ಸಂಜೆ ಸ್ನ್ಯಾಕ್ಸ್‌ಗೆ ವಿಶೇಷವಾದ ತಿಂಡಿ ಮಾಡ್ಬೇಕು ಅಂತಿದ್ರೆ ಬ್ರೆಡ್ ವಡಾ ಟ್ರೈ ಮಾಡಿ, ಮಕ್ಕಳಿಗಷ್ಟೇ ಅಲ್ಲ ಮನೆಯವರಿಗೂ ಇಷ್ಟವಾಗುತ್ತೆ
ಸಂಜೆ ಹೊತ್ತಿಗೆ ಬೇಸರ ಕಳೆಯಲು ಏನಾದ್ರೂ ಕುರುಕಲು ತಿಂಡಿ ಇದ್ರೆ ಚೆನ್ನಾಗಿರುತ್ತೆ ಅಂತ ಮನಸ್ಸು ಬಯಸೋದು ಸಹಜ. ನಿಮ್ಮ ಮನಸ್ಸಿಗೂ ಹಾಗೆ ಅನ್ನಿಸ್ತಾ ಇದ್ರೆ, ಏನಾದ್ರೂ ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕು ಅನ್ನೋ ಆಸೆ ಆದ್ರೆ ಬ್ರೆಡ್ ವಡಾ ಟ್ರೈ ಮಾಡಿ. ಇದು ಮಕ್ಕಳಿಗಷ್ಟೇ ಅಲ್ಲ ಮನೆಮಂದಿಗೂ ಇಷ್ಟವಾಗುತ್ತೆ.
ಸಂಜೆ ಹೊತ್ತಿಗೆ ಶಾಲೆ ಮುಗಿಸಿ ಬರುವ ಮಕ್ಕಳು, ಕೆಲಸಕ್ಕೆ ಹೋಗಿ ಬರುವ ದೊಡ್ಡವರು ಮನೆಗೆ ಬಂದಾಗ ಏನಾದ್ರೂ ತಿಂಡಿಗಾಗಿ ಹಾತೊರೆಯುವುದು ಸಹಜ. ಅದರಲ್ಲೂ ಈ ಮಳೆಗಾಲ, ಚಳಿಗಾಲದ ಸಮಯದಲ್ಲಿ ಸಂಜೆ ಹೊತ್ತಿಗೆ ಕುರುಕಲು ತಿಂಡಿ ತಿನ್ನಬೇಕು ಎನ್ನುವ ಬಯಕೆ ಮೂಡುತ್ತದೆ. ಹಾಗಂತ ಹೊರಗಡೆ ತಿಂದ್ರೆ ಖಂಡಿತ ಆರೋಗ್ಯ ಕೆಡುತ್ತೆ, ಅದಕ್ಕಾಗಿ ನೀವು ಮನೆಯಲ್ಲೇ ಸ್ನ್ಯಾಕ್ಸ್ ತಯಾರಿಸಬಹುದು.
ಮಕ್ಕಳಿಗೂ ಮನೆಯವರಿಗೂ ಇಷ್ಟವಾಗುವ ಸ್ನ್ಯಾಕ್ಸ್ ತಯಾರಿಸಬೇಕು ಅನ್ನುವ ಯೋಚನೆ ಇದ್ರೆ ಬ್ರೆಡ್ ವಡಾ ಮಾಡಬಹುದು. ಈ ರೆಸಿಪಿ ಮಕ್ಕಳ ಜೊತೆಗೆ ದೊಡ್ಡವರು ಕೂಡ ಇಷ್ಟಪಟ್ಟು ತಿಂತಾರೆ ಮಾತ್ರವಲ್ಲ, ಮತ್ತೆ ಮತ್ತೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಹಾಗಾದರೆ ಈ ರೆಸಿಪಿಯನ್ನು ತಯಾರಿಸಲು ಏನೆಲ್ಲಾ ಬೇಕು, ಇದನ್ನ ಮಾಡೋದು ಹೇಗೆ ಎಂಬ ವಿವರ ಇಲ್ಲಿದೆ.
ಬ್ರೆಡ್ ವಡಾ ಮಾಡಲು ಬೇಕಾಗುವ ಸಾಮಗ್ರಿಗಳು
ಬ್ರೆಡ್ ಚೂರುಗಳು – ಅಗತ್ಯ ಇರುವಷ್ಟು, ಮೊಟ್ಟೆ – 3, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಅರಿಸಿನ ಪುಡಿ – ಅರ್ಧ ಟೀ ಚಮಚ, ಖಾರದ ಪುಡಿ – ಒಂದು ಟೀ ಚಮಚ, ಗರಂ ಮಸಾಲಾ ಪುಡಿ – ಅರ್ಧ ಚಮಚ, ಕಾರ್ನ್ ಫ್ಲೋರ್ – 2 ಟೇಬಲ್ ಚಮಚ, ಈರುಳ್ಳಿ – ಒಂದು ದೊಡ್ಡದು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ
ಬ್ರೆಡ್ ವಡಾ ತಯಾರಿಸುವ ವಿಧಾನ
2 ಬ್ರೆಡ್ ತುಂಡುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ. ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಬ್ರೆಡ್ ಪುಡಿಯನ್ನು ಹಾಕಿದ ಬೌಲ್‌ಗೆ ಮೊಟ್ಟೆ, ಶುಂಠಿ–ಬೆಳ್ಳಿಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅರಿಸಿನ ಪುಡಿ, ಗರಂಮಸಾಲೆ, ಖಾರದಪುಡಿ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರಿಂದ ಸಣ್ಣ ಉಂಡೆ ತಯಾರಿಸಿ ಅದನ್ನು ವಡೆ ಆಕಾರಕ್ಕೆ ತಟ್ಟಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಕಾದ ನಂತರ ರೆಡಿ ಮಾಡಿಟ್ಟುಕೊಂಡ ಹಿಟ್ಟನ್ನು ಎಣ್ಣೆಗೆ ಬಿಟ್ಟು ಎರಡೂ ಕಡೆ ಚೆನ್ನಾಗಿ ಕರಿಯಿರಿ. ಈಗ ನಿಮ್ಮ ಮುಂದೆ ಹೊಸ ರುಚಿಯ ಬ್ರೆಡ್ ವಡಾ ತಿನ್ನಲು ಸಿದ್ಧ.
ಮನೆಯಲ್ಲಿ ಇಂತಹ ಸ್ನ್ಯಾಕ್ಸ್‌ಗಳಲ್ಲಿ ಮಾಡಿ ತಿನ್ನುವುದರಿಂದ ಆರೋಗ್ಯ ಕೆಡುವುದಿಲ್ಲ. ಮಕ್ಕಳಿಗೂ ಇಂತಹ ತಿನಿಸುಗಳು ಇಷ್ಟವಾಗುತ್ತೆ, ಅವರು ಬೇಡ ಎನ್ನದೇ ತಿನ್ನುತ್ತಾರೆ. ಸುಲಭವಾಗಿಯೂ ಕಡಿಮೆ ಸಾಮಗ್ರಿ ಬಳಸಿ ತಯಾರಿಸುವ ಈ ಬ್ರೆಡ್ ವಡಾವನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ.
ವಿಭಾಗ