ಮಾಂಸಾಹಾರ ತಿನ್ನುವುದಿಲ್ಲವಾದರೆ ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಆಲೂಗಡ್ಡೆ ಫ್ರೈ: ಮನೆಮಂದಿಯೆಲ್ಲಾ ಬಾಯಿಚಪ್ಪರಿಸಿಕೊಂಡು ತಿಂತಾರೆ
ಆಲೂಗಡ್ಡೆಯಿಂದ ಹಲವಾರು ಪಾಕವಿಧಾನವನ್ನು ಮಾಡಬಹುದು. ಅದರಲ್ಲೂ ಬರುವ ಕಾರ್ತಿಕ ಮಾಸ ಶುರುವಾದಾಗಿನಿಂದ ಮುಂಬರುವ ಷಷ್ಠಿವರೆಗೆ ಹಲವು ಮಂದಿ ಮಾಂಸಾಹಾರ ತಿನ್ನುವುದಿಲ್ಲ. ಹೀಗಾಗಿ ವಿಭಿನ್ನವಾಗಿ ಪಾಕವಿಧಾನ ಪ್ರಯತ್ನಿಸುವಿರಾದರೆ ಚೆಟ್ಟಿನಾಡ್ ಶೈಲಿಯಲ್ಲಿ ಆಲೂಗಡ್ಡೆ ಫ್ರೈ ರೆಸಿಪಿಯನ್ನು ಮಾಡಬಹುದು. ಇಲ್ಲಿದೆ ಪಾಕವಿಧಾನ.
ಆಲೂಗಡ್ಡೆ ಫ್ರೈ ಅಥವಾ ಆಲೂ ಫ್ರೈ ಇದು ಅನೇಕರ ನೆಚ್ಚಿನ ಖಾದ್ಯ. ಕಾರ್ತಿಕ ಮಾಸದಲ್ಲಿ ಹಲವು ಮಂದಿ ಮಾಂಸಾಹಾರ ಸೇವನೆ ಮಾಡುವುದಿಲ್ಲವಾದ್ದರಿಂದ ತರಕಾರಿಗಳಲ್ಲಿ ಏನಾದರೂ ವಿಭಿನ್ನವಾಗಿ ಪ್ರಯತ್ನಿಸಲು ಮುಂದಾಗುತ್ತಾರೆ. ನೀವೂ ಏನಾದರೂ ಪ್ರಯತ್ನಿಸುತ್ತಿದ್ದರೆ ಆಲೂಗಡ್ಡೆ ಫ್ರೈ ರೆಸಿಪಿಯನ್ನು ಟ್ರೈ ಮಾಡಬಹುದು. ಇದನ್ನು ಊಟದ ಜತೆ ಸೈಡ್ ಡಿಶ್ ಆಗಿಯೂ ಸವಿಯಬಹುದು. ಆದರೆ, ಯಾವಾಗಲೂ ಒಂದೇ ರೀತಿ ಮಾಡುವ ಬದಲು ಚೆಟ್ಟಿನಾಡು ಶೈಲಿಯಲ್ಲಿ ಆಲೂ ಫ್ರೈ ಮಾಡಬಹುದು. ಈ ಪಾಕವಿಧಾನ ಖಂಡಿತಾ ನಿಮಗೆ ಇಷ್ಟವಾಗಬಹುದು. ಮಕ್ಕಳಂತೂ ತುಂಬಾ ಇಷ್ಟಪಟ್ಟು ತಿಂತಾರೆ. ಮನೆಗೆ ಅತಿಥಿಗಳು ಬಂದಾಗ ಈ ರೆಸಿಪಿಯನ್ನು ಮಾಡಿ ಬಡಿಸಬಹುದು. ಬಹಳ ಸರಳವಾಗಿ ತಯಾರಿಸಬಹುದಾದ ಚೆಟ್ಟಿನಾಡ್ ಶೈಲಿಯ ಆಲೂ ಫ್ರೈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
ಚೆಟ್ಟಿನಾಡ್ ಶೈಲಿಯ ಆಲೂಗಡ್ಡೆ ಫ್ರೈ ರೆಸಿಪಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಆಲೂಗಡ್ಡೆ- ಅರ್ಧ ಕೆ.ಜಿ, ಕರಿಬೇವು- 10 ರಿಂದ 12, ಜೀರಿಗೆ- ಒಂದು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಅರಿಶಿನ- ಕಾಲು ಟೀ ಚಮಚ, ಎಣ್ಣೆ- ಸಾಕಷ್ಟು, ಒಣಮೆಣಸು- ಆರು, ಮರಾಠಿ ಮೊಗ್ಗು- ಒಂದು, ನಕ್ಷತ್ರ ಮೊಗ್ಗು- ಒಂದು, ಲವಂಗ- ಐದು, ದಾಲ್ಚಿನ್ನಿ- ಸಣ್ಣ ತುಂಡು, ಉದ್ದಿನ ಬೇಳೆ- ಒಂದು ಟೀ ಚಮಚ, ಕಡಲೆಬೇಳೆ- ಒಂದು ಟೀ ಚಮಚ, ಕೊತ್ತಂಬರಿ- ಎರಡು ಟೀ ಚಮಚ, ಸೋಂಪು- ಒಂದು ಟೀ ಚಮಚ
ಮಾಡುವ ವಿಧಾನ: ಸ್ಟೌವ್ ಮೇಲೆ ಪ್ಯಾನ್ ಇಟ್ಟು ಕೊತ್ತಂಬರಿ, ಉದ್ದಿನಬೇಳೆ ಮತ್ತು ಕಡಲೆಬೇಳೆಯನ್ನು ಹುರಿಯಿರಿ.
- ನಂತರ ಸೋಂಪು, ದಾಲ್ಚಿನ್ನಿ, ಲವಂಗ, ಸೋಂಪು, ಮರಾಠಿ ಮೊಗ್ಗು ಮತ್ತು ಕೆಂಪು (ಒಣ) ಮೆಣಸಿನಕಾಯಿಗಳನ್ನು ಹುರಿದು ಮಿಕ್ಸಿಗೆ ಸೇರಿಸಿ, ಪುಡಿ ಮಾಡಿ ಪಕ್ಕಕ್ಕೆ ಇರಿಸಿ.
- ಈಗ ಒಲೆಯ ಮೇಲೆ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ನಂತರ ಕರಿಬೇವಿನ ಎಲೆ ಸೇರಿಸಿ. ಜತೆಗೆ ಅರಿಶಿನವನ್ನು ಹಾಕಿ ಫ್ರೈ ಮಾಡಿ.
- ಆಲೂಗಡ್ಡೆಯನ್ನು ಮೊದಲೇ ಕುದಿಸಿ, ಸಿಪ್ಪೆ ತೆಗೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
- ಈಗ ಆಲೂಗಡ್ಡೆ ತುಂಡುಗಳನ್ನು ಅರಿಶಿನ ಎಣ್ಣೆಗೆ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ.
- ಮೇಲ್ಭಾಗವನ್ನು ಮುಚ್ಚಿ, 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಡಿ, ನಂತರ ಮುಚ್ಚಳ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಉಪ್ಪನ್ನು ಚೆನ್ನಾಗಿ ಕಲಸಿದ ನಂತರ ಮಸಾಲೆ ಪುಡಿಯನ್ನು ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಇನ್ನೊಂದು ಐದು ನಿಮಿಷ ಕಡಿಮೆ ಉರಿಯಲ್ಲಿ ಮುಚ್ಚಿ ಬೇಯಿಸಿದರೆ ಚೆಟ್ಟಿನಾಡ್ ಆಲೂ ಫ್ರೈ ರೆಡಿ. ಈ ಖಾದ್ಯ ತುಂಬಾ ರುಚಿಕರವಾಗಿರುತ್ತದೆ.
ಆಲೂಗಡ್ಡೆ ಫ್ರೈಗಳನ್ನು ಹೇಗೆ ಮಾಡಿದರೂ ರುಚಿಕರವಾಗಿರುತ್ತದೆ. ಆದರೆ, ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿದರೆ ರುಚಿ ಇಮ್ಮಡಿಯಾಗುತ್ತದೆ. ಆದರೆ, ಆಲೂಗಡ್ಡೆಯನ್ನು ತುಂಬಾ ಮೃದುವಾಗಿ ಬೇಯಿಸಬಾರದು. ಹೀಗಾಗಿ ಆಲೂಗಡ್ಡೆಯನ್ನು ಶೇ. 80 ರಷ್ಟು ಬೇಯಿಸಿ. ಉಳಿದ ಶೇ. 20ರಷ್ಟನ್ನು ಹುರಿಯುವಾಗ ಬೇಯಿಸಲಾಗುತ್ತದೆ. ಆಲೂಗಡ್ಡೆ ತುಂಡುಗಳನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿ. ತುಂಬಾ ದೊಡ್ಡದಾಗಿಯೂ ಅಲ್ಲ ಮತ್ತು ತುಂಬಾ ಚಿಕ್ಕದಾಗಿಯೂ ಕತ್ತರಿಸದಿರಿ. ಹೀಗೆ ಮಾಡಿದರೆ ಮಾತ್ರ ಚೆಟ್ಟಿನಾಡು ಆಲೂ ಫ್ರೈ ರುಚಿಯಾಗಿರುತ್ತದೆ.
ವಿಭಾಗ