ದಿಢೀರ್ ಅಂತ ತಯಾರಿಸಿದ ಉಪ್ಪಿನಕಾಯಿ ಬೇಗನೆ ಹಾಳಾಗ್ತಾ ಇದೆಯಾ? ಹಾಗಾದ್ರೆ ಈ ರೀತಿ ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡಿ ನೋಡಿ
Lemon Pickle: ಉಪ್ಪಿನಕಾಯಿಯಲ್ಲಿ ಹಲವಾರು ಬಗೆಗಳಿವೆ. ನೀವು ಮನೆಯಲ್ಲಿ ಉಪ್ಪಿನಕಾಯಿ ತಯಾರಿಸುತ್ತಿರಬಹುದು. ಆದರೆ ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ದಿನಗಳವರೆಗೆ ಬಳಸಬಹುದಾದ ನಿಂಬೆಕಾಯಿ ಉಪ್ಪಿನಕಾಯಿ ತಯಾರಿಸಿದ್ದೀರಾ? ಧಿಡೀರ್ ಅಂತ ತಯಾರಿಸಬಹುದಾದ ಈ ಉಪ್ಪಿನಕಾಯಿಗೆ ಸ್ವಲ್ಪ ಎಣ್ಣೆ ಮತ್ತು ಮಸಾಲೆಗಳಿದ್ದರೆ ಸಾಕು ಸುಲಭವಾಗಿ ತಯಾರಿಸಬಹುದು. (ಬರಹ: ಅರ್ಚನಾ ವಿ.ಭಟ್)
ಊಟದ ರುಚಿ ಹೆಚ್ಚಿಸುವುದೇ ಉಪ್ಪಿನಕಾಯಿ. ಸಿಂಪಲ್ ಅನ್ನ–ಸಾರಿನ ರುಚಿಯನ್ನು ಸೂಪರ್ ಆಗಿಸುವ ಗಮ್ಮತ್ತು ಉಪ್ಪಿನಕಾಯಿಗಿದೆ. ಉಪ್ಪಿನಕಾಯಿ ಇಲ್ಲದೆ ಭಾರತೀಯರ ಊಟ ಪೂರ್ಣವಾಗುವುದಿಲ್ಲ. ಇದರಲ್ಲಿ ಮಸಾಲೆಗಳನ್ನು ಹದವಾಗ ಬೆರೆಸಿರಲಾಗುತ್ತದೆ. ಇದು ಆಹಾರಕ್ಕೆ ಹೆಚ್ಚಿನ ಪರಿಮಳವನ್ನು ನೀಡುತ್ತದೆ. ಉಪ್ಪಿನಕಾಯಿಯಲ್ಲಿ ಹಲವಾರು ಬಗೆಗಳಿವೆ. ಎಲ್ಲಾ ರೀತಿಯ ಉಪ್ಪಿನಕಾಯಿಗಳು ಆರೋಗ್ಯಕ್ಕೆ ಉತ್ತಮವಲ್ಲ. ಕೆಲವು ಉಪ್ಪಿನಕಾಯಿಯಲ್ಲಿ ಉಪ್ಪು, ಮಸಾಲೆ, ಎಣ್ಣೆ ಅಧಿಕವಾಗಿರುತ್ತದೆ. ಆದರೆ ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿಗೆ ಕಡಿಮೆ ಎಣ್ಣೆ ಮತ್ತು ಮಸಾಲೆಗಳನ್ನು ಬಳಸಲಾಗುತ್ತದೆ. ಅಂತಹ ಒಂದು ಉಪ್ಪಿನಕಾಯಿ ನಿಂಬೆ ಉಪ್ಪಿನಕಾಯಿ. ಇದನ್ನು ಮನೆಯಲ್ಲೇ ತಯಾರಿಸುವುದರಿಂದ ಉಪ್ಪನ್ನು ಮಾತ್ರ ಬಳಸುತ್ತಾರೆಯೆ ಹೊರತು ಯಾವುದೇ ರೀತಿಯ ಸಂರಕ್ಷಕಗಳನ್ನು ಬಳಸುವುದಿಲ್ಲ. ಹಾಗಾಗಿ ಈ ಉಪ್ಪಿನಕಾಯಿ ಆರೋಗ್ಯಕ್ಕೆ ಉತ್ತಮ. ದಿಢೀರ್ ಅಂತ ತಯಾರಿಸಬಹುದಾದ ನಿಂಬೆ ಉಪ್ಪಿನಕಾಯಿಗೆ ಸ್ವಲ್ಪ ಎಣ್ಣೆ ಮತ್ತು ಮಸಾಲೆಗಳಿದ್ದರೆ ಸಾಕು. ದಿಢೀರ್ ಅಂತ ತಯಾರಿಸಿದ ಉಪ್ಪಿನಕಾಯಿ ಬಹಳ ಕಾಲದವರೆಗೆ ಉಳಿಯುವುದಿಲ್ಲ. ಬೇಗನೆ ಕೆಡುತ್ತದೆ. ಆದರೆ ನಾವು ಹೇಳಿದ ರೀತಿಯಲ್ಲಿ ತಯಾರಿಸಿದರೆ ನಿಂಬೆ ಉಪ್ಪಿನಕಾಯಿ ಎರಡು ವಾರಗಳಿಗಿಂತಲೂ ಹೆಚ್ಚು ಸಮಯ ಕೆಡುವುದಿಲ್ಲ. ಈ ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸುವುದು ಬಹಳ ಸುಲಭ. ಈ ವಿಧಾನ ಬಳಸಿ ಮನೆಯಲ್ಲಿ ಸುಲಭವಾಗಿ ತಯಾರಿಸಿ.
ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಪದಾರ್ಥಗಳು
ನಿಂಬೆಹಣ್ಣು 10
ಸಾಸಿವೆ 2 ಚಮಚ
ಮೆಂತ್ಯ ಕಾಳು 1/4 ಚಮಚ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ 3 ಚಮಚ
ಅರಿಶಿಣ 1/4 ಚಮಚ
ಉಪ್ಪು 1 ಚಮಚ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
ಎಣ್ಣೆ 1/4 ಕಪ್
ಸಾಸಿವೆ 1 ಚಮಚ
ಇಂಗು 1/4 ಚಮಚ
ನಿಂಬೆ ಹಣ್ಣಿನ ಉಪ್ಪಿನಕಾಯಿ ತಯಾರಿಸುವ ವಿಧಾನ
– ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರು ತೆಗೆದುಕೊಂಡು ಅದನ್ನು ಚೆನ್ನಾಗಿ ಕಾಯಿಸಿ.
– ನೀರು ಕುದಿಯುವಾಗ, ಅದಕ್ಕೆ 10 ನಿಂಬೆಹಣ್ಣುಗಳನ್ನು ಸೇರಿಸಿ.
– 5 ನಿಮಿಷಗಳ ಕಾಲ ಕುದಿಸಿ ಅಥವಾ ನಿಂಬೆ ಮೃದುವಾಗುವವರೆಗೆ ಮುಚ್ಚಳವನ್ನು ಮುಚ್ಚಿ ಕುದಿಸಿ.
– ಈಗ ನೀರಿನಿಂದ ನಿಂಬೆ ತೆಗೆದು ಆರಲು ಬಿಡಿ. ನಿಂಬೆಯಲ್ಲಿ ತೇವಾಂಶವಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಅದು ಉಪ್ಪಿನಕಾಯಿಯನ್ನು ತಕ್ಷಣವೇ ಕೆಡಿಸಬಹುದು.
– ಈಗ ನಿಂಬೆ ಹಣ್ಣನ್ನು ಕಾಲುಭಾಗಗಳಾಗಿ ಕತ್ತರಿಸಿಕೊಳ್ಳಿ. (ಅಂದರೆ ಒಟ್ಟು 8 ಹೋಳುಗಳನ್ನಾಗಿ ಮಾಡಿಕೊಳ್ಳಿ.)
– 2 ಚಮಚ ಸಾಸಿವೆ ಮತ್ತು 1 ಚಮಚ ಮೆಂತ್ಯ ಕಾಳುಗಳನ್ನು ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ಬಿಸಿ ಆರಿದ ನಂತರ ಪುಡಿ ಮಾಡಿಕೊಳ್ಳಿ.
– ಈಗ ಅದನ್ನು ಕತ್ತರಿಸಿದ ನಿಂಬೆ ಹೋಳುಗಳಿಗೆ ಸೇರಿಸಿ.
– ಅದಕ್ಕೆ 3 ಚಮಚ ಕೆಂಪು ಮೆಣಸಿನ ಪುಡಿ, ¼ ಚಮಚ ಅರಿಶಿಣ ಮತ್ತು 1 ಚಮಚ ಉಪ್ಪು ಸೇರಿಸಿ.
– ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆಗಳು ನಿಂಗೆ ಹೋಳುಗಳ ಜೊತೆ ಸಂಪೂರ್ಣವಾಗಿ ಸೇರಬೇಕು.
– ಮುಂದೆ ¼ ಕಪ್ ಎಣ್ಣೆಯನ್ನು ಬಿಸಿ ಮಾಡಿ, 1 ಚಮಚ ಸಾಸಿವೆ, ¼ ಚಮಚ ಹಿಂಗ್ ಸೇರಿಸಿ.
– ಸಾಸಿವೆ ಚಟಪಟ ಅಂದಮೇಲೆ ಸ್ಟವ್ ಆಫ್ ಮಾಡಿ. ಎಣ್ಣೆಯನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
– ಎಣ್ಣೆ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಉಪ್ಪಿನಕಾಯಿ ಮೇಲೆ ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
– ಹೀಗೆ ಅತ್ಯಂತ ಕಡಿಮೆ ಸಮಯದಲ್ಲಿ ರುಚಿಕರವಾದ ನಿಂಬೆ ಉಪ್ಪಿನಕಾಯಿ ಸಿದ್ಧವಾಗುತ್ತದೆ. ಸಿದ್ಧಪಡಿಸಿದ ಉಪ್ಪಿನಕಾಯಿಯನ್ನು ಒಂದು ಗ್ಲಾಸ್ ಜಾರ್‌ಗೆ ಹಾಕಿ. ಮುಚ್ಚಳ ಮುಚ್ಚಿ ಫ್ರಿಜ್‌ನಲ್ಲಿಡಿ. ಈ ಉಪ್ಪಿನಕಾಯಿಯನ್ನು 2 ವಾರಗಳವರೆಗೆ ಬಳಸಬಹುದು.