ಗೋಧಿ ಹಿಟ್ಟು, ಬೆಲ್ಲದಿಂದ ತಯಾರಿಸಲಾಗುವ ಆರೋಗ್ಯಕರ ಸಿಹಿಖಾದ್ಯವಿದು: ಚಿಪ್ಪಿನ ಆಕಾರದ ಈ ತಿಂಡಿಯನ್ನು ಮಾಡುವುದು ತುಂಬಾ ಸಿಂಪಲ್
ಮಕ್ಕಳು ಪಿಜ್ಜಾ, ಬರ್ಗರ್ ಎಂದರೆ ಬಹಳ ಇಷ್ಟಪಟ್ಟು ತಿಂತಾರೆ. ಆದರೆ, ಇದು ಆರೋಗ್ಯಕ್ಕೆ ಉತ್ತಮವಲ್ಲ. ಇಲ್ಲಿ ಆರೋಗ್ಯಕರ ಸಿಹಿಖಾದ್ಯ ತಯಾರಿಸುವ ವಿಧಾನವನ್ನು ನೀಡಲಾಗಿದೆ. ಗೋಧಿ ಹಿಟ್ಟು, ಬೆಲ್ಲದಿಂದ ತಯಾರಿಸಲಾಗುವ ಚಿಪ್ಪಿನ ಆಕಾರದ ಈ ಖಾದ್ಯ ತಿನ್ನಲು ಬಹಳ ರುಚಿಕರವಾಗಿರುತ್ತದೆ.
ಇಂದಿನ ಮಕ್ಕಳು ಪಿಜ್ಜಾ, ಬರ್ಗರ್ ಅಂದ್ರೆ ಸಾಕು ತಿನ್ನಲು ತುದಿಗಾಲಲ್ಲಿ ನಿಂತಿರುತ್ತಾರೆ. ಇದು ಆರೋಗ್ಯಕ್ಕೂ ಅಷ್ಟು ಉತ್ತಮವಲ್ಲ. ಮನೆಯಲ್ಲೇ ಆರೋಗ್ಯಕರ ತಿಂಡಿಯನ್ನು ಮಕ್ಕಳಿಗೆ ಮಾಡಿಕೊಡುವುದು ಒಳ್ಳೆಯದು. ಮಕ್ಕಳು ವೆರೈಟಿ ಸಿಹಿತಿಂಡಿಗಳನ್ನು ಕೇಳುತ್ತಾರೆಯಾದ್ದರಿಂದ ಅವರಿಗಾಗಿ ರುಚಿಕರವಾದ ಗೋಧಿಹಿಟ್ಟು ಹಾಗೂ ಬೆಲ್ಲದಿಂದ ತಯಾರಿಸಲಾಗುವ ಈ ಸಿಹಿ ಭಕ್ಷ್ಯವನ್ನು ಮಾಡಿ ಕೊಡಬಹುದು. ಚಿಪ್ಪಿನ ಆಕಾರದಲ್ಲಿರುವ ಈ ಬೆಲ್ಲದ ಸಿಹಿತಿಂಡಿ ತಯಾರಿಸುವುದು ಅಂತಹ ಕಷ್ಟವೇನಲ್ಲ. ಬಹಳ ಸರಳವಾಗಿ ತಯಾರಿಸಬಹುದಾದ ರೆಸಿಪಿಯಿದು. ಹಾಗಿದ್ದರೆ ಈ ರೆಸಿಪಿಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೆಲ್ಲದ ಚಿಪ್ಪಿನ ಸಿಹಿತಿಂಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ತುಪ್ಪ- 2 ಟೀ ಚಮಚ, ಉಪ್ಪು- ಸ್ವಲ್ಪ, ಅಡುಗೆ ಸೋಡಾ- 1/2 ಟೀ ಚಮಚ, ಎಣ್ಣೆ- ಕರಿಯಲು ಬೇಕಾಗುವಷ್ಟು, ಗೋಧಿ ಹಿಟ್ಟು- ಒಂದೂವರೆ ಕಪ್, ಬೆಲ್ಲ- ¾ ಕಪ್.
ಪಾಕವಿಧಾನ: ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ತುಪ್ಪ, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾಗುವಷ್ಟು ನೀರು ಸೇರಿಸಿ. ಚಪಾತಿ ಹಿಟ್ಟಿನಿಂತೆ ಮಿಶ್ರಣ ಮಾಡಿ. ನಂತರ ಇದಕ್ಕೆ ಮುಚ್ಚಳವನ್ನು ಮುಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ.
- ನಂತರ ಹಿಟ್ಟನ್ನು ಸಣ್ಣ ಉಂಡೆಗಳಂತೆ ತೆಗೆದುಕೊಳ್ಳಿ. ಈ ಸಣ್ಣ ಉಂಡೆಗಳನ್ನು ಚಿಪ್ಪುಗಳ ಆಕಾರಕ್ಕೆ ತನ್ನಿ. ಕೈಯಿಂದಲೇ ಮಾಡಬಹುದು ಅಥವಾ ಈ ಸಿಹಿತಿಂಡಿ ತಯಾರಿಸಲು ಇದಕ್ಕೆಂದೇ ಚಿಕ್ಕ ಸಾಧನ ಸಿಗುತ್ತದೆ ಅದರಿಂದಲೂ ತಯಾರಿಸಬಹುದು. ಅ
- ಎಲ್ಲಾ ಉಂಡೆಗಳನ್ನು ಚಿಪ್ಪುಗಳ ಆಕಾರಕ್ಕೆ ತಂದ ನಂತರ, ಕಡಾಯಿಯನ್ನು ಸ್ಟೌವ್ ಮೇಲೆ ಇರಿಸಿ, ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆಯನ್ನು ಸೇರಿಸಿ.
- ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಚಿಪ್ಪುಗಳನ್ನು ಸೇರಿಸಿ. ಬಣ್ಣ ಬದಲಾಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಎಲ್ಲವನ್ನೂ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ.
- ಈಗ ಮತ್ತೊಂದು ಕಡಾಯಿಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಬೆಲ್ಲ ಸೇರಿಸಿ. ಈ ಬೆಲ್ಲಕ್ಕೆ ಅರ್ಧ ಕಪ್ ನೀರನ್ನು ಸೇರಿಸಿ ಕುದಿಸಿ. ಪಾಕ ಬರುವ ಅಗತ್ಯವಿಲ್ಲ. ನಂತರ ಈ ಬೆಲ್ಲದ ಸಿರಪ್ ಅನ್ನು ಸೋಸಿಕೊಳ್ಳಿ. ನಂತರ ಸೋಸಿಕೊಂಡ ಬೆಲ್ಲದ ಸಿರಪ್ ಅನ್ನು ಕಡಾಯಿಗೆ ಹಾಕಿ ಮತ್ತೆ ಕುದಿಸಿ. ಒಂದೆಳೆ ಪಾಕ ಬರುವವರೆಗೆ ಕುದಿಸಿ.
- ಪಾಕ ಚೆನ್ನಾಗಿ ಬಂದಾಗ ಫ್ರೈ ಮಾಡಿಟ್ಟ ಗೋಧಿ ಚಿಪ್ಪು ಮಿಶ್ರಣವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಪ್ಪು ಬೆಲ್ಲದ ಪಾಕವನ್ನು ಹೀರಿಕೊಂಡ ನಂತರ ಸ್ಟೌವ್ ಆಫ್ ಮಾಡಿ, ತಣ್ಣಗಾಗಲು ಬಿಡಿ.
- ತಣ್ಣಗಾದ ನಂತರ, ಬೆಲ್ಲದ ಪಾಕದಲ್ಲಿ ಅಂಟಿರುವ ಚಿಪ್ಪುಗಳನ್ನು ಬೇರ್ಪಡಿಸಿ, ಅವುಗಳನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ಇವನ್ನು ಮೂರು ವಾರಗಳವರೆಗೆ ಡಬ್ಬವೊಂದರಲ್ಲಿ ಸಂಗ್ರಹಿಸಬಹುದು. ಕೆಲವೊಮ್ಮೆ ಒಂದು ತಿಂಗಳವರೆಗೆ ತಾಜಾವಾಗಿರುತ್ತವೆ.
ಹಿಂದೆಲ್ಲಾ, ಹಬ್ಬ ಬಂದಾಗ ಈ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು. ಬೆಲ್ಲದಿಂದ ತಯಾರಿಸಲಾಗುವ ಇಂತಹ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೂ ಪ್ರಯೋಜವನಕಾರಿ. ಇದನ್ನು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ, ಮೆದ್ದಗಾಗುತ್ತದೆ. ಹೀಗಾಗಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬಹುದು. ಈ ಚಿಪ್ಪಿನ ಆಕಾದರ ಸಿಹಿ ಖಾದ್ಯ ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ, ಇದನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ.