ಬೇಕರಿ ಶೈಲಿಯಲ್ಲಿ ತಯಾರಿಸಿ ತೆಂಗಿನಕಾಯಿ ಬನ್; ಮನೆಯಲ್ಲೇ ಮಾಡುವ ಸರಳ ವಿಧಾನವಿದು, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಕರಿ ಶೈಲಿಯಲ್ಲಿ ತಯಾರಿಸಿ ತೆಂಗಿನಕಾಯಿ ಬನ್; ಮನೆಯಲ್ಲೇ ಮಾಡುವ ಸರಳ ವಿಧಾನವಿದು, ಇಲ್ಲಿದೆ ಪಾಕವಿಧಾನ

ಬೇಕರಿ ಶೈಲಿಯಲ್ಲಿ ತಯಾರಿಸಿ ತೆಂಗಿನಕಾಯಿ ಬನ್; ಮನೆಯಲ್ಲೇ ಮಾಡುವ ಸರಳ ವಿಧಾನವಿದು, ಇಲ್ಲಿದೆ ಪಾಕವಿಧಾನ

ಬೇಕರಿಗಳಲ್ಲಿ ಸಿಗುವ ತೆಂಗಿನಕಾಯಿ ಬನ್ ಅಂದ್ರೆ ಬಹುತೇಕರು ಇಷ್ಟಪಟ್ಟು ತಿಂತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕರಿ ಶೈಲಿಯಲ್ಲಿ ತೆಂಗಿನಕಾಯಿ ಬನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕರಿ ಶೈಲಿಯಲ್ಲಿ ತಯಾರಿಸಿ ತೆಂಗಿನಕಾಯಿ ಬನ್
ಬೇಕರಿ ಶೈಲಿಯಲ್ಲಿ ತಯಾರಿಸಿ ತೆಂಗಿನಕಾಯಿ ಬನ್ (Amazon )

ಬೇಕರಿ ತಿಂಡಿಗಳನ್ನು ಇಷ್ಟಪಡದವರು ಬಹಳ ಕಡಿಮೆ. ಮಕ್ಕಳಿಗಂತೂ ಬೇಕರಿ ತಿಂಡಿಗಳೆಂದರೆ ಬಹಳ ಅಚ್ಚುಮೆಚ್ಚು. ವಯಸ್ಕರು ಕೂಡ ಬೇಕರಿ ತಿಂಡಿಗಳನ್ನು ಬಾಯಿಚಪ್ಪರಿಸಿಕೊಂಡು ತಿಂತಾರೆ. ಬೇಕರಿಗಳಲ್ಲಿ ಮಾರಾಟವಾಗುವ ವಿವಿಧ ರೀತಿಯ ಆಹಾರಗಳು ಇದಕ್ಕೆ ಕಾರಣ. ಸಿಹಿ ಆಹಾರದ ಜೊತೆಗೆ ಮಸಾಲೆ ಭಕ್ಷ್ಯಗಳು ಕೂಡ ಬೇಕರಿಗಳಲ್ಲಿ ಸಿಗುತ್ತವೆ. ಅದರಲ್ಲೂ ತೆಂಗಿನಕಾಯಿ ಬನ್ ಅಂದ್ರೆ ಬಹುತೇಕರು ಇಷ್ಟಪಟ್ಟು ತಿಂತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕರಿ ಶೈಲಿಯಲ್ಲಿ ತೆಂಗಿನಕಾಯಿ ಬನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ತೆಂಗಿನಕಾಯಿ ಬನ್ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೈದಾ- 2 ಕಪ್, ಬಿಸಿ ನೀರು- ಅರ್ಧ ಕಪ್, ಸಕ್ಕರೆ- 1 ಚಮಚ, ಉಪ್ಪು- ಚಿಟಿಕೆ, ಯೀಸ್ಟ್- 1 ಚಮಚ, ಎಣ್ಣೆ- 2 ಚಮಚ, ತೆಂಗಿನ ತುರಿ- 3 ಚಮಚ, ಒಣ ಹಣ್ಣುಗಳು- 4 ಚಮಚ, ಚೆರ್ರಿ- 6, ತುಪ್ಪ- 1 ಚಮಚ, ಪುಡಿ ಸಕ್ಕರೆ- 4 ಚಮಚ, ಹಾಲು- 4 ಚಮಚ, ಟೂಟಿ ಫ್ರೂಟಿ- ಅರ್ಧ ಕಪ್, ಬೆಣ್ಣೆ- 2 ಚಮಚ.

ಮಾಡುವ ವಿಧಾನ: ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಸಕ್ಕರೆ ಮತ್ತು ಯೀಸ್ಟ್ ಬೆರೆಸಿ 10 ನಿಮಿಷಗಳ ಕಾಲ ಮುಚ್ಚಿಡಿ. ನಂತರ, ಮೈದಾ, ಉಪ್ಪು, 2 ಚಮಚ ಬೆಣ್ಣೆಯನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜೊತೆಗೆ ಸ್ವಲ್ಪ ಹಾಲು ಬೆರೆಸಿ. ನಂತರ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ 1 ಗಂಟೆ ಕಾಲ ಮುಚ್ಚಿಡಿ.

ಒಂದು ಗಂಟೆಯ ನಂತರ ಮುಚ್ಚಳ ತೆಗೆದಾಗ ಹಿಟ್ಟು ಉಬ್ಬಿ ಬರುತ್ತದೆ. ನಂತರ ದಪ್ಪ ಉಂಡೆಯನ್ನು ತೆಗೆದುಕೊಂಡು ಮೈದಾ ಹಿಟ್ಟು ಹಾಕಿ ಚಪಾಟಿ ಲಟ್ಟಣಿಗೆಯಲ್ಲಿ ದಪ್ಪನೆ ಲಟ್ಟಿಸಿ.

ಈಗ ಒಲೆಯ ಮೇಲೆ ಕಡಾಯಿಯನ್ನು ಇರಿಸಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾದ ನಂತರ, ತೆಂಗಿನ ಪುಡಿಯನ್ನು ಹಾಕಿ ಹುರಿಯಿರಿ. ನಂತರ ಇದನ್ನು ಒಂದು ಬಟ್ಟಲಿಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಸಕ್ಕರೆ, ಒಣ ಹಣ್ಣುಗಳು, ಸಣ್ಣದಾಗಿ ಕತ್ತರಿಸಿದ ಚೆರ್ರಿ ಹಾಗೂ ಟೂಟಿ ಫ್ರೂಟಿ ಹಾಕಿ ಮಿಶ್ರಣ ಮಾಡಿ.

ಈಗ ಬಾಣಲೆಯನ್ನು ಒಲೆ ಮೇಲಿಟ್ಟು ಅದರಲ್ಲಿ ಲಟ್ಟಿಸಿದ ಹಿಟ್ಟನ್ನು ಹಾಕಿ. ಇದರ ಮೇಲೆ ತೆಂಗಿನತುರಿಯ ಮಿಶ್ರಣವನ್ನು ಸಮವಾಗಿ ಹರಡಿ. ಇದೀಗ ಮತ್ತೆ ದೊಡ್ಡ ಉಂಡೆಯನ್ನು ತೆಗೆದುಕೊಂಡು ಚಪಾತಿ ಲಟ್ಟಿಸುವಂತೆ ದಪ್ಪಗೆ ಲಟ್ಟಿಸಿ. ಇದನ್ನು ತೆಂಗಿನತುರಿ ಹರಡಿರುವ ಮಿಶ್ರಣದ ಮೇಲೆ ಇಟ್ಟು ಬೇಯಲು ಬಿಡಿ.

ಇದಕ್ಕೆ ಬೆಣ್ಣೆ ಅಥವಾ ತುಪ್ಪ ಸವರಿ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ನಂತರ ಇದರ ಮೇಲೆ ಸ್ವಲ್ಪ ಹಾಲನ್ನು ಸವರಿ ಮತ್ತೆ ಮುಚ್ಚಳವನ್ನು ಮುಚ್ಚಿ ಎರಡೂ ಬದಿ 25 ನಿಮಿಷಗಳ ಕಾಲ ಬೇಯಿಸಿ. ಇದು ತಣ್ಣಗಾದ ನಂತರ ತಿನ್ನಬಹುದು. ಬೇಕರಿ ಶೈಲಿಯಂತೆಯೇ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner