ತೂಕ ಇಳಿಕೆಯಿಂದ ಹೃದಯದ ಆರೋಗ್ಯದವರೆಗೆ, ಸೌತೆಕಾಯಿಯ ಪ್ರಯೋಜನ ಹಲವು: ಇಲ್ಲಿದೆ ಮೂರು ಬಗೆಯ ಸಲಾಡ್ ರೆಸಿಪಿ
ಸೌತೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಮುಖ್ಯವಾಗಿ ಸೌತೆಕಾಯಿಯಲ್ಲಿ ನೀರಿನ ಅಂಶ ಅಧಿಕವಿರುವುದರಿಂದ ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತವೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ಇಳಿಕೆಗೂ ಸಹಕಾರಿ. ಸೌತೆಕಾಯಿಯಿಂದ ತಯಾರಿಸಬಹುದಾದ 3 ರೀತಿಯ ಸಲಾಡ್‍ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೌತೆಕಾಯಿಯು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇವು ವಿಟಮಿನ್ ಕೆ ಅನ್ನು ಹೊಂದಿದ್ದು, ಮೂಳೆಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಸೌತೆಕಾಯಿಯು ಫ್ಲೇವನಾಯ್ಡ್‌ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ನಿಮ್ಮ ದೇಹವನ್ನು ಹೃದ್ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ತೂಕ ನಷ್ಟಕ್ಕೂ ಸೌತೆಕಾಯಿ ಬಹಳ ಪ್ರಯೋಜನಕಾರಿ. ಯಾಕೆಂದರೆ ಇವು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸೌತೆಕಾಯಿಯಲ್ಲಿರುವ ಹೆಚ್ಚಿನ ನೀರಿನ ಅಂಶವು ತೂಕ ನಷ್ಟಕ್ಕೂ ಸಹಕಾರಿಯಾಗಿದೆ. ಇದರಲ್ಲಿ ಫೈಬರ್ ಅಂಶವಿದ್ದು, ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಸೌತೆಕಾಯಿಯಲ್ಲಿರುವ ವಿಟಮಿನ್ ಕೆ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ
ಮೊಡವೆ ಮತ್ತು ಸನ್‌ಬರ್ನ್ ಕಡಿಮೆ ಮಾಡಲು ಕೂಡ ಸೌತೆಕಾಯಿ ರಾಮಬಾಣವಾಗಿದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅನ್ನು ಒಳಗೊಂಡಿರುತ್ತವೆ. ಇದು ಚರ್ಮದ ಕಿರಿಕಿರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಊಟಕ್ಕೆ ಸೈಡ್ ಡಿಶ್ ಇರಲಿ ಅಂತಾ ಕೆಲವರು ಸೌತೆಕಾಯಿಯನ್ನು ತಿನ್ನುತ್ತಾರೆ. ಸೌತೆಕಾಯಿಯಲ್ಲಿ ಮೂರು ಬಗೆಯ ಸಲಾಡ್ ಪಾಕವಿಧಾನಗಳನ್ನು ಮಾಡಬಹುದು. ಏನೆಲ್ಲಾ ಮಾಡಬಹುದು ಇಲ್ಲಿದೆ ಮಾಹಿತಿ.
ಸೌತೆಕಾಯಿ ಮೊಸರು ಸಲಾಡ್: ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿ, ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊಗಳನ್ನು ಸೇರಿಸಿ ಮಿಕ್ಸ್ ಮಾಡಿ. ಪ್ರತ್ಯೇಕ ಬಟ್ಟಲಿನಲ್ಲಿ ಮೊಸರು, ನಿಂಬೆ ರಸ, ಅರಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಈ ಮೊಸರು ಮಿಶ್ರಣವನ್ನು ಸೌತೆಕಾಯಿ ಮಿಶ್ರಣಕ್ಕೆ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಅನ್ನದ ಜೊತೆಯೂ ಸವಿಯಲು ಇದು ಚೆನ್ನಾಗಿರುತ್ತದೆ.
ಅಥವಾ ಹೆಚ್ಚಿದ ಸೌತೆಕಾಯಿಗೆ ಈರುಳ್ಳಿ, ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ. ಬಳಿಕ ಅರ್ಧ ತೆಂಗಿನಕಾಯಿಯನ್ನು ತುರಿದು ಅದಕ್ಕೆ ಸ್ವಲ್ಪ ಸಾಸಿವೆ, ಹಸಿಮೆಣಸು, ಸ್ವಲ್ಪ ಹುಣಸೆ ಹುಳಿ, ಜೀರಿಗೆ ಹಾಕಿ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸೌತೆಕಾಯಿ ಮಿಶ್ರಣಕ್ಕೆ ಹಾಕಿ ಜೊತೆಗೆ ಮೊಸರನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಸೌತೆಕಾಯಿ ಮೊಸರು ಸಲಾಡ್ ಸವಿಯಲು ಸಿದ್ಧ. ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಸಲಾಡ್ ಅನ್ನು ಹೆಚ್ಚಾಗಿ ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಇದೊಂದು ಪರಿಪೂರ್ಣ ಆಯ್ಕೆ.
ಸೌತೆಕಾಯಿ ಸಲಾಡ್: ಸೌತೆಕಾಯಿ ಹಾಗೂ ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿ, ಇದಕ್ಕೆ ವಿನೆಗರ್ ಅಥವಾ ನಿಂಬೆ ಹಣ್ಣಿನ ರಸವನ್ನು ಚಿಮುಕಿಸಿ. ಇದಕ್ಕೆ ಸಬ್ಬಸಿಗೆ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸ್ ಮಾಡಿ. ನಿಂಬೆ ರಸ ಇಷ್ಟವಾಗದಿದ್ದಲ್ಲಿ ಟೊಮೆಟೋವನ್ನು ಸಣ್ಣದಾಗಿ ಕತ್ತರಿಸಿ ಹಾಕಬಹುದು. ತಿನ್ನುವ ಮುನ್ನ ಫ್ರಿಜ್‍ನಲ್ಲಿ 2 ಗಂಟೆ ಕಾಲ ಹಾಗೆಯೇ ಇಟ್ಟು ಬಳಿಕ ಸೇವಿಸಬಹುದು.
ಸೌತೆಕಾಯಿ ಕಡಲೆ ಸಲಾಡ್: ಊಟದಲ್ಲಿ ಹೆಚ್ಚುವರಿ ಪ್ರೊಟೀಸ್ ಬೇಕಿದ್ದರೆ ಈ ಸಲಾಡ್ ಅನ್ನು ಪ್ರಯತ್ನಿಸಬಹುದು. ಸೌತೆಕಾಯಿ ಮತ್ತು ಕಡಲೆಕಾಳು ಸಲಾಡ್ ಅನ್ನು ತಯಾರಿಸಬಹುದು. ಇದನ್ನು ಮಾಡುವುದು ತುಂಬಾನೇ ಸಿಂಪಲ್. ಆಲಿವ್ ಎಣ್ಣೆ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಪುಡಿಯನ್ನು ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿದ ಕಡಲೆಕಾಳು, ಸೌತೆಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಶ್ರಣ ಮಾಡಿದರೆ ರುಚಿಕರವಾದ ಸೌತೆಕಾಯಿ ಕಡಲೆ ಸಲಾಡ್ ಸವಿಯಲು ಸಿದ್ಧವಾಗಿರುತ್ತದೆ.