ಬೀದಿ ಬದಿ ಆಹಾರ ತಿನ್ನುವ ಮುನ್ನ ಎಚ್ಚರ ವಹಿಸಿ; ಬ್ರೆಡ್ ಪಕೋಡದಲ್ಲಿತ್ತು ನಕಲಿ ಪದಾರ್ಥ, ಇಲ್ಲಿದೆ ವೈರಲ್ ವಿಡಿಯೊ
ಬೀದಿ ಬದಿ ಆಹಾರ (ಫಾಸ್ಟ್ ಫುಡ್) ಬ್ರೆಡ್ ಪಕೋಡದಲ್ಲಿ ಬಳಸುವ ಪನೀರ್ ಬಗ್ಗೆ ವ್ಯಕ್ತಿಯೊಬ್ಬ ಸತ್ಯ ವಿಚಾರವನ್ನು ಬಹಿರಂಗಪಡಿಸುವ ವಿಡಿಯೊವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಫಾಸ್ಟ್ ಫುಡ್ (ಬೀದಿ ಬದಿ ಆಹಾರ) ಅಂದ್ರೆ ಬಹುತೇಕ ಮಂದಿ ಇಷ್ಟಪಟ್ಟು ತಿಂತಾರೆ. ಆದರೆ, ಈ ಆಹಾರವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬೀದಿ ಬದಿ ಆಹಾರ ಒಳ್ಳೆಯದಲ್ಲ, ಇದನ್ನು ತಯಾರಿಸುವ ವಿಧಾನವು ಅನಾರೋಗ್ಯಕರವಾಗಿದೆ ಎಂಬಂತಹ ಮಾತುಗಳನ್ನು ನೀವು ಕೇಳಿರಬಹುದು. ಇತ್ತೀಚೆಗೆ ಹೆಚ್ಚಾಗಿ ಪನೀರ್, ಚೀಸ್ ಬಳಸಿ ಫಾಸ್ಟ್ ಫುಡ್ ತಯಾರಿಸಲಾಗುತ್ತಿದೆ. ಇದೀಗ ಬ್ರೆಡ್ ಪಕೋಡದಲ್ಲಿ ಬಳಸುವ ಪನೀರ್ ಬಗ್ಗೆ ವ್ಯಕ್ತಿಯೊಬ್ಬರು ಸತ್ಯ ವಿಚಾರವನ್ನು ಬಹಿರಂಗಪಡಿಸುವ ವಿಡಿಯೊವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ್ರೆ, ಬೀದಿ ಬದಿಯಲ್ಲಿ ಆಹಾರ ತಿನ್ನುವ ಮೊದಲು ಹಲವು ಬಾರಿ ಯೋಚನೆ ಮಾಡಬಹುದು.
ಇನ್ಸ್ಟಾಗ್ರಾಂ ಬಳಕೆದಾರ ನಿಖಿಲ್ ಸ್ಪ್ರೆಡ್ಸ್ ಎಂಬುವವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 25 ರೂಪಾಯಿಗೆ ತೆಗೆದುಕೊಂಡ ಪನೀರ್ ಬ್ರೆಡ್ ಪಕೋಡ ತಿನ್ನುವಾಗ ಅದು ಸ್ವಲ್ಪ ಭಿನ್ನವಾದ ರುಚಿಯನ್ನು ಹೊಂದಿರುತ್ತದೆ. ಹೀಗಾಗಿ ಸಂಶಯಗೊಂಡ ನಿಖಿಲ್, ಬ್ರೆಡ್ ಪಕೋಡಗಳಲ್ಲಿ ಬಳಸುವ ಪನೀರ್ ಅನ್ನು ಹೊರತೆಗೆದು ಅಯೋಡಿನ್ ಟಿಂಚರ್ ದ್ರಾವಣಕ್ಕೆ ಹಚ್ಚಿದ್ದಾರೆ. ಪನೀರ್ ಪರೀಕ್ಷಿಸಲು ಇದನ್ನು ಬಳಸಲಾಗುತ್ತದೆ.
ಸ್ವಲ್ಪ ಸಮಯದ ನಂತರ ಪನೀರ್ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂದರೆ ಇದು ನಕಲಿ ಪದಾರ್ಥ ಎಂದರ್ಥ. ನಂತರ ನಿಖಿಲ್, ಅಸಲಿ ಪನೀರ್ ತಂದು ಅದರ ಮೇಲೆ ಅಯೋಡಿನ್ ಟಿಂಚರ್ ದ್ರಾವಣ ಹಾಕಿದ್ದಾರೆ. ಆದರೆ, ಅಸಲಿಯ ಬಣ್ಣ ಬದಲಾಗಿಲ್ಲ. 25 ರೂಪಾಯಿಗೆ ಖರೀದಿಸಿದ ಬ್ರೆಡ್ ಪಕೋಡದಲ್ಲಿ ನಕಲಿ ಪದಾರ್ಥ ಬಳಸಲಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು.
ಇಲ್ಲಿಯವರೆಗೆ ಈ ವಿಡಿಯೋವನ್ನು 1.86 ಕೋಟಿ ಜನರು ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದು, ಬಳಕೆದಾರರೊಬ್ಬರು, ಇಂದಿನಿಂದ ಇಂತಹ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟುಬಿಡುತ್ತೇನೆ. ಮೀನು ಮತ್ತು ಕೋಳಿ ಖಾದ್ಯಗಳನ್ನು ಮಾತ್ರ ತಿನ್ನುವುದಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಅವರು ಕೇಜ್ರಿವಾಲ್ ಅಂಗಡಿಯಿಂದ ಇದನ್ನು ಖರೀದಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇನ್ನು ಹಲವು ಮಂದಿ ಬಳಕೆದಾರರು ಅಮೂಲ್ ಚೀಸ್, ಪನೀರ್ ಅನ್ನು ಇದೇ ರೀತಿ ಪರೀಕ್ಷಿಸುವಂತೆ ಒತ್ತಾಯಿಸಿದ್ದಾರೆ. ನೀವು ಬೀದಿ ಬದಿಯಿಂದ ಯಾವುದೇ ಆಹಾರ ತಿನ್ನುತ್ತಿದ್ದರೆ ಇಂದಿನಿಂದಲೇ ತಿನ್ನುವುದನ್ನು ಬಿಡಬೇಕು ಎಂದು ಕೆಲವರು ಹೇಳಿದ್ದಾರೆ.
ಅಂದಹಾಗೆ, ಈ ವೈರಲ್ ವಿಡಿಯೋ ರಸ್ತೆಬದಿಯ ಬೀದಿ ಬದಿ ಆಹಾರಗಳಲ್ಲಿ ನಕಲಿ, ಕಲಬೆರಕೆ ಪದಾರ್ಥಗಳನ್ನು ಬಳಸಲಾಗುತ್ತಿದ್ದು, ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ವಿಚಾರವನ್ನು ಬೆಳಕಿಗೆ ತಂದಿದೆ. ನಕಲಿ ಚೀಸ್‌ನಲ್ಲಿ ರಾಸಾಯನಿಕಗಳಿದ್ದು. ಅದು ದೇಹಕ್ಕೆ ಹಾನಿಕಾರಕವಾಗಿದೆ. ಇದು ಆಹಾರದ ರುಚಿಯನ್ನು ಹಾಳುಮಾಡುವುದಲ್ಲದೆ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಈ ವಿಡಿಯೋದಲ್ಲಿ ತಿಳಿಸಲಾದ ಮಾಹಿತಿಯ ಸಂಪೂರ್ಣ ಸತ್ಯಾಸತ್ಯತೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ದೃಢಪಡಿಸುವುದಿಲ್ಲ. ಈ ಮಾಹಿತಿಯು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಆದರೆ, ಕಲಬೆರಕೆ ವಿಚಾರದಲ್ಲಿ ಜಾಗರೂಕರಾಗಿರಬೇಕಾದುದು ಅಗತ್ಯ. ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗಿದೆ.
ಇದನ್ನೂ ಓದಿ: ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?

ವಿಭಾಗ