ರುಚಿಕರವಾದ ಬಟಾಣಿ ಚಾಟ್ ಈ ರೀತಿ ಮಾಡಿ: ಚಳಿಗಾಲಕ್ಕೆ ಪರ್ಫೆಕ್ಟ್ ತಿನಿಸು, ತಯಾರಿಸುವುದು ತುಂಬಾನೇ ಸಿಂಪಲ್
ಶೀತ ವಾತಾವರಣದಲ್ಲಿ ಬಿಸಿ ಬಿಸಿ ಏನನ್ನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಚುಮು ಚುಮು ಚಳಿಯಲ್ಲಿ ಮಸಾಲೆಯುಕ್ತ, ಬಿಸಿ ಬಿಸಿ ತಿನಿಸು ತಿನ್ನುತ್ತಾ ಇದ್ದರೆ ಅದರ ಮಜಾವೇ ಬೇರೆ. ಇದಕ್ಕಾಗಿ ಮನೆಯಲ್ಲೇ ಆರೋಗ್ಯಕರವಾಗಿ ಬಟಾಣಿ ಚಾಟ್ಸ್ ತಯಾರಿಸಿ ಸೇವಿಸಬಹುದು. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಇಲ್ಲಿದೆ ರೆಸಿಪಿ.
ಚಳಿಗಾಲದಲ್ಲಿ ವಾತಾವರಣ ತಂಪಾಗಿರುವಾಗ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಮಸಾಲೆಯುಕ್ತ, ಬಿಸಿ ಬಿಸಿ ತಿನಿಸು ತಿನ್ನುತ್ತಾ ಇದ್ದರೆ ಅದರ ಮಜಾವೇ ಬೇರೆ. ಇದಕ್ಕಾಗಿ ಸಂಜೆ ವೇಳೆಗೆ ಬಹುತೇಕ ಮಂದಿ ಚಾಟ್ಸ್ ತಿನ್ನಲು ಮುಂದಾಗುತ್ತಾರೆ. ಹೆಚ್ಚಾಗಿ ಹೊರಗೆ ತಳ್ಳೋ ಗಾಡಿಗಳಲ್ಲಿ ತಯಾರಿಸುವ ಚಾಟ್ಸ್ ಅನ್ನು ತಿನ್ನುವವರು ಅನೇಕರು. ಆದರೆ, ಮನೆಯಲ್ಲೇ ಆರೋಗ್ಯಕರವಾಗಿ ಬಟಾಣಿ ಚಾಟ್ಸ್ ತಯಾರಿಸಿ ಸೇವಿಸಬಹುದು. ಇದನ್ನು ಮಾಡುವುದು ತುಂಬಾನೇ ಸರಳ. ಇಲ್ಲಿದೆ ಪಾಕವಿಧಾನ.
ಬಟಾಣಿ ಚಾಟ್ ರೆಸಿಪಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಒಣ ಬಟಾಣಿ (ರಾತ್ರಿ ನೆನೆಸಿದ)- 2 ಕಪ್, ಎಣ್ಣೆ- 2 ಟೀ ಚಮಚ, ನೀರು- ಸುಮಾರು ಒಂದೂವರೆ ಲೀಟರ್, ಜೀರಿಗೆ- ಒಂದು ಟೀ ಚಮಚ, ಕಾಳುಮೆಣಸು- ಮೂರು, ಈರುಳ್ಳಿ (ತೆಳುವಾಗಿ ಕತ್ತರಿಸಿದ)- ಎರಡು, ಟೊಮೆಟೊ- ಎರಡು (ಹಣ್ಣಾಗಿರುವ), ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಜೀರಿಗೆ ಪುಡಿ- ಒಂದು ಟೀ ಚಮಚ, ಅರಿಶಿನ- ಅರ್ಧ ಟೀಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಆಮ್ಚೂರ್ ಪುಡಿ- ಕಾಲು ಟೀ ಚಮಚ, ಮೆಣಸಿನ ಪುಡಿ- ಒಂದು ಟೀ ಚಮಚ, ಕಪ್ಪು ಉಪ್ಪು- ¼ ಟೀ ಚಮಚ, ಚಾಟ್ ಮಸಾಲೆ- ಒಂದು ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ರಾತ್ರಿಯಿಡೀ ನೆನೆಸಿದ (ಕನಿಷ್ಠ 7 ಗಂಟೆಗಳ) ಬಟಾಣಿಗಳನ್ನು ಮೊದಲು ಬೇಯಿಸಬೇಕು. ಕುಕ್ಕರ್‌ನಲ್ಲಿ ಒಂದು ಲೀಟರ್ ನೀರು ಹಾಕಿ ಬೇಯಿಸಿ.
- ಬಟಾಣಿಯನ್ನು ಐದು ಅಥವಾ ಆರು ಬಾರಿ ಶಿಳ್ಳೆ ಬರುವವರೆಗೆ ಬೇಯಿಸಿ. ಬಟಾಣಿಗಳನ್ನು ಮೃದುವಾಗಿ ಬೇಯಿಸಿದ ನಂತರ ಮ್ಯಾಶ್ ಮಾಡಿ.
- ಸ್ಟೌವ್ ಮೇಲೆ ಪ್ಯಾನ್ ಇಟ್ಟು ಮೊದಲಿಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಮತ್ತು ಕರಿಮೆಣಸು ಹಾಕಿ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ಅದರ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಸ್ವಲ್ಪ ಸಮಯ ಫ್ರೈ ಮಾಡಿ.
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಸಿ ವಾಸನೆ ಹೋದ ಮೇಲೆ ಕತ್ತರಿಸಿದ ಟೊಮೆಟೊಗಳನ್ನು ಹಾಕಿ ತಿರುಳಾಗುವವರೆಗೆ ಹುರಿಯಿರಿ.
- ನಂತರ ಉಪ್ಪು, ಜೀರಿಗೆ ಪುಡಿ, ಅರಿಶಿನ, ಧನಿಯಾ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲೆ ಮತ್ತು ಮೆಣಸಿನಕಾಯಿಯನ್ನು ಸೇರಿಸಿ. ಕಪ್ಪು ಉಪ್ಪು ಸೇರಿಸಿ ಸ್ವಲ್ಪ ಸಮಯ ಫ್ರೈ ಮಾಡಿ.
- ನಂತರ ಅದರಲ್ಲಿ ಬೇಯಿಸಿದ ಬಟಾಣಿ ಸೇರಿಸಿ. ಅವು ಬೇಯಿಸಿದ ನಂತರ, ಕುಕ್ಕರ್‌ನಲ್ಲಿ ಉಳಿದ ನೀರನ್ನು ಸಹ ಪ್ಯಾನ್‌ಗೆ ಸೇರಿಸಬೇಕು. ಸುಮಾರು 200 ಮಿಲಿ ಲೀಟರ್ ನೀರನ್ನು ಸೇರಿಸಿ.
- ಚೆನ್ನಾಗಿ ಬೇಯಿಸಿದರೆ, ಬಟಾಣಿಕಾಳು ತಿನ್ನಲು ಸಿಗುವುದಿಲ್ಲ. ಹೀಗಾಗಿ ಮಧ್ಯಮ ಉರಿಯಲ್ಲಿ ಇದನ್ನು ಬೇಯಿಸಿ. ಚೆನ್ನಾಗಿ ಬೆಂದ ನಂತರ ಕೆಳಗಿಳಿಸಬೇಕು. ಅಷ್ಟೇ, ಬಟಾಣಿ ಚಾಟ್ ಸಿದ್ಧವಾಗಿದೆ.
- ಬಟಾಣಿ ಚಾಟ್ ಮೇಲೆ ತೆಳುವಾಗಿ ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿ ಮತ್ತು ನಿಂಬೆ ರಸವನ್ನು ಸೇರಿಸಿ. ಇದು ಹೆಚ್ಚು ರುಚಿಕರವಾಗಿರುತ್ತದೆ. ಈ ಚಾಟ್ ಅದರ ಮಸಾಲೆ ಮತ್ತು ಹುಳಿ ರುಚಿಯೊಂದಿಗೆ ತಿನ್ನಲು ಸಖತ್ ಆಗಿರುತ್ತದೆ.