ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ

ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ತುಂಬಾ ಸರಳ, ಇಲ್ಲಿದೆ ಪಾಕವಿಧಾನ

Egg Ghee Roast: ನೀವು ಮೊಟ್ಟೆಯಿಂದ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಿರಬಹುದು. ಎಂದಾದರೂ ಮೊಟ್ಟೆ ಘೀ ರೋಸ್ಟ್ ತಯಾರಿಸಿದ್ದೀರಾ. ತುಂಬಾ ಬೇಗ ಹಾಗೂ ಸರಳವಾದ ರೆಸಿಪಿಯಿದು. ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗಿದ್ದರೆ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ರೆಸಿಪಿ ಇಲ್ಲಿದೆ
ಬಾಯಲ್ಲಿ ನೀರೂರುವ ಮೊಟ್ಟೆ ಘೀ ರೋಸ್ಟ್ ರೆಸಿಪಿ ಇಲ್ಲಿದೆ

ಪೌಷ್ಟಿಕಾಂಶಗಳಲ್ಲಿ ಸಮೃದ್ಧಾಗಿರುವ ಮೊಟ್ಟೆ ತಿನ್ನುವುದರಿಂದ ಆರೋದಗ್ಯಕ್ಕೆ ಹಲವು ಪ್ರಯೋಜನಗಳಿವೆ. ಈ ಮೊಟ್ಟೆಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಆಮ್ಲೆಟ್‌ನಿಂದ ಹಿಡಿದು ಘೀ ರೋಸ್ಟ್‌ವರೆಗೆ ಮೊಟ್ಟೆಯ ಖಾದ್ಯ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇಲ್ಲಿ ಮೊಟ್ಟೆಯ ಘೀ ರೋಸ್ಟ್ ಮಾಡುವ ವಿಧಾನವನ್ನು ತಿಳಿಸಲಾಗಿದೆ. ತುಪ್ಪದಿಂದ ಮಸಾಲೆ ಹುರಿದು ತಯಾರಿಸಲಾಗುವ ಈ ಖಾದ್ಯವನ್ನು ನೋಡಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗಿದ್ದರೆ ಮೊಟ್ಟೆ ಘೀ ರೋಸ್ಟ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮೊಟ್ಟೆ ಘೀ ರೋಸ್ಟ್ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ- 6, ಬ್ಯಾಡಗಿ ಮೆಣಸು- 18, ಕಾಳುಮೆಣಸು- ಅರ್ಧ ಚಮಚ, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಮೆಂತ್ಯ- 4 ಕಾಳು, ಸಾಸಿವೆ- ಕಾಲು ಟೀ ಚಮಚ, ಅರಿಶಿನ ಪುಡಿ- ಅರ್ಧ ಚಮಚ, ಸೋಂಪು- ಅರ್ಧ ಟೀ ಚಮಚ, ಗೋಡಂಬಿ- 4, ಹುಣಸೆಹಣ್ಣು- 1 ಸಣ್ಣ ನಿಂಬೆ ಗಾತ್ರ, ಬೆಳ್ಳುಳ್ಳಿ- 8 ಎಸಳು, ಶುಂಠಿ- 1 ಸಣ್ಣ ಇಂಚು, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ- 5 ಚಮಚ, ಕರಿಬೇವಿನ ಎಲೆ- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಸುರಿದು ಮೊಟ್ಟೆ ಬೇಯಿಸಲು ಇಡಿ. ಈ ವೇಳೆ, ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬ್ಯಾಡಗಿ ಮೆಣಸು, ಕಾಳುಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಗೋಡಂಬಿ, ಸೋಂಪು, ಮೆಂತ್ಯ, ಬೆಳ್ಳುಳ್ಳಿಯನ್ನು ಬೇರೆ-ಬೇರೆಯಾಗಿ ಹಿರಿದು ಒಂದು ತಟ್ಟೆಗೆ ಎತ್ತಿಟ್ಟುಕೊಳ್ಳಿ.

ಬೇಯುತ್ತಿರುವ ಮೊಟ್ಟೆ ಬೆಂದಿದ್ದರೆ ಅದನ್ನು ನೀರಿನಿಂದ ಹೊರತೆಗೆದು ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ಅದರ ಸಿಪ್ಪೆ ತೆಗೆಯಿರಿ. ಬಳಿಕ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಮೊಟ್ಟೆಯನ್ನು ಚಾಕುವಿನಿಂದ ಕತ್ತರಿಸಿ (ಸಂಪೂರ್ಣವಾಗಿ ಅಲ್ಲ, ಮಧ್ಯ ಭಾಗದಷ್ಟು ಮಾತ್ರ) ತುಪ್ಪದಲ್ಲಿ ಬೆರೆಸಿ. ಇದಕ್ಕೆ ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಹೊರತೆಗೆದು ಒಂದು ತಟ್ಟೆಗೆ ಎತ್ತಿಡಿ.

ಇನ್ನು ಮಸಾಲೆ ತಯಾರಿಸೋಣ. ಇದಕ್ಕೆ ಹುರಿದಿಟ್ಟ ಬ್ಯಾಡಗಿ ಮೆಣಸು, ಕಾಳುಮೆಣಸು, ಜೀರಿಗೆ, ಸೋಂಪು, ಮೆಂತ್ಯ, ಸಾಸಿವೆ, ಗೋಡಂಬಿ, ಬೆಳ್ಳುಳ್ಳಿ, ಶುಂಠಿ, ಹುಣಸೆಹಣ್ಣನ್ನು ಮಿಕ್ಸಿ ಜಾರ್‌ಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ನಯವಾಗಿ ರುಬ್ಬಿಕೊಳ್ಳಿ. ಮೊಟ್ಟೆ ಹುರಿದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಕರಿಬೇವಿನ ಎಲೆ ಹಾಕಿ. ನಂತರ ರುಬ್ಬಿರುವ ಮಿಶ್ರಣವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡುತ್ತಿರುವಾಗ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಬೇಕು. ಮಿಶ್ರಣವನ್ನು ಚೆನ್ನಾಗಿ ಚಮಚದಿಂದ ಕಲಸುತ್ತಿರಬೇಕು. ಇದು ಬಣ್ಣ ಬದಲಾಗುವವರೆಗೆ ಕಲಸಬೇಕು. ಮಸಾಲೆ ಬಣ್ಣ ಕೆಂಪಾಗಿ ಬದಲಾಗುತ್ತದೆ, ಈ ವೇಳೆ ತುಪ್ಪ, ಮಸಾಲೆಯಿಂದ ಬೇರ್ಪಡುತ್ತದೆ. ಈ ರೀತಿ ಆದಾಗ ಸ್ವಲ್ಪ ನೀರು ಬೆರೆಸಿ ಮತ್ತೆ ಮಿಶ್ರಣ ಮಾಡಿ. ನಂತರ ಹುರಿದಿಟ್ಟ ಮೊಟ್ಟೆ ಹಾಕಿ ಮಿಶ್ರಣ ಮಾಡಬೇಕು.

ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿದ ನಂತರ ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಮೊಟ್ಟೆ ಘೀ ರೋಸ್ಟ್ ಸವಿಯಲು ಸಿದ್ಧ. ಒಮ್ಮೆ ತಯಾರಿಸಿ ನೋಡಿ ಖಂಡಿತ ಇಷ್ಟವಾಗಬಹುದು. ಅನ್ನ, ದೋಸೆ, ಚಪಾತಿ, ಪರೋಟ, ಇಡ್ಲಿಯೊಂದಿಗೆ ತಿನ್ನಬಹುದು ಅಥವಾ ಸೈಡ್ ಡಿಶ್ ಆಗಿಯೂ ಸವಿಯಬಹುದು.

Whats_app_banner