ಈ ಚಳಿಗೆ ಕೊತ್ತಂಬರಿ ಚಿಕನ್ ರೋಸ್ಟ್ ಮಾಡಿ ನೋಡಿ: ರುಚಿ ಅದ್ಭುತ, ಎಲ್ಲರೂ ಇಷ್ಟಪಟ್ಟು ತಿಂತಾರೆ- ಇಲ್ಲಿದೆ ರೆಸಿಪಿ
ಚಿಕನ್ ಪ್ರಿಯರು ಹೊಸ ರುಚಿಗಳಿಗಾಗಿ ಕಾಯುತ್ತಿರುತ್ತಾರೆ. ಚಿಕನ್ ಸಾಂಬಾರ್‌ಗಿಂತ ಚಿಕನ್ ಘೀ ರೋಸ್ಟ್, ಸುಕ್ಕ, ಡ್ರೈ ರೋಸ್ಟ್, ಪೆಪ್ಪರ್ ಫ್ರೈ ಹೀಗೆ ವಿಧ-ವಿಧವಾದ ಖಾದ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಈ ಚಳಿಗೆ ಬಿಸಿಬಿಸಿ, ಖಾರಖಾರವಾದಂತಹ ಏನಾದರೂ ತಿನ್ನಬೇಕು ಅನಿಸಿದರೆ ಡಿಫರೆಂಟ್ ಆಗಿ ಕೊತ್ತಂಬರಿ ಚಿಕನ್ ರೋಸ್ಟ್ ಮಾಡಿ ನೋಡಿ. ಇಲ್ಲಿದೆ ರೆಸಿಪಿ.
ಕೆಲವರಿಗೆ ಎಷ್ಟೇ ಚಿಕನ್ ತಿಂದರೂ ಬೇಜಾರಾಗುವುದಿಲ್ಲ. ದಿನವೂ ಚಿಕನ್ ತಿನ್ನುವವರಿದ್ದಾರೆ. ಚಿಕನ್ ಖಾದ್ಯಗಳಲ್ಲಿ ಹಲವು ವೆರೈಟಿ ಮಾಡಬಹುದು. ಚಿಕನ್ ಸುಕ್ಕ, ಚಿಕನ್ ಘೀ ರೋಸ್ಟ್, ಚಿಕನ್ ಪೆಪ್ಪರ್ ಫ್ರೈ ಹೀಗೆ ಹಲವಾರು ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಆದರೆ, ಕೊತ್ತಂಬರಿ ಚಿಕನ್ ರೋಸ್ಟ್ ಎಂದಾದರೂ ಮಾಡಿದ್ದೀರಾ? ಇಲ್ಲವಾದಲ್ಲಿ ನಿಮಗಾಗಿ ಇಲ್ಲಿ ರೆಸಿಪಿಯನ್ನು ನೀಡಲಾಗಿದೆ. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಸೈಡ್ ಡಿಶ್ ಆಗಿಯೂ ಸವಿಯಬಹುದು, ಚಪಾತಿ, ರೊಟ್ಟಿ ಅಥವಾ ಅನ್ನದ ಜತೆಯೂ ತಿನ್ನಬಹುದು. ಈ ಚಳಿಗೆ ಬಿಸಿಬಿಸಿ, ಖಾರಖಾರವಾದಂತಹ ಏನಾದರೂ ತಿನ್ನಬೇಕು ಅನಿಸಿದರೆ ಡಿಫರೆಂಟ್ ಆಗಿ ಕೊತ್ತಂಬರಿ ಚಿಕನ್ ರೋಸ್ಟ್ ಮಾಡಿ ನೋಡಿ. ಈ ಕೊತ್ತಂಬರಿ ಚಿಕನ್ ರೋಸ್ಟ್ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಕೊತ್ತಂಬರಿ ಚಿಕನ್ ರೋಸ್ಟ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಚಿಕನ್ (ಕೋಳಿ ಮಾಂಸ)- ಅರ್ಧ ಕೆ.ಜಿ, ಮೆಣಸಿನಪುಡಿ- ಒಂದು ಟೀ ಚಮಚ, ಅರಿಶಿನ- ಕಾಲು ಟೀ ಚಮಚ, ಗರಂ ಮಸಾಲೆ- ಒಂದು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಎರಡು ಟೀ ಚಮಚ, ಕೊತ್ತಂಬರಿ ಪುಡಿ- 3/4 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ.
ರೆಸಿಪಿ ಮಾಡುವ ವಿಧಾನ: ಚಿಕನ್ ತುಂಡುಗಳನ್ನು ಮಧ್ಯಮ ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಸ್ವಚ್ಛವಾಗಿ ತೊಳೆದು ಬೌಲ್‍ನಲ್ಲಿ ಹಾಕಿ.
- ಅದೇ ಬಟ್ಟಲಿನಲ್ಲಿ ಮೆಣಸಿನಪುಡಿ, ಅರಿಶಿನ, ಉಪ್ಪು, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮ್ಯಾರಿನೇಟ್ ಮಾಡಿ.
- ಅರ್ಧ ಕೊತ್ತಂಬರಿ ಸೊಪ್ಪನ್ನು ( ಬೇಕಿದ್ದರೆ ಪೇಸ್ಟ್ ಕೂಡ ಮಾಡಬಹುದು) ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಒಂದು ಗಂಟೆ ಪಕ್ಕಕ್ಕೆ ಇರಿಸಿ.
- ಈಗ ಕಡಾಯಿಯನ್ನು ಸ್ಟೌವ್ ಮೇಲೆ ಇಟ್ಟು ಎಣ್ಣೆ ಹಾಕಿ.
- ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಇದನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
- ಚಿಕನ್ ಕಾಲು ಗಂಟೆ ಬೆಂದ ನಂತರ ಉಳಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಳವನ್ನು ಮುಚ್ಚಿ
- ಇದಕ್ಕೆ ನೀರು ಹಾಕುವ ಅಗತ್ಯವಿಲ್ಲ. ಚಿಕನ್ ರೋಸ್ಟ್‌ನಂತೆ ಬರಬೇಕೆಂದರೆ ನೀರು ಹಾಕಬಾರದು.
- ಇದನ್ನು ಹುರಿಯದೆಯೇ ಡ್ರೈ ರೋಸ್ಟ್ ಮಾಡಿದರೆ ರುಚಿಕರವಾದ ಕೊತ್ತಂಬರಿ ಚಿಕನ್ ರೋಸ್ಟ್ ಸವಿಯಲು ಸಿದ್ಧ. ಇದನ್ನು ಸೈಡ್ ಡಿಶ್ ಆಗಿ ಸವಿಯಲು ಚೆನ್ನಾಗಿರುತ್ತದೆ. ಅನ್ನ ಅಥವಾ ಬಿರಿಯಾನಿ ಜತೆಯೂ ಸವಿಯಲು ರುಚಿಕರವಾಗಿರುತ್ತದೆ. ನೀವು ಒಮ್ಮೆ ಈ ರೆಸಿಪಿ ಮಾಡಿದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ.
ಚಿಕನ್ ಸೇವಿಸುವುದರಿಂದ ದೇಹಕ್ಕೆ ಪ್ರೋಟೀನ್ ಅಗಾಧ ಸಿಗುತ್ತದೆ. ನೇರ ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆಹಾರಗಳಲ್ಲಿ ಚಿಕನ್ ಕೂಡ ಒಂದು. ಹಾಗಾಗಿ ವಾರಕ್ಕೆ ಎರಡು ಅಥವಾ ಮೂರು ಬಾರಿಯಾದರೂ ಚಿಕನ್ ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ. ಯಾವುದನ್ನಾದರೂ ಅಷ್ಟೇ ಮಿತವಾಗಿ ತಿನ್ನಬೇಕು. ಅತಿಯಾಗಿ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಬಹುದು. ಹಾಗಾಗಿ ದಿನನಿತ್ಯ ಚಿಕನ್ ತಿನ್ನುವವರು ದಿನಕ್ಕೆ 50 ಗ್ರಾಂಗಿಂತ ಹೆಚ್ಚು ತಿನ್ನಬಾರದು. ವಾರದಲ್ಲಿ ಒಂದು ಅಥವಾ ಎರಡು ಬಾರಿ ತಿನ್ನುವವರಿಗೆ ಹೆಚ್ಚು ತಿನ್ನಲು ಯಾವುದೇ ತೊಂದರೆ ಇಲ್ಲ.