ನಾನ್‌ವೆಜ್ ಪ್ರಿಯರಿಗಾಗಿ ಇಲ್ಲಿದೆ ಸ್ಪೆಷಲ್ ರೆಸಿಪಿ, ಕರಾವಳಿ ಸ್ಟೈಲ್ ಬಂಗುಡೆ ಪುಳಿಮುಂಚಿ ಮಾಡೋದನ್ನ ನೀವೂ ಕಲಿಯಿರಿ
ಮೀನು ತಿನ್ನೋದು ಅಂದ್ರೆ ನಿಮಗೆ ತುಂಬಾ ಇಷ್ಟನಾ? ಫಿಶ್ ಫ್ರೈ, ಸಾರು ತಿಂದೂ ತಿಂದೂ ನಾಲಿಗೆ ಜಡ್ಡು ಕಟ್ಟಿದ್ರೆ ಫಿಶ್ ಪುಳಿಮುಂಚಿ ಟ್ರೈ ಮಾಡಿ. ಇದಂತೂ ಸಖತ್ ಟೇಸ್ಟಿ ಹಾಗೂ ಸ್ಪೆಷಲ್ ರೆಸಿಪಿ. ಈ ಕರಾವಳಿ ಸ್ಪೆಷಲ್ ಖಾದ್ಯವನ್ನು ನೀವೂ ಮನೆಯಲ್ಲಿ ತಯಾರಿಸಿ ತಿನ್ನಿ. ಮಾಡೋದು ಹೇಗೆ ನಾವ್ ಹೇಳಿ ಕೊಡ್ತೀವಿ ಮುಂದೆ ಓದಿ.
ಮಾಂಸಾಹಾರಿಗಳಿಗೆ ಫಿಶ್ ರೆಸಿಪಿಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರೋದು ಸಹಜ. ಫಿಶ್ ಫ್ರೈ, ಫಿಶ್ ಸಾರು, ಫಿಶ್ ಬಿರಿಯಾನಿ ಈ ರೆಸಿಪಿಗಳ ಹೆಸರುಗಳನ್ನು ನೀವು ಕೇಳಿಯೇ ಇರ್ತೀರಿ, ಆದ್ರೆ ಫಿಶ್ ಪುಳಿಮುಂಚಿ ಕೇಳಿದೀರಾ, ಕರಾವಳಿ ಭಾಗವದವರಿಗೆ ಈ ರೆಸಿಪಿ ಖಂಡಿತ ಹೊಸತಲ್ಲ. ಆದ್ರೆ ಬೇರೆ ಭಾಗದವರಿಗೆ ಇದು ಸ್ಪೆಷಲ್ ಅನ್ನಿಸೋದು ಖಂಡಿತ. ಫಿಶ್ ಸಾರಿನಂತೆಯೇ ಇರುವ ಫಿಶ್ ಪುಳಿಮುಂಚಿ ಡಿಫ್ರೆಂಟ್ ಟೇಸ್ಟ್ ಹೊಂದಿರುತ್ತೆ.
ನೀವು ಫಿಶ್ ಪ್ರಿಯರಾಗಿದ್ದು, ಫಿಶ್‌ನಲ್ಲಿ ಏನಾದ್ರೂ ಡಿಫ್ರೆಂಟ್ ಆಗಿರೋ ರೆಸಿಪಿ ಮಾಡ್ಕೊಂಡ್ ತಿನ್ನಬೇಕು ಅಂತ ಬಹಳ ದಿನಗಳಿಂದ ಅಂದ್ಕೋತಾ ಇದ್ರೆ ಫಿಶ್ ಪುಳಿಮುಂಚಿ ಮಾಡಿ ತಿನ್ನಬಹುದು. ಈ ಸ್ಪೆಷಲ್ ರೆಸಿಪಿ ನಿಮಗೂ ನಿಮ್ಮ ಮನೆಯವರಿಗೂ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ಇದು ಪುಳಿಮುಂಚಿ ದೋಸೆ ಹಾಗೂ ಅನ್ನಕ್ಕೆ ಮಸ್ತ್ ಕಾಂಬಿನೇಷನ್ ಆಗೋದ್ರಲ್ಲಿ ಅನುಮಾನವಿಲ್ಲ. ಸರಿ ಇನ್ಯಾಕೆ ತಡ, ಫಿಶ್ ಪುಳಿಮುಂಚಿ ಮಾಡೋದು ಹೇಗೆ ನೋಡಿ.
ಫಿಶ್ ಪುಳಿಮುಂಚಿ
ಬೇಕಾಗುವ ಸಾಮಗ್ರಿಗಳು: ಮೀನು - 1/2 ಕೆಜಿ (ಪುಳಿಮುಂಚಿಗೆ ಬಂಗುಡೆ ಮೀನು ಉತ್ತಮ), ಈರುಳ್ಳಿ - 2 ಮಧ್ಯಮ ಗಾತ್ರದ್ದು, ಟೊಮೆಟೊ - 2, ಎಣ್ಣೆ - 2 ಚಮಚ, ಹಸಿಮೆಣಸು - 3, ಶುಂಠಿ - 1 ಇಂಚು, ಒಣಮೆಣಸು - 10 ರಿಂದ 12, ಕೊತ್ತಂಬರಿ ಕಾಳು - 2 ಚಮಚ, ಜೀರಿಗೆ - 1 ಚಮಚ, ಕಾಳುಮೆಣಸು - ಅರ್ಧ ಚಮಚ, ಮೆಂತ್ಯೆ ಕಾಳು - ಸ್ವಲ್ಪ (ಜಾಸ್ತಿ ಹಾಕಿದರೆ ಕಹಿಯಾಗುತ್ತದೆ), ಅರಿಸಿನ ಪುಡಿ - ಚಿಟಿಕೆ, ಬೆಳ್ಳುಳ್ಳಿ - 6 ಎಸಳು, ಹುಣಸೆಹಣ್ಣು - ನಿಂಬೆ ಗಾತ್ರದ್ದು
ತಯಾರಿಸುವ ವಿಧಾನ: ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಮೀನಿನ ತುಂಡುಗಳು, ಅರಿಶಿನ ಹಾಗೂ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ. ಇದನ್ನು ಪಾತ್ರೆಯೊಂದರಲ್ಲಿ ಹಾಕಿ, ಅದರ ಮೇಲೆ ಸ್ವಲ್ಪ ಉಪ್ಪು ಹರಡಿ. ಈಗ ಒಣ ಮೆಣಸು, ಕೊತ್ತಂಬರಿ ಕಾಳು, ಜೀರಿಗೆಯನ್ನು ಸ್ವಲ್ಪ ಹುರಿದುಕೊಳ್ಳಿ. ಮಿಕ್ಸಿ ಜಾರು ಅಥವಾ ಗ್ರೈಂಡರ್‌ಗೆ ಹುರಿದುಕೊಂಡ ಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಕಾಳುಮೆಣಸು, ಮೆಂತ್ಯೆ, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು ಹಾಗೂ ಒಂದೂವರೆ ಈರುಳ್ಳಿ ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಚಿಕೊಳ್ಳಿ. ಈ ಪೇಸ್ಟ್ ನುಣ್ಣಗಿದ್ದಷ್ಟೂ ಪುಳಿಮುಂಚಿ ಚೆನ್ನಾಗಿರುತ್ತದೆ. ಈಗ ಇದನ್ನು ದಪ್ಪ ತಳದ ಪಾತ್ರೆಯೊಂದಕ್ಕೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ. ಪುಳಿಮುಂಚಿ ಹದವಾಗಿದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇದು ಕುದಿಯಲು ಆರಂಭಿಸಿದಾಗ ಮೀನಿನ ತುಂಡುಗಳನ್ನು ಅದಕ್ಕೆ ಸೇರಿಸಿ. ಈ ಎಲ್ಲವೂ ಕುದಿಯಲು ಆರಂಭಿಸಿದಾಗ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಈಗ ನಿಮ್ಮ ಮುಂದೆ ರುಚಿಯಾದ ಚಿಕನ್ ಪುಳಿಮುಂಚಿ ಸವಿಯಲು ಸಿದ್ಧ. ಇದು ಅನ್ನದ ಜೊತೆಗಂತು ಮಸ್ತ್ ಕಾಂಬಿನೇಷನ್. ಈ ಭಾನುವಾರ ಸ್ಪೆಷಲ್ ಫಿಶ್ ರೆಸಿಪಿ ಮಾಡ್ಬೇಕು ಅಂತಿದ್ರೆ ಫಿಶ್ ಪುಳಿಮುಂಚಿ ಟ್ರೈ ಮಾಡಿ.
ಫಿಶ್ ಪುಳಿಮುಂಚಿ ಮಾಡೋದು ಮೀನು ಸಾರು ಮಾಡಿದಂತೆ ಆದ್ರೂ ಇದಕ್ಕೆ ತೆಂಗಿನತುರಿ ಸೇರಿಸುವುದಿಲ್ಲ. ಇದನ್ನು ನೀರು ದೋಸೆ ಜೊತೆ ತಿನ್ನಲು ಕೂಡ ಸಖತ್ ಆಗಿರುತ್ತೆ. ಸಾಮಾನ್ಯವಾಗಿ ಮಂಗಳೂರಿನ ಭಾಗದಲ್ಲಿ ಈ ರೆಸಿಪಿಯನ್ನು ತಯಾರಿಸುತ್ತಾರೆ. ಯಾವಾಗ್ಲೂ ಒಂದೇ ಥರ ಮೀನು ಖಾದ್ಯ ತಿಂದು ನಿಮಗೆ ಬೇಸರ ಆಗಿದ್ರೆ ಇದು ಸ್ಪೆಷಲ್ ರುಚಿ ಅನ್ನಿಸೋದ್ರಲ್ಲಿ ಅನುಮಾನವಿಲ್ಲ.
(This copy first appeared in Hindustan Times Kannada website. To read more like this please logon to kannada.hindustantimes.com)