ಭಾನುವಾರ ಯಾವ ಚಿಕನ್ ರೆಸಿಪಿ ಮಾಡೋದು ಅಂತಾ ಯೋಚಿಸುತ್ತಿದ್ದೀರಾ: ಹಾಗಿದ್ದರೆ ಮಾಡಿ ಚಿಕನ್ ಪೆಪ್ಪರ್ ಫ್ರೈ, ಇಲ್ಲಿದೆ ಪಾಕವಿಧಾನ
ಭಾನುವಾರ ಬಂತೆಂದ್ರೆ ಸಾಕು ಮಾಂಸಾಹಾರ ಪ್ರಿಯರ ಮನೆಗಳಲ್ಲಿ ವಿವಿಧ ಬಗೆಯ ಚಿಕನ್, ಮಟನ್ ಅಥವಾ ಮೀನಿನ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಚಿಕನ್ ಅಥವಾ ಮಟನ್ ಸಾಂಬಾರ್ ಮಾಡಿದ್ರೆ ಸೈಡ್ ಡಿಶ್ ಆಗಿ ಏನು ಮಾಡುವುದು ಎಂದು ಹಲವರು ಯೋಚಿಸುತ್ತಾರೆ. ಚಿಕನ್ ಪೆಪ್ಪರ್ ಫ್ರೈ ಅನ್ನು ಒಮ್ಮೆ ಮಾಡಿ ನೋಡಿ. ಈ ಖಾದ್ಯವನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಇಲ್ಲಿದೆ ರೆಸಿಪಿ

ಭಾನುವಾರ ಬಂತೆಂದ್ರೆ ಸಾಕು ಮಾಂಸಾಹಾರ ಪ್ರಿಯರ ಮನೆಗಳಲ್ಲಿ ವಿವಿಧ ಬಗೆಯ ಚಿಕನ್, ಮಟನ್ ಅಥವಾ ಮೀನಿನ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಚಿಕನ್ ಅಥವಾ ಮಟನ್ ಸಾಂಬಾರ್ ಮಾಡಿದ್ರೆ ಸೈಡ್ ಡಿಶ್ ಆಗಿ ಏನು ಮಾಡುವುದು ಎಂದು ಹಲವರು ಯೋಚಿಸುತ್ತಾರೆ. ಚಿಕನ್ ಗ್ರೇವಿ, ಸುಕ್ಕಾ, ಘೀ ರೋಸ್ಟ್ ಕೆಲವರು ಮಾಡಬಹುದು. ಅದೇ ರೀತಿ ಚಿಕನ್ ಪೆಪ್ಪರ್ ಫ್ರೈ ಅನ್ನು ಒಮ್ಮೆ ಮಾಡಿ ನೋಡಿ. ಬಹಳ ಬೇಗನೇ ತಯಾರಾಗುವ ಈ ಖಾದ್ಯವನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಪೆಪ್ಪರ್ ಅಂದ್ರೆ ಕಾಳುಮೆಣಸು, ಇದನ್ನೇ ಮುಖ್ಯವಾಗಿಟ್ಟುಕೊಂಡು ತಯಾರಿಸಲಾಗುವ ಖಾದ್ಯವಿದು. ಹಾಗಿದ್ದರೆ ಚಿಕನ್ ಪೆಪ್ಪರ್ ಫ್ರೈ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಪೆಪ್ಪರ್ ಫ್ರೈ ರೆಸಿಪಿ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಚಿಕನ್- 1 ಕೆ.ಜಿ, ಈರುಳ್ಳಿ- 1, ಹಸಿಮೆಣಸಿನಕಾಯಿ- 2, ಸೋಯಾ ಸಾಸ್- 2 ಚಮಚ, ಬೆಳ್ಳುಳ್ಳಿ ಎಸಳು- 8, ಶುಂಠಿ- 1 ಸಣ್ಣ ತುಂಡು, ಕಾಳುಮೆಣಸು- 3 ಚಮಚ, ಧನಿಯಾ ಬೀಜ- 2 ಚಮಚ, ಸೋಂಪು- 1 ಚಮಚ, ಜೀರಿಗೆ- 2 ಚಮಚ, ಗೋಡಂಬಿ-4, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನ ಎಲೆ- ಸ್ವಲ್ಪ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಅರಿಶಿನ- 1 ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಉಪ್ಪು ಹಾಗೂ ಅರಿಶಿನ ಹಾಕಿ 15 ನಿಮಿಷ ಮ್ಯಾರಿನೇಟ್ ಮಾಡಿ. ಬೇಕಿದ್ದರೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನೂ ಹಾಕಬಹುದು. ನಂತರ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಜೊತೆಗೆ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಕೂಡ ಸಣ್ಣದಾಗಿ ಕತ್ತರಿಸಿ. ಈಗ ಒಂದು ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಕಾಳುಮೆಣಸು, ಜೀರಿಗೆ, ಧನಿಯಾ ಬೀಜ, ಸೋಂಪು, ಗೋಡಂಬಿ ಹಾಕಿ ಹುರಿದು, ಒಂದು ತಟ್ಟೆಯಲ್ಲಿ ಎತ್ತಿಟ್ಟುಕೊಳ್ಳಿ.
ನಂತರ ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಬೆಂದ ನಂತರ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಕರಿಬೇವಿನ ಎಲೆ, ಮ್ಯಾರಿನೇಟ್ ಮಾಡಿರುವ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಬೇಯಲು ಬಿಡಿ. ಈ ವೇಳೆ ಹುರಿದಿಟ್ಟಿರುವ ಕಾಳುಮೆಣಸು, ಜೀರಿಗೆ, ಧನಿಯಾ ಬೀಜ, ಸೋಂಪು, ಗೋಡಂಬಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ನೀರು ಸೇರಿಸಬೇಡಿ.
ಇತ್ತ ಚಿಕನ್ ಬೆಂದ ನಂತರ ಇದಕ್ಕೆ ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ. ಸೋಯಾ ಸಾಸ್ ಇಲ್ಲದಿದ್ದರೆ, ಹುಣಸೆಹಣ್ಣಿನ ರಸವನ್ನೂ ಹಾಕಬಹುದು. ನಂತರ ಪುಡಿ ಮಾಡಿರುವ ಕಾಳುಮೆಣಸಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗ್ರೇವಿ ತರಹ ಬೇಕು ಅಂತಿದ್ದರೆ, ಸ್ವಲ್ಪ ನೀರು ಸೇರಿಸಬಹುದು. ಇಲ್ಲದಿದ್ದರೆ ನೀರು ಸೇರಿಸುವ ಅಗತ್ಯವಿಲ್ಲ. ಇಷ್ಟು ಮಾಡಿದರೆ ರುಚಿಕರ ಚಿಕನ್ ಪೆಪ್ಪರ್ ಫ್ರೈ ಸಿದ್ಧ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬಹುದು.
ಈ ಚಿಕನ್ ಪೆಪ್ಪರ್ ಫ್ರೈ ಅನ್ನು ಸೈಡ್ ಡಿಶ್ ಆಗಿ ತಿನ್ನಬಹುದು. ಮನೆಗೆ ಅತಿಥಿಗಳು ಬಂದರೆ ಈ ರೀತಿ ಮಾಡಿ ನೋಡಿ. ಖಂಡಿತ ಇಷ್ಟಪಡುತ್ತಾರೆ. ತುಂಬಾ ಸರಳ ಪಾಕವಿಧಾನವಿರುವ ಈ ಖಾದ್ಯವು ಬಹಳ ಬೇಗನೆ ತಯಾರಾಗುತ್ತದೆ.
