ಬಾಯಲ್ಲಿ ನೀರೂರುವ ಚಿಕನ್ ಶೇರ್ವಾ ರೆಸಿಪಿ ಮಾಡುವುದು ತುಂಬಾ ಸಿಂಪಲ್: ಇಲ್ಲಿದೆ ಪಾಕವಿಧಾನ
ಚಿಕನ್ ಶೇರ್ವಾ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರೂರಬಹುದು. ಬಹುತೇಕರು ಇದನ್ನು ಹೋಟೆಲ್‍ಗಳಲ್ಲಿ ಸವಿಯುವುದೇ ಹೆಚ್ಚು. ಆದರೆ, ಮನೆಯಲ್ಲೇ ಸುಲಭವಾಗಿ ಈ ರೆಸಿಪಿ ಮಾಡಬಹುದು. ಚಪಾತಿ ಮತ್ತು ರೊಟ್ಟಿಯೊಂದಿಗೆ ತಿನ್ನಲು ಇದು ಬಹಳ ರುಚಿಕರವಾಗಿರುತ್ತದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಚಿಕನ್ ಪ್ರಿಯರು ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ, ಚಿಕನ್ ಶೇರ್ವಾ ಮಾಡುವುದು ಕಷ್ಟ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ, ಇದನ್ನು ಬಹಳ ಸುಲಭವಾಗಿ ಮಾಡಬಹುದು. ತೆಲಂಗಾಣ, ಆಂಧ್ರ ಮಾತ್ರವಲ್ಲದೆ ತಮಿಳುನಾಡು, ಕೇರಳದಲ್ಲೂ ಚಿಕನ್ ಶೇರ್ವಾ ಪ್ರಿಯವಾಗಿದೆ. ತಮಿಳುನಾಡು, ಕೇರಳ ಮತ್ತು ಆಂಧ್ರದ ಕೆಲವು ಭಾಗಗಳಲ್ಲಿ ಇದನ್ನು ಸಾಲ್ನಾ ಎಂದೂ ಕರೆಯುತ್ತಾರೆ. ತೆಲಂಗಾಣದಲ್ಲಿ ಇದನ್ನು ಚಿಕನ್ ಶೇರ್ವಾ ಎಂದೇ ಕರೆಯುತ್ತಾರೆ. ಈ ಚಿಕನ್ ಶೇರ್ವಾ ರೆಸಿಪಿಯನ್ನು ಚಪಾತಿ, ರೊಟ್ಟಿಯೊಂದಿಗೆ ತಿಂದರೆ ರುಚಿಯೇ ಬೇರೆ. ಸ್ವಲ್ಪ ಖಾರ ಹೆಚ್ಚು ಮಾಡಿದರೆ ಚಳಿಗಾಲದಲ್ಲಿ ಇನ್ನೂ ಹೆಚ್ಚು ತಿನ್ನಬೇಕೆನಿಸುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತ್ವರಿತವಾಗಿ, ಸುಲಭವಾಗಿ ಮಾಡಬಹುದಾದ ಈ ಪಾಕವಿಧಾನ ಇಲ್ಲಿದೆ.
ಚಿಕನ್ ಶೇರ್ವಾ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಚಿಕನ್- ಅರ್ಧ ಕೆಜಿ, ಈರುಳ್ಳಿ- ಎರಡು, ಬಿರಿಯಾನಿ ಎಲೆ- 2, ನೀರು- ಒಂದೂವರೆ ಕಪ್, ಹಸಿಮೆಣಸು- 4, ತುರಿದ ಹಸಿ ತೆಂಗಿನಕಾಯಿ- ಅರ್ಧ ಕಪ್, ಎಣ್ಣೆ- ಸಾಕಷ್ಟು, ಟೊಮೆಟೊ- ಎರಡು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಎರಡು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ದಾಲ್ಚಿನ್ನಿ- ಸಣ್ಣ ತುಂಡು, ಏಲಕ್ಕಿ- ಮೂರು, ಸೋಂಪು- ಒಂದು ಟೀ ಚಮಚ, ಲವಂಗ- ನಾಲ್ಕು, ಕೊತ್ತಂಬರಿ ಪುಡಿ- ಒಂದೂವರೆ ಟೀ ಚಮಚ, ಮೆಣಸಿನಪುಡಿ- ಎರಡು ಟೀ ಚಮಚ, ಚಿಕನ್ ಮಸಾಲೆ ಪುಡಿ- ಒಂದು ಟೀ ಚಮಚ, ಪುದೀನಾ ಎಲೆ- 4 ಟೀ ಚಮಚದಷ್ಟು, ಅರಿಶಿನ- ಅರ್ಧ ಟೀ ಚಮಚ, ಗಸಗಸೆ- 1 ಚೀ ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ಕಸೂರಿ ಮೇತಿ- ಅರ್ಧ ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಬಿರಿಯಾನಿ ಎಲೆ, ಲವಂಗ, ಸೋಂಪು, ಕಾಳಮೆಣಸು, ಏಲಕ್ಕಿ, ಗಸಗಸೆ, ಕಸೂರಿಮೇತಿ, ದಾಲ್ಚಿನ್ನಿ, ಏಲಕ್ಕಿ ಹಾಕಿ ಹುರಿದು ಪಕ್ಕಕ್ಕೆ ಇರಿಸಿ.
- ತೆಂಗಿನ ತುರಿಯನ್ನು ಫ್ರೈ ಮಾಡಿ ಪಕ್ಕಕ್ಕೆ ಇರಿಸಿ. ನಂತರ ಗೋಡಂಬಿಯನ್ನು ಫ್ರೈ ಮಾಡಿ.
- ಪ್ಯಾನ್‍ಗೆ 2 ಟೀ ಚಮಚ ಎಣ್ಣೆ ಹಾಕಿ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ.
- ಈ ಎಲ್ಲಾ ಹುರಿದ ಮಸಾಲೆಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
- ನಂತರ ಒಂದು ಕಡಾಯಿಗೆ 4 ರಿಂದ 5 ಟೀ ಚಮಚ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ¼ ಟೀ ಚಮಚ ಸೋಂಪು, ಅರ್ಧ ಚೆಕ್ಕೆ, 2 ಲವಂಗ, 1 ಬಿರಿಯಾನಿ ಎಲೆ, ಹಸಿಮೆಣಸಿನಕಾಯಿ, ಈರುಳ್ಳಿ ಸ್ವಲ್ಪ ಹಾಕಿ ಫ್ರೈ ಮಾಡಿ.
- ಇದಕ್ಕೆ ಚಿಕನ್ ತುಂಡುಗಳನ್ನು ಹಾಕಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
- ಶುಂಠಿ-ಬೆಳ್ಳುಳ್ಳಿ ಹಸಿವಾಸನೆ ಹೋದ ನಂತರ ಕಾಲು ಟೀ ಚಮಚ ಅರಶಿನ ಹಾಗೂ ಗರಂ ಮಸಾಲೆ, 1 ಟೀ ಚಮಚ ಕೊತ್ತಂಬರಿ ಪುಡಿ, 1 ಟೀ ಚಮಚ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಈ ಮಸಾಲೆಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಮಿಕ್ಸಿ ಜಾರಿನಲ್ಲಿ ರುಬ್ಬಿರುವ ಮಿಶ್ರಣವನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ. 5 ರಿಂದ ಆರು ನಿಮಿಷ ಕುದಿಸಿ.
- ಚೆನ್ನಾಗಿ ಕುದಿದ ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪನ್ನು ಸೇರಿಸಿ ಮತ್ತೆ ಚೆನ್ನಾಗಿ 5 ನಿಮಿಷ ಕಾಲ ಕುದಿಸಿದರೆ ರುಚಿಕರವಾದ ಚಿಕನ್ ಶೇರ್ವಾ ರೆಸಿಪಿ ಸವಿಯಲು ಸಿದ್ಧ.