ಹೆಸರುಬೇಳೆ, ಕಡಲೆಬೇಳೆ ಪಾಯಸ ತಿಂದಿರುವಿರಿ ಸೋರೆಕಾಯಿ ಪಾಯಸ ಸವಿದಿದ್ದೀರಾ: ಒಮ್ಮೆ ಮಾಡಿ ನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹೆಸರುಬೇಳೆ, ಕಡಲೆಬೇಳೆ ಪಾಯಸ ತಿಂದಿರುವಿರಿ ಸೋರೆಕಾಯಿ ಪಾಯಸ ಸವಿದಿದ್ದೀರಾ: ಒಮ್ಮೆ ಮಾಡಿ ನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ

ಹೆಸರುಬೇಳೆ, ಕಡಲೆಬೇಳೆ ಪಾಯಸ ತಿಂದಿರುವಿರಿ ಸೋರೆಕಾಯಿ ಪಾಯಸ ಸವಿದಿದ್ದೀರಾ: ಒಮ್ಮೆ ಮಾಡಿ ನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ

ಹೆಸರುಬೇಳೆ ಪಾಯಸ, ಕಡಲೆಬೇಳೆ ಪಾಯಸ, ಶ್ಯಾವಿಗೆ ಪಾಯಸ, ಖರ್ಜೂರ ಪಾಯಸ, ಗೋಧಿ ಪಾಯಸ ಇವೆಲ್ಲಾ ತಿಂದಿರಬಹುದು. ಎಂದಾದರೂ ಸೋರೆಕಾಯಿ ಪಾಯಸ ತಿಂದಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ತುಂಬಾನೇ ಸುಲಭ. ಒಮ್ಮೆ ಮಾಡಿ ನೋಡಿ ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಸೋರೆಕಾಯಿ ಪಾಯಸ ತಿಂದಿದ್ದೀರಾ: ಒಮ್ಮೆ ಮಾಡಿನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ (ಸಾಂಕೇತಿಕ ಚಿತ್ರ)
ಸೋರೆಕಾಯಿ ಪಾಯಸ ತಿಂದಿದ್ದೀರಾ: ಒಮ್ಮೆ ಮಾಡಿನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ (ಸಾಂಕೇತಿಕ ಚಿತ್ರ) (Canva/Slurrp)

ಹೆಸರುಬೇಳೆ ಪಾಯಸ, ಕಡಲೆಬೇಳೆ ಪಾಯಸ, ಶ್ಯಾವಿಗೆ ಪಾಯಸ, ಖರ್ಜೂರ ಪಾಯಸ, ಗೋಧಿ ಪಾಯಸ ಇವೆಲ್ಲಾ ತಿಂದಿರಬಹುದು. ಆದರೆ, ಎಂದಾದರೂ ಸೋರೆಕಾಯಿ ಪಾಯಸ ತಿಂದಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಆರೋಗ್ಯಕ್ಕೂ ಉತ್ತಮವಾದ ಸೋರೆಕಾಯಿಯಿಂದ ಪಾಯಸ ಮಾಡುವುದು ತುಂಬಾನೇ ಸುಲಭ. ಸೋರೆಕಾಯಿ ಕೇವಲ ಸಾಂಬಾರ್, ಪಲ್ಯ ಮಾಡಲು ಮಾತ್ರ ಸೀಮಿತವಲ್ಲ. ಇದರಿಂದ ರುಚಿಕರವಾದ ಪಾಯಸ ತಯಾರಿಸಬಹುದು. ಒಮ್ಮೆ ಮಾಡಿ ನೋಡಿ ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಖಂಡಿತ ಮನೆಮಂದಿಗೆಲ್ಲ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಸೋರೆಕಾಯಿ ಪಾಯಸ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸೋರೆಕಾಯಿ ಪಾಯಸ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸೋರೆಕಾಯಿ (ಚಿಕ್ಕದು)- 1, ಅಕ್ಕಿ- ಅರ್ಧ ಕಪ್, ತೆಂಗಿನ ತುರಿ- 1 ಕಪ್, ಬೆಲ್ಲ- 1 ಕಪ್, ಏಲಕ್ಕಿ- 3, ತುಪ್ಪ- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಸೋರೆಕಾಯಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆಯಿರಿ.

- ಅಕ್ಕಿಯನ್ನು ಸ್ವಲ್ಪ ಸಮಯ (ಅರ್ಧ ಅಥವಾ 1 ಗಂಟೆ) ನೀರಿನಲ್ಲಿ ನೆನೆಸಿಡಿ.

- ಸೋರೆಕಾಯಿಯ ಬೀಜಗಳನ್ನು ಹೊರತೆಗೆದು ಚಿಕ್ಕದಾಗಿ ಕತ್ತರಿಸಿ.

- ಒಂದು ಪಾತ್ರೆಗೆ ಕತ್ತರಿಸಿದ ಸೋರೆಕಾಯಿಯನ್ನು ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ.

- ಈ ವೇಳೆ ತೆಂಗಿನಕಾಯಿಯನ್ನು ತುರಿಯಿರಿ. ಬೇಕಿದ್ದರೆ 2 ಕಪ್‍ನಷ್ಟು ತೆಂಗಿನಕಾಯಿ ತುರಿಯಬಹುದು.

- ತೆಂಗಿನತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ಅದರ ಹಾಲು ತೆಗೆದು ಪಕ್ಕಕ್ಕೆ ಇಡಿ.

- ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.

- ಸೋರೆಕಾಯಿ ಬೆಂದ ನಂತರ ತಣ್ಣಗಾಗಿಸಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ (ರುಬ್ಬಿಕೊಳ್ಳದೆ ಹಾಗೆಯೇ ಸಹ ಮಾಡಬಹುದು, ಸೋರೆಕಾಯಿಯನ್ನು ತುಂಬಾ ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ಇದನ್ನು ಸೋರೆಕಾಯಿ ಗಂಜಿ ಎನ್ನುತ್ತಾರೆ)

- ರುಬ್ಬಿರುವ ಸೋರೆಕಾಯಿ ಹಾಗೂ ಅಕ್ಕಿಯ ಮಿಶ್ರಣವನ್ನು ಮತ್ತೆ ಪಾತ್ರೆಗೆ ಹಾಕಿ ಕರಗಿಸಿದ ಬೆಲ್ಲ ಹಾಕಿ.

- ನಂತರ ತೆಂಗಿನಕಾಯಿ ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ.

- ಚೆನ್ನಾಗಿ ಕುದಿ ಬಂದಾಗ ಏಲಕ್ಕಿಯನ್ನು ಪುಡಿ ಮಾಡಿ ಸೇರಿಸಿ. ಜತೆಗೆ 2 ರಿಂದ 3 ಚಮಚ ತುಪ್ಪ ಸಹ ಸೇರಿಸಬಹುದು.

- ಇಷ್ಟು ಮಾಡಿದರೆ ರುಚಿಕರವಾದ ಸೋರೆಕಾಯಿ ಪಾಯಸ ಸವಿಯಲು ಸಿದ್ಧ.

ಸೋರೆಕಾಯಿ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ನೀರಿನಾಂಶ ಹೆಚ್ಚಿರುವುದರಿಂದ ದೇಹವನ್ನು ತೇವಾಂಶಯುಕ್ತವಾಗಿರಿಸಲು ಸಹಕಾರಿ. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಜೀರ್ಣಕಾರಿ ಆರೋಗ್ಯ, ಹೃದಯದ ಆರೋಗ್ಯ, ಚರ್ಮದ ಆರೋಗ್ಯ, ರೋಗನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ ಅನೇಕ ಪ್ರಯೋಜನಗಳಿವೆ.

ಸೋರೆಕಾಯಿಯಿಂದ ಸಾಂಬಾರ್, ಪಲ್ಯ ಕೂಡ ತಯಾರಿಸಬಹುದು. ಇದರ ಪಾಯಸ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮಾಡುವುದು ಕೂಡ ಬಹಳ ಸುಲಭ. ಒಮ್ಮೆ ಈ ರೆಸಿಪಿ ಮಾಡಿ ನೋಡಿ, ಖಂಡಿತ ನಿಮಗೆ ಇಷ್ಟವಾಗಬಹುದು. ಸಿಹಿ ಜಾಸ್ತಿ ಬೇಕು ಅಂತಿದ್ದಲ್ಲಿ ಇನ್ನು ಸ್ವಲ್ಪ ಹೆಚ್ಚಿಗೆ ಬೆಲ್ಲವನ್ನು ಹಾಕಬಹುದು. ಹೆಸರುಬೇಳೆ, ಕಡ್ಲೇಬೇಳೆ, ಶ್ಯಾವಿಗೆ ಪಾಯಸ ಮಾಡಿ ಬೇಜಾರಾಗಿದ್ದರೆ ಇದನ್ನು ಪ್ರಯತ್ನಿಸಿ.

Whats_app_banner