ಮಕ್ಕಳು ತಿಂಡಿ ಬೇಕು ಎಂದು ಹಠ ಮಾಡಿದ್ರೆ ತಯಾರಿಸಿ ಕೋಡುಬಳೆ: ಸಂಜೆ ಚಹಾ ಜೊತೆಗೂ ಬೆಸ್ಟ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ
ಮಕ್ಕಳು ಸಂಜೆ ಶಾಲೆಯಿಂದ ಬಂದ ಕೂಡಲೇ ತಿಂಡಿ ಬೇಕು ಎಂದು ಹಠ ಮಾಡುತ್ತಾರೆ. ಅವರಿಗಾಗಿ ಕೋಡುಬಳೆಯನ್ನು ಮಾಡಿ ಕೊಡಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ಪಾಕವಿಧಾನ.

ಮಕ್ಕಳು ಸಂಜೆ ಶಾಲೆಯಿಂದ ಬಂದ ಕೂಡಲೇ ತಿಂಡಿ ಬೇಕು ಎಂದು ಹಠ ಮಾಡಿದರೆ ಈ ತಿಂಡಿಯನ್ನು ಮಾಡಿ ಕೊಡಿ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇದು ತುಂಬಾ ಇಷ್ಟವಾಗುತ್ತದೆ. ಕುರುಕಲು ತಿಂಡಿ ಅಂದ್ರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ. ಸಂಜೆ ಚಹಾ ಹೀರುತ್ತಾ ಗರಿಗರಿಯಾದ ತಿಂಡಿ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಇನ್ಯಾಕೆ ತಡ, ಹಾಗಿದ್ದರೆ ತಯಾರಿಸಿ ಗರಿಗರಿ ಕೋಡುಬಳೆ. ಸುಮಾರು ಒಂದು ತಿಂಗಳವರೆಗೆ ಡಬ್ಬದಲ್ಲಿ ಎತ್ತಿಟ್ಟರೂ ಕೆಡುವುದಿಲ್ಲ. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಕೋಡುಬಳೆ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- 1 ಕಪ್, ಚಿರೋಟಿ ರವೆ- ಕಾಲು ಕಪ್, ಮೈದಾ ಹಿಟ್ಟು- 2 ಚಮಚ, ತೆಂಗಿನಕಾಯಿ ತುರಿ- 3 ಚಮಚ, ಹುರಿಗಡಲೆ ಪುಡಿ- 2 ಚಮಚ, ಜೀರಿಗೆ- 2 ಚಮಚ, ಎಳ್ಳು- 1 ಚಮಚ, ಬೆಳ್ಳುಳ್ಳಿ- 5, ಇಂಗು- ಚಿಟಿಕೆ, ಎಣ್ಣೆ- 5 ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಅಚ್ಚಖಾರದ ಪುಡಿ- 4 ಚಮಚ, ಕರಿಬೇವು- 15 ಎಲೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಮಸಾಲೆ ತಯಾರಿಸಬೇಕು. ಇದಕ್ಕಾಗಿ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಅಚ್ಚಖಾರದ ಪುಡಿ, ಕರಿಬೇವು, 1 ಚಮಚ ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಇದೀಗ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಚಿರೋಟಿ ರವೆ ಹಾಕಿ ನಾಲ್ಕರಿಂದ ಐದು ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಎತ್ತಿಡಿ. ಈ ಮಿಶ್ರಣಕ್ಕೆ ಉಪ್ಪು, 1 ಚಮಚ ಜೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಎಣ್ಣೆಯನ್ನು ಬಿಸಿ ಮಾಡಿ. ಈ ಬಿಸಿ ಎಣ್ಣೆಯನ್ನು ಅಕ್ಕಿ ಹಿಟ್ಟು, ಮೈದಾ ಹಿಟ್ಟು ಹಾಗೂ ಚಿರೋಟಿ ರವೆ ಮಿಶ್ರಣಕ್ಕೆ ಬೆರೆಸಿ. ಜೊತೆಗೆ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ನೀರು ಹಾಕಬಹುದು. ಮಿಶ್ರಣ ತುಂಬಾ ಗಟ್ಟಿಯಾಗಿರಬಾರದು. ಚಪಾತಿ ಹದದಷ್ಟು ಮಿಶ್ರಣ ತಯಾರಿಸಬೇಕು.
ಈ ಮಿಶ್ರಣವನ್ನು ಚೆನ್ನಾಗಿ ನಾದಿದ ನಂತರ ಇದನ್ನು 5 ರಿಂದ 10 ನಿಮಿಷ ಮುಚ್ಚಿಟ್ಟು ಬಿಡಿ. ನಂತರ ಸಣ್ಣ ಉಂಡೆಯನ್ನು ತೆಗೆದುಕೊಂಡು ಉದ್ದಕ್ಕೆ ಲಟ್ಟಿಸಿ, ಉಂಗುರದಂತೆ ಮಾಡಿ. ಎಲ್ಲಾ ಹಿಟ್ಟಿನ ಮಿಶ್ರಣವನ್ನು ಇದೇ ರೀತಿ ಮಾಡಿ.
ಈಗ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಒಂದೊಂದೇ ಕೋಡುಬಳೆಗಳನ್ನು ಎಣ್ಣೆಯಲ್ಲಿ ಹಾಕಿ ಕರಿಯಿರಿ. ಕರಿದ ಕೋಡುಬಳೆಯನ್ನು ಒಂದು ತಟ್ಟೆಯಲ್ಲಿ ಎತ್ತಿಟ್ಟರೆ ರುಚಿಕರ ಕೋಡುಬಳೆ ತಿನ್ನಲು ಸಿದ್ಧ.
ಸಂಜೆ ಚಹಾ ಕುಡಿಯುತ್ತಾ ಏನಾದರೂ ಕುರುಕಲು ತಿಂಡಿ ತಿನ್ನಬೇಕು ಎಂದು ಆಸೆಯಾದರೆ ಈ ರೀತಿ ಮನೆಯಲ್ಲೇ ಗರಿಗರಿ ತಿಂಡಿ ಮಾಡಿ. ಹೊರಗಡೆ ತಂದ ತಿಂಡಿ ತಿನ್ನುವುದಕ್ಕಿಂತ ಮನೆಯಲ್ಲೇ ತಯಾರಿಸಿ ತಿನ್ನುವುದು ಉತ್ತಮ. ಮಕ್ಕಳು ಸಂಜೆ ಶಾಲೆಯಿಂದ ಬಂದ ಕೂಡಲೇ ತಿಂಡಿ ಬೇಕು ಎಂದು ಹಠ ಮಾಡುತ್ತಾರೆ. ಅವರಿಗಾಗಿಯೂ ಈ ತಿಂಡಿ ತಯಾರಿಸಬಹುದು. ಮಕ್ಕಳಿಗಾಗಿ ತಯಾರಿಸುವುದಾದರೆ ಖಾರ ಸ್ವಲ್ಪ ಕಡಿಮೆ ಹಾಕುವುದು ಒಳ್ಳೆಯದು.

ವಿಭಾಗ