Food for weight loss: ತೂಕ ಇಳಿಕೆಗೆ ಪ್ರಯತ್ನ ಪಡುತ್ತಿದ್ದೀರಾ: ಹೆಚ್ಚು ಪ್ರೊಟೀನ್ ಇರುವ ಈ ಐದು ಬಗೆಯ ಪಾಸ್ತಾ ಖಾದ್ಯಗಳನ್ನು ಟ್ರೈ ಮಾಡಿ
ತೂಕ ಇಳಿಕೆಗೆ ಹಲವರು ನಾನಾ ಬಗೆಯ ಸರ್ಕಸ್ ಮಾಡುತ್ತಾರೆ. ತೂಕ ಕಡಿಮೆ ಮಾಡುವುದು ಎಂದರೆ ಕಡಿಮೆ ಆಹಾರ ಸೇವಿಸುವುದಲ್ಲ. ಪೌಷ್ಟಿಕಾಂಶವುಳ್ಳ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಸೇವಿಸುವುದು ಮುಖ್ಯ. ತೂಕ ಇಳಿಕೆಗೆ ಪ್ರಯತ್ನ ಪಡುತ್ತಿರುವವರು ಈ ಐದು ಬಗೆಯ ಪಾಸ್ತಾ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.
ತೂಕ ಕಳೆದುಕೊಳ್ಳಲು ಇಂದು ಬಹುತೇಕರು ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಡಯೆಟ್ ಮಾಡುವುದು, ವ್ಯಾಯಾಮ ಮಾಡುವುದು, ಜಿಮ್‍ಗೆ ಹೋಗುವುದು ಇತ್ಯಾದಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು ತೂಕ ಇಳಿಕೆಯ ಪ್ರಯತ್ನ ಮಾಡಬಹುದು. ತೂಕ ಇಳಿಸುವುದು ಎಂದರೆ ಕಡಿಮೆ ಆಹಾರ ಸೇವಿಸುವುದಲ್ಲ. ಕಡಿಮೆ ಕ್ಯಾಲೋರಿಯಿರುವ ಪೌಷ್ಠಿಕಾಂಶ ಭರಿತ ಆಹಾರ ಸೇವಿಸುವುದು ಬಹಳ ಮುಖ್ಯ. ಇದೊಂದು ಸಾಂಪ್ರದಾಯಿಕ ಇಟಾಲಿಯನ್ ಪಾಕವಿಧಾನವಾಗಿದ್ದು, ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಪಾಸ್ತಾವನ್ನು ಟ್ರೈ ಮಾಡಬಹುದು. ರುಚಿಕರವಾದ ಐದು ರೀತಿಯ ಪಾಸ್ತಾ ಪಾಕವಿಧಾನಗಳು ಇಲ್ಲಿವೆ:
ಚಿಕನ್ ಮತ್ತು ಪಾಲಕ್ ಪಾಸ್ತಾ
ಬೇಕಾಗುವ ಪದಾರ್ಥಗಳು: ಗೋಧಿ ಪಾಸ್ತಾ- 2 ಕಪ್, ಆಲಿವ್ ಎಣ್ಣೆ- 1 ಚಮಚ, ಬೇಯಿಸಿದ ಚಿಕನ್- 1 ಕಪ್, ಪಾಲಕ್- 2 ಕಪ್, ಟೊಮೆಟೊ- 1 ಕಪ್, ಲವಂಗ- 1, ಬೆಳ್ಳುಳ್ಳಿ 4 ರಿಂದ 5 ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ತುರಿದ ಚೀಸ್ (ಬೇಕಿದ್ದರೆ ಮಾತ್ರ)
ಮಾಡುವ ವಿಧಾನ: ಸಂಪೂರ್ಣ ಗೋಧಿ ಪಾಸ್ತಾವನ್ನು ಬೇಯಿಸಿ, ಅದನ್ನು ಪಕ್ಕಕ್ಕೆ ಇರಿಸಿ. ದೊಡ್ಡ ಬಾಣಲೆಯಲ್ಲಿ, ಮಧ್ಯಮ ಶಾಖದ ಉರಿಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಸೇರಿಸಿ ನಂತರ ಕೋಳಿ ಮಾಂಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪಾಲಕ್ ಮತ್ತು ಟೊಮೆಟೊ ಸೇರಿಸಿ, ಚೆನ್ನಾಗಿ ಬೇಯಿಸಿ. ಇದು ಬೆಂದ ನಂತರ ಅದಾಗಲೇ ಬೇಯಿಸಿದ ಪಾಸ್ತಾವನ್ನು ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ ಸೇರಿಸಿ. ಬೇಕಿದ್ದಲ್ಲಿ ತುರಿದ ಚೀಸ್ ಸೇರಿಸಬಹುದು.
ತರಕಾರಿ-ಅವರೆ ಕಾಳು ಪಾಸ್ತಾ
ಬೇಕಾಗುವ ಪದಾರ್ಥಗಳು: ಅವರೆ ಕಾಳು- 2 ಕಪ್, ಆಲಿವ್ ಎಣ್ಣೆ- 1 ಚಮಚ, ದೊಣ್ಣೆ ಮೆಣಸಿನಕಾಯಿ- 1, ಅಣಬೆ- 1 ಕಪ್, ಸಿಹಿಕುಂಬಳಕಾಯಿ- 1 ಕಪ್, ಟೊಮೆಟೊ- 1 ಕಪ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು.
ಮಾಡುವ ವಿಧಾನ: ಮೊದಲಿಗೆ ಅವರೆ ಕಾಳು ಹಾಗೂ ಪಾಸ್ತಾವನ್ನು ಬೇಯಿಸಿ, ಪಕ್ಕಕ್ಕೆ ಇರಿಸಿ. ನಂತರ ಮಧ್ಯಮ ಶಾಖದ ಉರಿಯಲ್ಲಿ ಬಾಣಲೆಗೆ ಆಲಿವ್ ಎಣ್ಣೆಯನ್ನು ಹಾಕಿ. ಅದಕ್ಕೆ ದೊಣ್ಣೆ ಮೆಣಸು, ಟೊಮೆಟೊ ಅಣಬೆ ಹಾಗೂ ಸಿಹಿ ಕುಂಬಳಕಾಯಿಯನ್ನು ಸೇರಿಸಿ, ಬೇಯಿಸಿ. ನಂತರ ಈ ತರಕಾರಿ ಮಿಶ್ರಣಕ್ಕೆ ಬೇಯಿಸಿಟ್ಟಿರುವ ಅವರೆಕಾಳು ಪಾಸ್ತಾವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸಿನ ಪುಡಿ ಹಾಕಿ ಬಿಸಿ ಬಿಸಿಯಾಗಿ ಬಡಿಸಿ.
ಬ್ರೆಡ್-ಗೋಧಿ ಪಾಸ್ತಾ
ಬೇಕಾಗುವ ಪದಾರ್ಥಗಳು: ಗೋಧಿ ಪಾಸ್ತಾ- 2 ಕಪ್, ಆಲಿವ್ ಎಣ್ಣೆ- 1 ಚಮಚ, ಬ್ರೆಡ್ ತುಂಡುಗಳು- 1/4 ಕಪ್, ಮೊಟ್ಟೆ- 1, ಮರಿನಾರಾ ಸಾಸ್- 1 ಕಪ್, ಓರೆಗಾನೊ- 1 ಟೀ ಚಮಚ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಬ್ರೆಡ್ ತುಂಡುಗಳು, ಮೊಟ್ಟೆ, ಓರೆಗಾನೊ, ಉಪ್ಪು ಮತ್ತು ಮೆಣಸು ಮಿಶ್ರಣ ಮಾಡಿ ಚೆಂಡುಗಳಂತೆ ರೂಪಿಸಿ. ಇವನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ ಓವೆನ್‍ನಲ್ಲಿ 10 ನಿಮಿಷಗಳ ಕಾಲ ಬೇಯಿಸಿ. ಇನ್ನೊಂದೆಡೆ ಸಂಪೂರ್ಣ ಗೋಧಿ ಪಾಸ್ತಾವನ್ನು ಬೇಯಿಸಿ, ಪಕ್ಕಕ್ಕೆ ಇರಿಸಿ. ಬಾಣಲೆಯೊಂದರಲ್ಲಿ ಮರಿನಾರಾ ಸಾಸ್ ಹಾಕಿ ಅದಕ್ಕೆ ಓವೆನ್‍ನಲ್ಲಿ ಬೇಯಿಸಿದ ಬ್ರೆಡ್ ಮಿಶ್ರಣವನ್ನು ಸೇರಿಸಿ, 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬೇಯಿಸಿದ ಪಾಸ್ತಾ ಸೇರಿಸಿದರೆ, ಸವಿಯಲು ರುಚಿಕರವಾದ ಖಾದ್ಯ ರೆಡಿ.
ಗ್ರಿಲ್ಡ್ ಚಿಕನ್ ಮತ್ತು ತರಕಾರಿ ಪಾಸ್ತಾ
ಬೇಕಾಗುವ ಪದಾರ್ಥಗಳು: ಪಾಸ್ತಾ- 2 ಕಪ್, ಆಲಿವ್ ಎಣ್ಣೆ- 1 ಚಮಚ, ಗ್ರಿಲ್ಡ್ ಚಿಕನ್- 1 ಕಪ್, ಟೊಮ್ಯಾಟೊ- 1, ದೊಣ್ಣೆ ಮೆಣಸಿನಕಾಯಿ- 1 ಕಪ್, ಸಿಹಿಗುಂಬಳಕಾಯಿ- 1 ಕಪ್, ಬಾಲ್ಸಾಮಿಕ್ ವಿನೈಗ್ರೇಟ್ (ವಿನೆಗರ್, ಜೇನುತುಪ್ಪ, ಸಾಸಿವೆ, ಬೆಳ್ಳುಳ್ಳಿ, ಉಪ್ಪು ಮತ್ತು ಮೆಣಸಿನ ಮಿಶ್ರಣ)- 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನ ಪುಡಿ.
ಮಾಡುವ ವಿಧಾನ: ಮೊದಲಿಗೆ ಪಾಸ್ತಾವನ್ನು ಬೇಯಿಸಿ, ಪಕ್ಕಕ್ಕೆ ಇರಿಸಿ. ದೊಡ್ಡ ಬಾಣಲೆಯಲ್ಲಿ, ಮಧ್ಯಮ ಶಾಖದ ಉರಿಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ದೊಣ್ಣೆ ಮೆಣಸು, ಟೊಮೆಟೊ, ಸಿಹಿಗುಂಬಳ ಸೇರಿಸಿ ಬೇಯಿಸಿ. ನಂತರ ಇದಕ್ಕೆ ಗ್ರಿಲ್ಡ್ ಚಿಕನ್ ಮತ್ತು ಬಾಲ್ಸಾಮಿಕ್ ವಿನೈಗ್ರೇಟ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಜೊತೆಗೆ ಪಾಸ್ತಾವನ್ನು ಸೇರಿಸಿದರೆ ರುಚಿಕರವಾದ ಖಾದ್ಯ ಸವಿಯಲು ಸಿದ್ಧ.
ಸೀಗಡಿ-ಎಡಮಾಮ್ ಸ್ಪಾಗೆಟ್ಟಿ ಪಾಸ್ತಾ
ಬೇಕಾಗುವ ಪದಾರ್ಥಗಳು: ಎಡಮೇಮ್ ಸ್ಪಾಗೆಟ್ಟಿ (ಆನ್ಲೈನ್ ಮುಖಾಂತರವೂ ಲಭ್ಯವಿದೆ)- 2 ಕಪ್, ಆಲಿವ್ ಎಣ್ಣೆ- 1 ಚಮಚ, ಸೀಗಡಿ- 1 ಪೌಂಡ್ ಸೀಗಡಿ, ಪೆಸ್ಟೊ (ಇಟಾಲಿಯನ್) ಸಾಸ್- 1/2 ಕಪ್, ಟೊಮ್ಯಾಟೊ- 1/4 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ.
ಮಾಡುವ ವಿಧಾನ: ಮೊದಲಿಗೆ ಎಡಮೇಮ್ ಸ್ಪಾಗೆಟ್ಟಿಯನ್ನು ಬೇಯಿಸಿ, ಪಕ್ಕಕ್ಕೆ ಇರಿಸಿ. ಮಧ್ಯಮ ಶಾಖದಲ್ಲಿ ಬಾಣಲೆಯೊಂದರಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸೀಗಡಿ ಸೇರಿಸಿ. ನಂತರ ಟೊಮೆಟೊ ಹಾಗೂ ಪೆಸ್ಟೊ ಸಾಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸೀಗಡಿ ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಮೆಣಸು ಹಾಕಿ ಬೇಯಿಸಿಟ್ಟ ಎಡಮೇಮ್ ಸ್ಪಾಗೆಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಬಿಸಿ ಬಿಸಿಯಾಗಿ ಬಡಿಸಿ.
ವಿಭಾಗ