ಸಮಯವಿಲ್ಲ ಎಂದು ಬೆಳಗ್ಗಿನ ಉಪಾಹಾರ ಬಿಡಬೇಡಿ; ದಿಢೀರ್ ಮಾಡಬಹುದಾದ‌ ಸರಳ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಸಮಯವಿಲ್ಲ ಎಂದು ಬೆಳಗ್ಗಿನ ಉಪಾಹಾರ ಬಿಡಬೇಡಿ; ದಿಢೀರ್ ಮಾಡಬಹುದಾದ‌ ಸರಳ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು

ಸಮಯವಿಲ್ಲ ಎಂದು ಬೆಳಗ್ಗಿನ ಉಪಾಹಾರ ಬಿಡಬೇಡಿ; ದಿಢೀರ್ ಮಾಡಬಹುದಾದ‌ ಸರಳ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು

ಆರೋಗ್ಯದ ದೃಷ್ಟಿಯಿಂದ ಬೆಳಗ್ಗಿನ ಉಪಾಹಾರವನ್ನು ಎಂದಿಗೂ ತಪ್ಪಿಸಬಾರದು.ಬಿಡುವಿಲ್ಲದಿದ್ದರೂ ಹೇಗಾದರೂ ಬೆಳಗ್ಗಿನ ಉಪಾಹಾರ ತಿನ್ನುವುದು ಬಹಳ ಮುಖ್ಯ. ಹೀಗಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದಾದಂತಹ ತಿಂಡಿಗಳನ್ನು ತಯಾರಿಸಬಹುದು. ಅಲ್ಲದೆ, ದಿನಾ ಬೆಳಗ್ಗೆ ಏನು ತಿಂಡಿ ಮಾಡುವುದು ಎಂಬ ಯೋಚನೆಯಿದ್ದರೂ ಈ ರೆಸಿಪಿಗಳನ್ನು ಪ್ರಯತ್ನಿಸಬಹುದು. ಇಲ್ಲಿದೆ ಪಾಕವಿಧಾನ.

ದಿಢೀರ್ ಮಾಡಬಹುದಾದ‌ ಸರಳ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು
ದಿಢೀರ್ ಮಾಡಬಹುದಾದ‌ ಸರಳ ಬ್ರೇಕ್‌ಫಾಸ್ಟ್‌ ರೆಸಿಪಿಗಳಿವು (PC: Canva)

ಆರೋಗ್ಯದ ದೃಷ್ಟಿಯಿಂದ ಬೆಳಗ್ಗಿನ ಉಪಾಹಾರವನ್ನು ಎಂದಿಗೂ ತಪ್ಪಿಸಬಾರದು. ಇಂದಿನ ಒತ್ತಡದ ಬದುಕಿನಲ್ಲಿ ಕೆಲವರು ಉಪಾಹಾರವನ್ನೇ ತಿನ್ನುವುದಿಲ್ಲ. ಉಪಾಹಾರವು ದಿನದ ಪ್ರಮುಖ ಆಹಾರವಾಗಿರುವುದರಿಂದ ತಿಂಡಿ ತಿನ್ನುವುದು ಬಹಳ ಮುಖ್ಯ. ಬೆಳಗ್ಗೆ ತಿಂಡಿ ತಿನ್ನದಿದ್ದರೆ ದೇಹ ನಿಶ್ಯಕ್ತಿಯಿಂದ ಬಳಲಬಹುದು. ಅಲ್ಲದೆ, ತಿಂಡಿ ತಿನ್ನದೇ ಇರುವುದು ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಬಿಡುವಿಲ್ಲದಿದ್ದರೂ ಹೇಗಾದರೂ ಬೆಳಗ್ಗಿನ ಉಪಾಹಾರವನ್ನು ತಪ್ಪಿಸಬೇಡಿ. ದಿನಾ ಬೆಳಗ್ಗೆ ಏನು ತಿಂಡಿ ಮಾಡುವುದು ಎಂಬ ಯೋಚನೆಯಿದ್ದರೂ ಈ ರೆಸಿಪಿಗಳನ್ನು ಪ್ರಯತ್ನಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದಾದಂತಹ ತಿಂಡಿಗಳನ್ನು ತಯಾರಿಸಬಹುದು. ಅವಲಕ್ಕಿಯಿಂದ ಮೊಟ್ಟೆಯ ಭುರ್ಜಿಯವರೆಗೆ, ಕಡಿಮೆ ಸಮಯದ ಜತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾದ ಈ ರೆಸಿಪಿಗಳನ್ನು ಪ್ರಯತ್ನಿಸಿ. ಇಲ್ಲಿದೆ ಪಾಕವಿಧಾನ.

ಅವಲಕ್ಕಿ

ಅವಲಕ್ಕಿಯು ಆರೋಗ್ಯಕರ ಹಾಗೂ ಜನಪ್ರಿಯ ಭಾರತೀಯ ಉಪಾಹಾರಗಳಲ್ಲೊಂದಾಗಿದೆ. ಅವಲಕ್ಕಿಯನ್ನು ನೆನೆಸಿ ತಯಾರಿಸಲಾಗುತ್ತದೆ. ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಅರಿಶಿನ ಸೇರಿದಂತೆ ವಿವಿಧ ಪದಾರ್ಥಗಳೊಂದಿಗೆ ಬೆರೆಸಿ ಹುರಿಯಲಾಗುತ್ತದೆ. ಇದಕ್ಕೆ ನಿಂಬೆರಸ ಹಿಂಡಿದರೆ ರುಚಿ ಇನ್ನೂ ಚೆನ್ನಾಗಿರುತ್ತದೆ. ಖಾರ ಖಾದ್ಯ ಮಾತ್ರವಲ್ಲ, ಸಿಹಿ ಖಾದ್ಯವನ್ನು ಸಹ ಇದರಿಂದ ತಯಾರಿಸಬಹುದು. ತ್ವರಿತ ಮತ್ತು ಸುಲಭವಾಗಿ ತಯಾರಿಸಲಾಗುವ ಈ ತಿಂಡಿ, ಭಾರತದ ಅನೇಕ ಭಾಗಗಳಲ್ಲಿ ನೆಚ್ಚಿನ ಉಪಾಹಾರ ಭಕ್ಷ್ಯವಾಗಿದೆ. ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿರುವ ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ಓಟ್ಸ್ ಉಪ್ಮಾ

ಓಟ್ಸ್‌ನಲ್ಲಿ ನಾರಿನಂಶ ಹೆಚ್ಚಿದ್ದು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಓಟ್ಸ್ ಉಪ್ಮಾ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪ್ಮಾದ ರೂಪಾಂತರವಾಗಿದ್ದು, ಇದನ್ನು ರವೆ ಬದಲಿಗೆ ಓಟ್ಸ್‌ನಿಂದ ತಯಾರಿಸಲಾಗುತ್ತದೆ. ಇದು ಪೌಷ್ಟಿಕ ಮತ್ತು ತ್ವರಿತವಾಗಿ ತಯಾರಿಸಬಹುದಾದ ಖಾದ್ಯವಾಗಿದ್ದು, ಬೆಳಗ್ಗಿನ ಉಪಾಹಾರಕ್ಕೆ ಸೂಕ್ತವಾಗಿದೆ.

ಹೆಸರುಬೇಳೆ ದೋಸೆ

ಹೆಸರುಬೇಳೆಯಲ್ಲಿ ಪ್ರೋಟೀನ್ ಹಾಗೂ ಫೈಬರ್ ಅಧಿಕವಾಗಿದ್ದು, ಇದು ಉತ್ತಮ ಉಪಾಹಾರ ಆಯ್ಕೆಯಾಗಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸುವ ಸಾಮಾನ್ಯ ದೋಸೆಗಿಂತ ಭಿನ್ನವಾಗಿರುವ ಇದನ್ನು ಹೆಸರುಬೇಳೆಯಿಂದ ತಯಾರಿಸಲಾಗುತ್ತದೆ. ಬೆಳಗ್ಗಿನ ತಿಂಡಿಗೆ ಸೂಕ್ತವಾಗಿರುವ ಹೆಸರು ಬೇಳೆ ದೋಸೆಯನ್ನು ತಯಾರಿಸುವುದು ಕೂಡ ತುಂಬಾ ಸುಲಭ.

ಮೊಟ್ಟೆ ಭುರ್ಜಿ

ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮೊಟ್ಟೆ ತಿನ್ನುವುದು ಬಹಳ ಪ್ರಯೋಜನಕಾರಿ. ಬೆಳಗ್ಗೆ ತಿಂಡಿಗೆ ಮೊಟ್ಟೆ ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುವುದು ಮಾತ್ರವಲ್ಲದೆ ದೇಹಕ್ಕೆ ಶಕ್ತಿ ತುಂಬುತ್ತದೆ. ಬೇಯಿಸಿದ ಮೊಟ್ಟೆ ತಿನ್ನಲು ಬೇಜಾರಾದರೆ, ಇದರ ಭುರ್ಜಿ ಮಾಡಿ ತಿನ್ನಬಹುದು. ಇದು ಮೊಟ್ಟೆ, ಈರುಳ್ಳಿ, ಟೊಮೆಟೊ ಮತ್ತು ಮಸಾಲೆಗಳನ್ನು ಹಾಕಿ ತಯಾರಿಸಿದ ಸುವಾಸನೆಯ ಭಕ್ಷ್ಯವಾಗಿದೆ. ನೀವು ಅದನ್ನು ಹಾಗೆಯೇ ತಿನ್ನಬಹುದು ಅಥವಾ ರೊಟ್ಟಿ, ಪರೋಟ, ಚಪಾತಿ ಅಥವಾ ಬ್ರೆಡ್‌ನೊಂದಿಗೆ ತಿನ್ನಬಹುದು.

ಸ್ಮೂಥಿ

ಹಣ್ಣುಗಳು ಮತ್ತು ಬೀಜಗಳನ್ನು ಬೆರೆಸಿ ತಯಾರಿಸುವ ಸ್ಮೂಥಿಯು ರುಚಿಕರ ಮತ್ತು ಪೌಷ್ಟಿಕ ಪಾನೀಯವಾಗಿದೆ. ಬಾಳೆಹಣ್ಣು, ಸೇಬುಹಣ್ಣು ಅಥವಾ ಇತ್ಯಾದಿ ಹಣ್ಣುಗಳೊಂದಿಗೆ ಬೀಜಗಳನ್ನು ಬೆರೆಸಿ ಸವಿಯಬಹುದು. ಇದರಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇದು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ತರಕಾರಿ ಪರೋಟ

ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡಿದ ಪರೋಟ ತಿನ್ನುವುದು ಉತ್ತಮ. ಇವುಗಳು ನಾರಿನಂಶ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ. ಪಾಲಕ್, ಕ್ಯಾರೆಟ್ ಅಥವಾ ಆಲೂಗಡ್ಡೆ ಇತ್ಯಾದಿ ತರಕಾರಿಗಳಿಂದ ಪರೋಟ ತಯಾರಿಸಬಹುದು. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ತರಕಾರಿಗಳನ್ನು ಕತ್ತರಿಸಿ ಅಥವಾ ತುರಿದು ನಂತರ ಅದನ್ನು ಪರೋಟಾ ಮಧ್ಯಕ್ಕೆ ತುಂಬಿಸಿ ಮತ್ತೆ ಲಟ್ಟಿಸಬೇಕು. ಈ ಖಾದ್ಯವನ್ನು ಮೊಸರಿನೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ದಿನಾ ಬೆಳಗ್ಗೆ ಏನು ತಿಂಡಿ ಮಾಡುವುದು ಎಂಬ ಯೋಚನೆ ನಿಮಗಿದ್ದರೆ ಈ ಉಪಾಹಾರ ಭಕ್ಷ್ಯಗಳನ್ನು ಪ್ರಯತ್ನಿಸಬಹುದು. ಬಹಳ ಬೇಗನೆ ತಯಾರಾಗುವ ಈ ಖಾದ್ಯಗಳನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಇದರಿಂದ ದಿನಾ ಬೆಳಗ್ಗೆ ತಿಂಡಿ ತಿನ್ನದೆ ಕಚೇರಿಗೆ ಓಡುವುದು ತಪ್ಪುತ್ತದೆ.

Whats_app_banner