ಉಳಿದ ಅನ್ನದಿಂದ ಮಾಡಿ ರುಚಿಕರವಾದ ಗೋಬಿ ರೈಸ್: ಆಹಾ.. ಏನು ರುಚಿ ಗೊತ್ತಾ, ತಿಂದವರು ಸೂಪರ್ ಅಂತಾರೆ
ಅನ್ನ ಉಳಿದಿದ್ದರೆ ಚಿತ್ರಾನ್ನ, ಪುಳಿಯೋಗರೆ, ದೋಸೆ ಮಾಡುವವರೇ ಹೆಚ್ಚು. ಆದರೆ, ಇದರಿಂದ ರುಚಿಕರವಾದ ಗೋಬಿ ರೈಸ್ ಕೂಡ ಮಾಡಬಹುದು. ಹೋಟೆಲ್‍ಗಿಂತ ರುಚಿಕರವಾದ ರೆಸಿಪಿಯನ್ನು ಮನೆಯಲ್ಲಿಯೇ ಮಾಡಿ ನೋಡಿ. ಖಂಡಿತ ಇಷ್ಟಪಡುವಿರಿ. ಈ ರುಚಿಕರ ಗೋಬಿ ರೈಸ್ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಹೂಕೋಸುಗಳು ಹೆಚ್ಚಾಗಿ ಚಳಿಗಾಲದಲ್ಲಿ ಲಭ್ಯವಿರುವ ತರಕಾರಿ. ಇದರಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಬಹಳ ಮಂದಿ ಇಷ್ಟಪಡುವ ಗೋಬಿ ಮಂಚೂರಿಯನ್ ರೆಸಿಪಿಯನ್ನು ಹೂಕೋಸಿನಿಂದ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ, ಗೋಬಿ ರೈಸ್ ಕೂಡ ಬಹಳ ಜನಪ್ರಿಯವಾಗಿದೆ. ಇದನ್ನೂ ಕೂಡ ಬಹಳ ಮಂದಿ ಇಷ್ಟಪಟ್ಟು ತಿಂತಾರೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಅನ್ನ ಮಿಕ್ಕಿದ್ದರೆ ಈ ರೀತಿ ರುಚಿಕರವಾದ ಗೋಬಿ ರೈಸ್ ಮಾಡಿ ತಿನ್ನಬಹುದು. ಬಹಳ ಮಂದಿ ಅನ್ನ ಉಳಿದಿದ್ದರೆ ಪುಳಿಯೋಗರೆ, ಚಿತ್ರಾನ್ನ ಮಾಡಿ ತಿನ್ನುತ್ತಾರೆ. ಆದರೆ, ಇದರಿಂದ ರುಚಿಕರವಾದ ಗೋಬಿ ರೈಸ್ ಮಾಡಬಹುದು ಅಥವಾ ಬಾಸ್ಮತಿ ಅಕ್ಕಿಯಿಂದಲೂ ಮಾಡಬಹುದು. ಈ ರೆಸಿಪಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.
ಗೋಬಿ ರೈಸ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಅನ್ನ- ಎರಡು ಕಪ್, ಕತ್ತರಿಸಿದ ಹೂಕೋಸು- ಒಂದು ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನಪುಡಿ- ಒಂದು ಟೀ ಚಮಚ, ಕಾಳುಮೆಣಸಿನ ಪುಡಿ- ಅರ್ಧ ಟೀ ಚಮಚ, ಜೀರಿಗೆ ಪುಡಿ- ಅರ್ಧ ಟೀ ಚಮಚ, ಗರಂ ಮಸಾಲೆ- ಒಂದು ಟೀ ಚಮಚ, ಎಣ್ಣೆ- ಕರಿಯಲು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಮೈದಾ- ಕಾಲು ಕಪ್, ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- ಎರಡು ಟೀ ಚಮಚ, ಮೊಸರು- ಎರಡು ಟೀ ಚಮಚ, ನೀರು- ಬೇಕಾದಷ್ಟು, ಮೆಣಸಿನಕಾಯಿ- 3, ಕರಿಬೇವು- 1 ಹಿಡಿ, ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಈರುಳ್ಳಿ- ಒಂದು, ಕ್ಯಾರೆಟ್- ಒಂದು, ಎಲೆಕೋಸು- ಸ್ವಲ್ಪ, ಕ್ಯಾಪ್ಸಿಕಂ- ಸ್ವಲ್ಪ, ಸೋಯಾ ಸಾಸ್- ಒಂದು ಟೀ ಚಮಚ, ವಿನೆಗರ್ ಅಥವಾ ನಿಂಬೆರಸ- ಅರ್ಧ ಟೀ ಚಮಚ.
ಪಾಕವಿಧಾನ: ಮಿಕ್ಕಿರುವ ಅನ್ನವನ್ನು ಬಳಸಬಹುದು ಅಥವಾ ಬಾಸ್ಮತಿ ಅಕ್ಕಿ ಬೇಕು ಎಂದಿದ್ದಲ್ಲಿ ಅದನ್ನು ಬೇಯಿಸಿ ಇಡಿ.
- ಹೂಕೋಸನ್ನು ಒಂದೇ ಗಾತ್ರದಲ್ಲಿ ಕತ್ತರಿಸಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ.
- ಒಂದು ಪಾತ್ರೆಯಲ್ಲಿ ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಮೊಸರು, ಮೈದಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣಕ್ಕೆ ಕತ್ತರಿಸಿ ಹುಕೋಸನ್ನು ಸೇರಿಸಿ, ಮಿಶ್ರಣ ಮಾಡಿ.
- ಎರಡು ಚಮಚ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಐದು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
- ಈಗ ಬಾಣಲೆಯನ್ನು ಸ್ಟೌವ್ ಮೇಲೆ ಇರಿಸಿ, ಎಣ್ಣೆ ಹಾಕಿ.
- ಡೀಪ್ ಫ್ರೈ ಮಾಡಲು ಅಗತ್ಯವಿರುವಷ್ಟು ಎಣ್ಣೆಯನ್ನು ಸೇರಿಸಿ.
- ಎಣ್ಣೆ ಬಿಸಿಯಾದ ನಂತರ, ಮಿಶ್ರಣ ಮಾಡಿಟ್ಟಿರುವ ಹೂಕೋಸನ್ನು ಸ್ವಲ್ಪ ಸ್ವಲ್ವವೇ ಸೇರಿಸುತ್ತಾ ಚೆನ್ನಾಗಿ ಕರಿಯಿರಿ. ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ.
- ಎಲ್ಲವನ್ನೂ ಕರಿದ ನಂತರ ಅವುಗಳನ್ನು ಪಕ್ಕಕ್ಕೆ ಇರಿಸಿ.
- ಈಗ ಮತ್ತೊಂದು ಕಡಾಯಿಯನ್ನು ಸ್ಟೌವ್ ಮೇಲೆ ಇರಿಸಿ. ಅದಕ್ಕೆ ಎರಡು ಚಮಚ ಎಣ್ಣೆಯನ್ನು ಸೇರಿಸಿ.
- ಎಣ್ಣೆಯಲ್ಲಿ ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಎಲೆಕೋಸು, ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
- ತರಕಾರಿ ಬೆಂದ ನಂತರ, ಕರಿದ ಹೂಕೋಸನ್ನು ಸೇರಿಸಿ ಹುರಿಯಿರಿ.
- ಈಗ ಮೊದಲೇ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಸ್ಟೌವ್ ಉರಿ ಕಡಿಮೆ ಇಟ್ಟು ಮಿಶ್ರಣ ಮಾಡಿ.
- ಇದಕ್ಕೆ ಕಾಲು ಚಮಚ ಮೆಣಸಿನ ಪುಡಿ, ಕಾಲು ಚಮಚ ಕಾಳುಮೆಣಸಿನ ಪುಡಿ, ಕಾಲು ಚಮಚ ಗರಂ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಉಪ್ಪು ಸರಿಯಾಗಿದೆಯಾ ನೋಡಿ, ಇಲ್ಲದಿದ್ದರೆ ಸ್ವಲ್ಪ ಸೇರಿಸಿ ಮಿಶ್ರಣ ಮಾಡಿ.
- ನಂತರ ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಕರವಾದ ಗೋಬಿ ರೈಸ್ ಸವಿಯಲು ಸಿದ್ಧ.
ಈ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ. ಬಹಳ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕು ಎನಿಸುತ್ತದೆ. ಹೋಟೆಲ್‌ಗಳಲ್ಲಿ ತಿನ್ನುವುದಕ್ಕಿಂತಲೂ ಮನೆಯಲ್ಲೇ ಮಾಡಿ ತಿಂದ್ರೆ ರುಚಿ ಇನ್ನೂ ಹೆಚ್ಚಿರುತ್ತದೆ. ಅಲ್ಲದೆ, ಮನೆಯಲ್ಲಿ ಸ್ವಚ್ಛವಾಗಿ ಮಾಡುವುದರಿಂದ ಆರೋಗ್ಯಕ್ಕೂ ಉತ್ತಮ. ಹೂಕೋಸಿನಲ್ಲಿ ವಿಷಕಾರಿ ಅಂಶಗಳು, ಹುಳುಗಳು ಇರುತ್ತವೆ. ಮನೆಯಲ್ಲಿ ಮಾಡುವಾಗ ಅದನ್ನು ಬಿಸಿ ನೀರಿನಲ್ಲಿ ತೊಳೆದು ಮಾಡುತ್ತೇವೆ. ಹೀಗಾಗಿ ಗೋಬಿ ರೆಸಿಪಿಗಳನ್ನು ಮನೆಯಲ್ಲೇ ಮಾಡಿ ತಿನ್ನುವುದು ಉತ್ತಮ. ಈ ಪಾಕವಿಧಾನ ತುಂಬಾ ರುಚಿಕರವಾಗಿರುತ್ತದೆ.
ವಿಭಾಗ