ನೋಡಿದರೆ ಬಾಯಲ್ಲಿ ನೀರೂರುವ ಚಿಕನ್ ರೆಸಿಪಿಯಿದು; ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್
ಕನ್ನಡ ಸುದ್ದಿ  /  ಜೀವನಶೈಲಿ  /  ನೋಡಿದರೆ ಬಾಯಲ್ಲಿ ನೀರೂರುವ ಚಿಕನ್ ರೆಸಿಪಿಯಿದು; ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್

ನೋಡಿದರೆ ಬಾಯಲ್ಲಿ ನೀರೂರುವ ಚಿಕನ್ ರೆಸಿಪಿಯಿದು; ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್

ನೀವು ಚಿಕನ್ ಪ್ರಿಯರಾಗಿದ್ದರೆ ಈ ಖಾದ್ಯವನ್ನು ಪ್ರಯತ್ನಿಸಲೇಬೇಕು. ಅಸ್ಸಾಮ್ ಶೈಲಿಯ ಹುರಿದ ಚಿಕನ್ ಪಾಕವಿಧಾನವನ್ನು ಇಲ್ಲಿ ನೀಡಲಾಗಿದೆ. ಬಾಯಲ್ಲಿ ನೀರೂರುವ ಈ ಖಾದ್ಯ ತಯಾರಿಸುವುದು ತುಂಬಾನೇ ಸುಲಭ.

ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್
ಅಸ್ಸಾಮ್ ಶೈಲಿಯಲ್ಲಿ ತಯಾರಿಸಿ ರುಚಿಕರ ಹುರಿದ ಚಿಕನ್

ನೀವು ಮಾಂಸಾಹಾರವನ್ನು ಇಷ್ಟಪಡುತ್ತೀರಾ? ಚಿಕನ್‌ನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದರೆ ಇಲ್ಲಿ ಅಸ್ಸಾಮ್ ಶೈಲಿಯ ಹುರಿದ ಚಿಕನ್ ಪಾಕವಿಧಾನವನ್ನು ನೀಡಲಾಗಿದೆ. ಈ ರೆಸಿಪಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಒಂದೇ ರೀತಿಯ ಚಿಕನ್ ಖಾದ್ಯ ತಿಂದು ಬೇಸತ್ತಿದ್ದರೆ ಈ ರೀತಿ ವಿಭಿನ್ನ ಪಾಕವಿಧಾನವನ್ನು ಟ್ರೈ ಮಾಡಬಹುದು. ಅಸ್ಸಾಮ್ ಶೈಲಿಯ ಹುರಿದ ಚಿಕನ್ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಹುರಿದ ಚಿಕನ್ ಖಾದ್ಯ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- ಅರ್ಧ ಕೆಜಿ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ- ಒಂದು ಚಮಚ, ಮೆಣಸಿನ ಪುಡಿ- ಒಂದು ಚಮಚ, ಜೀರಿಗೆ ಪುಡಿ- ಒಂದು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ನಿಂಬೆ ರಸ- ಮೂರು ಚಮಚ, ಕಪ್ಪು ಎಳ್ಳು- ಅರ್ಧ ಕಪ್, ಎಣ್ಣೆ- ನಾಲ್ಕು ಚಮಚ, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಶುಂಠಿ ಪೇಸ್ಟ್- ಎರಡು ಚಮಚ, ಕತ್ತರಿಸಿದ ಈರುಳ್ಳಿ- ಕಾಲು ಕಪ್.

ತಯಾರಿಸುವ ವಿಧಾನ: ಮೊದಲು ಕೋಳಿ ಮಾಂಸವನ್ನು ಸ್ವಚ್ಛವಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಉಪ್ಪು, ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು 20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಇಡಿ.

ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ ಕಪ್ಪು ಎಳ್ಳು ಹಾಕಿ ಒಂದು ನಿಮಿಷ ಹುರಿಯಿರಿ. ಇದನ್ನು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ನಂತರ, ತಣ್ಣಗಾದ ಕಪ್ಪು ಎಳ್ಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಎಣ್ಣೆ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ನೀರು ಹಾಕದೆ ರುಬ್ಬಿಕೊಳ್ಳಿ.

ಈಗ ಮ್ಯಾರಿನೇಟ್ ಮಾಡಿದ ಕೋಳಿಯಿಂದ ಹೆಚ್ಚುವರಿ ನೀರನ್ನು ಬಸಿಯಿರಿ. ನಂತರ ಅದಕ್ಕೆ ರುಬ್ಬಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮತ್ತೆ ಈ ಚಿಕನ್ ಅನ್ನು 30 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

ಈ ಮಧ್ಯೆ, ಮೈಕ್ರೋವೇವ್ ಓವನ್ ಅನ್ನು 180 ಡಿಗ್ರಿಗೆ ಪೂರ್ವಭಾವಿಯಾಗಿ ಕಾಯಿಸಿ, ಅದನ್ನು ಸಿದ್ಧವಾಗಿಡಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿದ ಒಲೆಯಲ್ಲಿ ಒಂದು ಟ್ರೇ ಮೇಲೆ ಇರಿಸಿ. ಸಂಪೂರ್ಣವಾಗಿ ಬೇಯಲು ಸುಮಾರು 30 ನಿಮಿಷ ಇದನ್ನು ಬೇಯಿಸಿ.

ಅರ್ಧ ಗಂಟೆಯ ನಂತರ, ಚಿಕನ್ ಅನ್ನು ಒಲೆಯಿಂದ ತೆಗೆದು ತಕ್ಷಣ ಅದರ ಮೇಲೆ ತುಪ್ಪ ಅಥವಾ ಬೆಣ್ಣೆಯನ್ನು ಸವರಿದರೆ ರುಚಿಕರ ಅಸ್ಸಾಮಿ ಹುರಿದ ಕೋಳಿಮಾಂಸ ಸಿದ್ಧ. ನಿಮ್ಮ ಮನೆಯಲ್ಲಿ ಓವೆನ್ ಇಲ್ಲದಿದ್ದರೆ, ತವಾದಲ್ಲಿ ಇದನ್ನು ಹುರಿಯಬಹುದು. ತವಾಗೆ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿಟ್ಟು ಚಿಕನ್ ಅನ್ನು ಮುಚ್ಚಿಟ್ಟು ಬೇಯಿಸಬೇಕು. ಇದು ಕೂಡ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ. ಈ ಅಸ್ಸಾಮ್ ಶೈಲಿಯ ಹುರಿದ ಚಿಕನ್ ಖಾದ್ಯ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

Priyanka Gowda

eMail
Whats_app_banner