ನಿಂಬೆ, ಮಾವಿನಕಾಯಿ, ಹುಣಸೆಹಣ್ಣಿನ ಪುಳಿಯೋಗರೆ ತಿಂದಿರಬಹುದು; ಇಲ್ಲಿದೆ ರುಚಿಕರ ನೆಲ್ಲಿಕಾಯಿ ಪುಳಿಯೋಗರೆ ರೆಸಿಪಿ
ನಿಂಬೆ, ಮಾವಿನಕಾಯಿ, ಹುಣಸೆಹಣ್ಣಿನ ಪುಳಿಯೋಗರೆ ನೀವು ತಿಂದಿರಬಹುದು. ಎಂದಾದರೂ ನೆಲ್ಲಿಕಾಯಿ ಪುಳಿಯೋಗರೆ ಸವಿದಿದ್ದೀರಾ? ಇದನ್ನು ತಯಾರಿಸುವುದು ತುಂಬಾ ಸುಲಭ.ಮಕ್ಕಳ ಲಂಚ್ ಬಾಕ್ಸ್‌ಗೂ ಮಾಡಿಕೊಡಬಹುದು. ಇಲ್ಲಿದೆ ಪಾಕವಿಧಾನ.

ನೆಲ್ಲಿಕಾಯಿಯು ಆರೋಗ್ಯ ಮತ್ತು ಸೌಂದರ್ಯದ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಉಪ್ಪಿನಕಾಯಿಯಿಂದ ಹಿಡಿದು ಚಟ್ನಿವರೆಗೆ ನೆಲ್ಲಿಕಾಯಿಯಿಂದ ತಯಾರಿಸುವ ಖಾದ್ಯವು ಬಹಳ ರುಚಿಕರವಾಗಿರುತ್ತದೆ. ಇದು ನಾಲಗೆಗೆ ರುಚಿಕರವಾಗಿರುವುದಲ್ಲದೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇಲ್ಲಿ ನೆಲ್ಲಿಕಾಯಿ ಪುಳಿಯೋಗರೆ ರೆಸಿಪಿ ನೀಡಲಾಗಿದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ನಿಂಬೆ, ಮಾವಿನಕಾಯಿ, ಹುಣಸೆಹಣ್ಣಿನ ಪುಳಿಯೋಗರೆಯಂತೆ ನೆಲ್ಲಿಕಾಯಿ ಪುಳಿಯೋಗರೆ ಮಾಡಿ ನೋಡಿ. ಇದರ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ನೆಲ್ಲಿಕಾಯಿ ಪುಳಿಯೋಗರೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ನೆಲ್ಲಿಕಾಯಿ ಪುಳಿಯೋಗರೆ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಸಾಸಿವೆ, ಕಡಲೆಕಾಯಿ ಸ್ವಲ್ಪ, 2 ದೊಡ್ಡ ನೆಲ್ಲಿಕಾಯಿ, ಕರಿಬೇವಿನ ಎಲೆ ಸ್ವಲ್ಪ, ಅರ್ಧ ಚಮಚ ಜೀರಿಗೆ, ಒಂದು ಒಣಮೆಣಸು, 2 ಬೆಳ್ಳುಳ್ಳಿ.
ತಯಾರಿಸುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಅಕ್ಕಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿ. ಹೀಗೆ ಬೇಯಿಸಿದ ಅನ್ನವನ್ನು ದೊಡ್ಡ ತಟ್ಟೆಯಲ್ಲಿ ಹರಡಿ ಒಣಗಿಸಿ. ಅದರಿಂದ ಅನ್ನ ಉಂಡೆಗಳಾಗುವುದಿಲ್ಲ. ಈಗ ನೆಲ್ಲಿಕಾಯಿಯಿಂದ ಬೀಜಗಳನ್ನು ತೆಗೆದು ಒಂದು ಪ್ಯಾನ್‌ನಲ್ಲಿ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಅನ್ನದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. ನಂತರ ಕಡಲೆಕಾಯಿ, ಉದ್ದಿನಬೇಳೆ, ಕಡಲೆಬೇಳೆ ಬೆರೆಸಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಒಣಮೆಣಸಿನಕಾಯಿ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
ಈಗ ಅದಕ್ಕೆ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಸಾಲೆಯನ್ನು ಅನ್ನದ ಮೇಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಷ್ಟೇ ರುಚಿಕರವಾದ ನೆಲ್ಲಿಕಾಯಿ ಪುಳಿಯೋಗರೆ ಸಿದ್ಧ. ಇದನ್ನು ಮಾಡಲು ತುಂಬಾ ಕಡಿಮೆ ಸಮಯ ಬೇಕಾಗುತ್ತದೆ. ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಒಮ್ಮೆ ಮಾಡಿ ತಿಂದರೆ ಮತ್ತೆ ಮತ್ತೆ ಮಾಡಿ ತಿನ್ನುವಿರಿ.
ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುವಲ್ಲೂ ಸಹಕಾರಿ.
ವಿಭಾಗ