ಅತಿಥಿಗಳು ಬಂದಾಗ ಮಾಡಿ ಬಡಿಸಿ ರುಚಿಕರವಾದ ಡ್ರ್ಯಾಗನ್ ಚಿಕನ್: ಊಟಕ್ಕೂ ಓಕೆ, ಸಂಜೆ ಸ್ನಾಕ್ಸ್‌ಗೂ ಸವಿಯಬಹುದಾದ ರೆಸಿಪಿಯಿದು
ಅತಿಥಿಗಳು ಮನೆಗೆ ಬರುತ್ತಿದ್ದು ವೆರೈಟಿ ಚಿಕನ್, ಮಟನ್ ಕರಿ ಮಾಡಲು ಯೋಜಿಸಿರಬಹುದು. ಅತಿಥಿಗಳು ಚಿಕನ್ ಪ್ರಿಯರಾಗಿದ್ದರೆ,ನೀವು ಖಂಡಿತವಾಗಿಯೂ ಈ ಮಸಾಲೆಯುಕ್ತ ಸ್ಟಾರ್ಟರ್ ಪಾಕವಿಧಾನವನ್ನು ಪ್ರಯತ್ನಿಸಬಹುದು. ಥಟ್ಟಂತ ಸಿದ್ಧವಾಗುವ ಡ್ರ್ಯಾಗನ್ ಚಿಕನ್ ರೆಸಿಪಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.
ಅತಿಥಿಗಳು ಮನೆಗೆ ಬರುತ್ತಿದ್ದು ವೆರೈಟಿ ಚಿಕನ್, ಮಟನ್ ಕರಿ ಮಾಡಲು ಯೋಜಿಸಿರಬಹುದು. ಆದರೆ, ಸ್ಟಾರ್ಟರ್ ಏನು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ನಿಮ್ಮ ಮನೆಗೆ ಬರುವ ಅತಿಥಿಗಳು ಚಿಕನ್ ಇಷ್ಟಪಡುತ್ತಿದ್ದರೆ, ಡ್ರ್ಯಾಗನ್ ಚಿಕನ್ ಅನ್ನು ತ್ವರಿತವಾಗಿ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಸ್ವಲ್ಪ ಸಮಯದಲ್ಲಿ ರೆಸಿಪಿ ಸಿದ್ಧವಾಗಿರುತ್ತದೆ. ಡ್ರ್ಯಾಗನ್ ಚಿಕನ್ ಮಾಡುವುದು ಹೇಗೆ ಇಲ್ಲಿದೆ ಪಾಕವಿಧಾನ.
ಡ್ರ್ಯಾಗನ್ ಚಿಕನ್ ಪಾಕವಿಧಾನ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಮೂಳೆರಹಿತ (boneless) ಚಿಕನ್- 1 ಕೆ.ಜಿ, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ- 1 ಟೀ ಚಮಚ, ಸೋಯಾ ಸಾಸ್- 2 ಟೀ ಚಮಚ, ವಿನೆಗರ್ ಅಥವಾ ನಿಂಬೆರಸ- 1 ಟೀ ಚಮಚ, ಕಾರ್ನ್ ಫ್ಲೋರ್- 1 ಟೀ ಚಮಚ, ಅಡುಗೆ ಎಣ್ಣೆ- ಕರಿಯಲು, ಒಣ ಮೆಣಸಿನಕಾಯಿ- 4, ಈರುಳ್ಳಿ- 1, ಕ್ಯಾಪ್ಸಿಕಂ- 1, ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಸ್ಪ್ರಿಂಗ್ ಈರುಳ್ಳಿ- ಸ್ವಲ್ಪ, ಹಸಿಮೆಣಸಿನಕಾಯಿ- 3.
ಮಾಡುವ ವಿಧಾನ: ಮೊದಲಿಗೆ ಮೂಳೆರಹಿತ ಚಿಕನ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದರ ಮೇಲೆ ಉಪ್ಪು, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಕಾರ್ನ್ ಫ್ಲೋರ್ ಮತ್ತು ವಿನೆಗರ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷ ಹಾಗೆಯೇ ಇಟ್ಟು, ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಚಿಕನ್ ತುಂಡುಗಳನ್ನು ಕರಿಯಿರಿ. ಹುರಿದ ನಂತರ, ಟಿಶ್ಯೂ ಪೇಪರ್ ಮೇಲೆ ಹಾಕಿ. ಇದರಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
ನಂತರ ಇನ್ನೊಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿಯಿರಿ. ನಂತರ, ನುಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ. ಇದನ್ನು ಸಹ ಹುರಿಯಿರಿ, ಕೊನೆಯದಾಗಿ ಸ್ಪ್ರಿಂಗ್ ಈರುಳ್ಳಿಯನ್ನು ಸೇರಿಸಿ. ನಂತರ ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ. ಬಳಿಕ ಇದಕ್ಕೆ ಫ್ರೈ ಮಾಡಿದ ಚಿಕನ್ ಅನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿಕರವಾದ ಡ್ರ್ಯಾಗನ್ ಚಿಕನ್ ರೆಸಿಪಿ ಸವಿಯಲು ಸಿದ್ಧ. ಇದನ್ನು ಅತಿಥಿಗಳಿಗೆ ಸ್ಟಾರ್ಟರ್ ಆಗಿ ಬಡಿಸಬಹುದು ಅಥವಾ ಸಂಜೆ ಸ್ನಾಕ್ಸ್‌ಗೆ ಸವಿಯಲು ಕೂಡ ಉತ್ತಮವಾಗಿದೆ.