ಸೋರೆಕಾಯಿಯಿಂದ ತಯಾರಿಸಬಹುದು ಸೂಪರ್ ಟೇಸ್ಟಿ ಮೊಸರು ಹುಳಿ, ಸೋರೆಕಾಯಿ ಅಂದ್ರೆ ಇಷ್ಟ ಇಲ್ಲ ಅನ್ನೋರು ತಿಂತಾರೆ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೋರೆಕಾಯಿಯಿಂದ ತಯಾರಿಸಬಹುದು ಸೂಪರ್ ಟೇಸ್ಟಿ ಮೊಸರು ಹುಳಿ, ಸೋರೆಕಾಯಿ ಅಂದ್ರೆ ಇಷ್ಟ ಇಲ್ಲ ಅನ್ನೋರು ತಿಂತಾರೆ ಟ್ರೈ ಮಾಡಿ

ಸೋರೆಕಾಯಿಯಿಂದ ತಯಾರಿಸಬಹುದು ಸೂಪರ್ ಟೇಸ್ಟಿ ಮೊಸರು ಹುಳಿ, ಸೋರೆಕಾಯಿ ಅಂದ್ರೆ ಇಷ್ಟ ಇಲ್ಲ ಅನ್ನೋರು ತಿಂತಾರೆ ಟ್ರೈ ಮಾಡಿ

ಸೋರೆಕಾಯಿ ಅಂದ್ರೆ ಮೂಗುಮುರಿಯುವರೇ ಹೆಚ್ಚು. ಆರೋಗ್ಯಕ್ಕೆ ಬಹು ಪ್ರಯೋಜನಕಾರಿಯಾದ ಈ ತರಕಾರಿಯಿಂದ ರುಚಿಕರವಾದ ಖಾದ್ಯ ತಯಾರಿಸಬಹುದು. ನೀವು ಸೌತೆಕಾಯಿ, ಕುಂಬಳಕಾಯಿ ಮಜ್ಜಿಗೆ ಹುಳಿ ತಿಂದಿರಬಹುದು. ಅದೇ ರೀತಿ ಸೋರೆಕಾಯಿ ಮೊಸರು ಹುಳಿಯನ್ನೊಮ್ಮೆ ಪ್ರಯತ್ನಿಸಿ. ಈ ರೆಸಿಪಿ ಮಾಡುವುದು ಹೇಗೆ ಅನ್ನೋದು ಇಲ್ಲಿದೆ.

ರುಚಿಕರ ಸೋರೆಕಾಯಿ ಮೊಸರು ಹುಳಿ ಖಾದ್ಯ ರೆಸಿಪಿ
ರುಚಿಕರ ಸೋರೆಕಾಯಿ ಮೊಸರು ಹುಳಿ ಖಾದ್ಯ ರೆಸಿಪಿ (shutterstock)

ಅಡುಗೆಗೆ ಸೋರೆಕಾಯಿ ಸಾಂಬಾರ್ ಅಥವಾ ಪಲ್ಯ ಮಾಡಿದ್ರೆ ಮನೆಮಂದಿ ಕಷ್ಟದಲ್ಲಿ ಊಟ ಮಾಡುತ್ತಾರೆ. ಬಹುತೇಕ ಮಂದಿ ಸೋರೆಕಾಯಿ ಹೆಸರು ಕೇಳಿದ್ರೆ ಸಾಕು ಮಾರುದ್ದ ದೂರ ಓಡುತ್ತಾರೆ. ಆದರೆ, ಈ ತರಕಾರಿಯು ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರ ಖಾದ್ಯವನ್ನು ರುಚಿಕರವಾಗಿ ತಯಾರಿಸಬಹುದು. ಸೋರೆಕಾಯಿಯನ್ನು ಬೇಯಿಸುವ ವಿಧಾನವನ್ನು ಅವಲಂಬಿಸಿ ಅದರ ರುಚಿ ಬದಲಾಗುತ್ತದೆ. ಈ ರೀತಿ ಸೋರೆಕಾಯಿ ಮೊಸರು ಹುಳಿ ಮಾಡುವುದರಿಂದ ಬಹಳ ರುಚಿಕರವಾಗಿರುತ್ತದೆ. ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಸೋರೆಕಾಯಿ ಮೊಸರು ಹುಳಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸೋರೆಕಾಯಿ- ಒಂದು, ಮೊಸರು- ಎರಡು ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ- ಒಂದು ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಅರ್ಧ ಟೀ ಚಮಚ, ಕರಿಬೇವಿನ ಎಲೆ- ಸ್ವಲ್ಪ, ಶುಂಠಿ-ಬೆಳ್ಳುಳ್ಳಿ- ಅರ್ಧ ಟೀ ಚಮಚ, ಟೊಮೆಟೊ- 1, ಬೆಲ್ಲ- ಅರ್ಧ ಟೀ ಚಮಚ, ಎಣ್ಣೆ- 2 ಟೀ ಚಮಚ.

ಸೋರೆಕಾಯಿ ಮೊಸರು ಹುಳಿ ಪಾಕವಿಧಾನ: ಮೊದಲಿಗೆ ಸೋರೆಕಾಯಿ ಸಿಪ್ಪೆಯನ್ನು ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಹಾಕಿ. ಇದಕ್ಕೆ ಉಪ್ಪು, ನೀರು ಮತ್ತು ಅರಿಶಿನವನ್ನು ಸೇರಿಸಿ, ಎರಡರಿಂದ ಮೂರು ವಿಶಿಲ್ ಬೇಯಿಸಿ. ಕುಕ್ಕರ್ ಅಗತ್ಯವಿಲ್ಲದೆ ಹಾಗೆಯೇ ಪಾತ್ರೆಯಲ್ಲಿಯೂ ನೀರು ಸೇರಿಸಿ ಬೇಯಿಸಬಹುದು.

ಬೇಯಿಸಿದ ಸೋರೆಕಾಯಿ ತಣ್ಣಗಾದ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಸಣ್ಣ ಬಾಣಲೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಸಾಸಿವೆ, 8 ರಿಂದ 10 ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದರಲ್ಲಿ ಮಿಶ್ರಣ ಮಾಡಿ. ಟೊಮೆಟೊವನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇದಕ್ಕೆ ಅರಿಶಿನ, ಮೆಣಸಿನಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊ ಚೆನ್ನಾಗಿ ಬೆಂದ ನಂತರ ರುಬ್ಬಿರುವ ಸೋರೆಕಾಯಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಖಾದ್ಯ ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಬಹುದು. ನಂತರ 2 ಕಪ್ ಮೊಸರು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಅರ್ಧ ಟೀ ಚಮಚದಷ್ಟು ಬೆಲ್ಲ ಸೇರಿಸಿ ಸ್ಟೌವ್ ಆಫ್ ಮಾಡಿ.

ಇಷ್ಟು ಮಾಡಿದರೆ ರುಚಿಕರವಾದ ಸೋರೆಕಾಯಿ ಮೊಸರು ಹುಳಿ ಖಾದ್ಯ ಸವಿಯಲು ಸಿದ್ಧ. ಇದನ್ನು ರೊಟ್ಟಿ ಅಥವಾ ಅನ್ನದೊಂದಿಗೆ ಬಡಿಸಿ ಬಹಳ ರುಚಿಕರವಾಗಿರುತ್ತದೆ. ಮಧ್ಯಾಹ್ನದ ವೇಳೆ ಅನ್ನದೊಂದಿಗೆ ಈ ಖಾದ್ಯ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ನೀವು ಸೌತೆಕಾಯಿ, ಕುಂಬಳಕಾಯಿ ಮಜ್ಜಿಗೆ ಹುಳಿ ತಿಂದಿರಬಹುದು. ಅದೇ ರೀತಿ ಸೋರೆಕಾಯಿ ಮೊಸರು ಹುಳಿಯನ್ನೊಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗಬಹುದು.

Whats_app_banner