಬೇಡಿ. ಇದು ನಿಜಕ್ಕೂ ಸಖತ್ ಆಗಿರುತ್ತೆ. ಚಳಿಗಾಲಕ್ಕಂತೂ ಹೇಳಿ ಮಾಡಿಸಿದಂತಿರುವುದು ಸುಳ್ಳಲ್ಲ. ಇದನ್ನ ಮಾಡೋದು ಕೂಡ ಸುಲಭ. ಭಾನುವಾರದ ಹೊತ್ತು ಮನೆಯಲ್ಲೇ ಇರುವಾಗ ಈ ಶಾವಿಗೆ ಪಕೋಡ ಮಾಡಿ. ಇದು ತಿನ್ನಲು ಸೂಪರ್ ಆಗಿರುತ್ತೆ.

ಶಾಮಿಗೆ ಪಕೋಡಕ್ಕೆ ಬೇಕಾಗುವ ಸಾಮಗ್ರಿಗಳು

ಶಾವಿಗೆ – 2ಕಪ್‌, ಕಡಲೆಹಿಟ್ಟು – 1ಕಪ್‌, ಈರುಳ್ಳಿ – 2 (ಉದ್ದಕ್ಕೆ ಹೆಚ್ಚಿದ್ದು), ಹಸಿಮೆಣಸು – 4 ಚಿಕ್ಕದಾಗಿ ಹೆಚ್ಚಿದ್ದು, ಕರಿಬೇವಿನ ಎಲೆ – ಒಂದು ಮುಷ್ಟಿ, ಅಡುಗೆ ಸೋಡಾ – ಕಾಲು ಚಮಚ, ಖಾರದಪುಡಿ – 2ಚಮಚ, ಚಾಟ್ ಮಸಾಲ – 1ಚಮಚ, ಕೊತ್ತಂಬರಿ ಸೊಪ್ಪು – ಅರ್ಧ ಮುಟ್ಟಿಯಾಗುವಷ್ಟು, ಉಪ್ಪು – ಚಿಟಿಕೆ, ಎಣ್ಣೆ – ಕರಿಯಲು

ಶಾವಿಗೆ ಪಕೋಡ ತಯಾರಿಸುವ ವಿಧಾನ

ಮೊದಲು ಒಂದು ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುಡಿಯುತ್ತಿರುವಾಗ ಶಾವಿಗೆ ಸೇರಿಸಿ. ಶಾವಿಗೆಯನ್ನು 4 ನಿಮಿಷಗಳ ಕಾಲ ಬೇಯಿಸಿ. ಶಾವಿಗೆ ಶೇ 60 ರಷ್ಟು ಬೆಂದಿರಬೇಕು ಮತ್ತು ಇದು ಯಾವುದೇ ಕಾರಣಕ್ಕೂ ಅಂಟಾಗಿರಬಾರದು. ಬೇಯಿಸಿದ ಸೇಮಿಯಾವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತಡವಾಗುತ್ತದೆ ಎನ್ನಿಸಿದರೆ ತಣ್ಣೀರು ಸುರಿದು ತಣಿಸಬಹುದು. ಆದರೆ ಶಾವಿಗೆ ಸಂಪೂರ್ಣ ತಣಿಯದೇ ಪಕೋಡ ಮಾಡಬಾರದು. ತಣ್ಣಗಾದ ಶಾವಿಗೆಯನ್ನು ಒಂದು ಅಗಲ ಪಾತ್ರೆಗೆ ಹಾಕಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕರಿಬೇವು, ಖಾರದಪುಡಿ, ಕಡಲೆಹಿಟ್ಟು, ಅಡುಗೆಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಾಟ್ ಮಸಾಲ ಸೇರಿಸಿ. ಈ ಎಲ್ಲವನ್ನು ಬೆರಳುಗಳಿಂದ ಮಿಶ್ರಣ ಮಾಡಿ. ಮೊದಲು ನೀರು ಹಾಕದೇ ಚೆನ್ನಾಗಿ ಕಲೆಸಬೇಕು. ನಂತರ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಪಕೋಡದಂತೆ ರೆಡಿಯಾದ ಮೇಲೆ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಮೇಲೆ ಕೈಯಿಂದ ಅಥವಾ ಚಮಚದಿಂದ ಪಕೋಡ ಮಿಶ್ರಣವನ್ನು ಎಣ್ಣೆಗೆ ಬಿಡಿ. ಇದನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಇದು ಕೆಂಬಣ್ಣ ಬರುವವರೆಗೂ ಕರಿಯಿರಿ. ಈಗ ನಿಮ್ಮ ಮುಂದೆ ರುಚಿಯಾದ ಶಾವಿಗೆ ಪಕೋಡ ತಿನ್ನಲು ಸಿದ್ಧ. ಇದನ್ನು ಚಟ್ನಿ ಅಥವಾ ಸಾಸ್ ಜೊತೆ ತಿನ್ನಲು ಚೆನ್ನಾಗಿರುತ್ತೆ.

ಈ ಪಕೋಡ ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಇಷ್ಟವಾಗುತ್ತೆ, ಮನೆಯಲ್ಲಿ ಈ ರೀತಿ ಹೊಸ ರುಚಿ ಮಾಡಿದಾಗ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ ಇನ್ನೇಕೆ ತಡ ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ, ಅರ್ಧ ಗಂಟೆಯೊಳಗೆ ಈ ಪಕೋಡ ರೆಡಿ ಆಗುತ್ತೆ.

Whats_app_banner