ಚಳಿಗಾಲದ ಸಂಜೆ ವೇಳೆ ಏನನ್ನಾದರೂ ತಿನ್ನಬೇಕು ಎಂದೆನಿಸಿದರೆ ಮಾಡಿ ಬೆಲ್ಲದ ಮುರುಕು: ಮಕ್ಕಳು ಇಷ್ಟಪಟ್ಟು ತಿಂತಾರೆ
ಚಳಿಗಾಲದ ಸಂಜೆ ವೇಳೆ ಏನನ್ನಾದರೂ ತಿನ್ನಬೇಕು ಎಂದೆನಿಸಿದರೆ, ಗರಿಗರಿ ಬೆಲ್ಲದ ಮುರುಕು ರೆಸಿಪಿ ತಯಾರಿಸಿ. ಮಕ್ಕಳು ಬೇಕರಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತಿದ್ದರೆ ಅವರಿಗೆ ಇದನ್ನು ಮಾಡಿ ಕೊಡಿ. ಖಂಡಿತ ಇಷ್ಟಪಟ್ಟು ತಿಂತಾರೆ. ಆರೋಗ್ಯಕ್ಕೂ ಇದು ಉತ್ತಮ. ಬೆಲ್ಲದ ಮುರುಕು ತಯಾರಿಸುವುದು ಹೇಗೆ, ಎಂಬುದು ಇಲ್ಲಿದೆ.
ಚುಮು ಚುಮು ಚಳಿಗೆ ಸಂಜೆ ಏನನ್ನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಹಾಗಿದ್ದರೆ ರುಚಿಕರವಾದ ಬೆಲ್ಲದ ಮುರುಕು ಮಾಡಿ ತಿನ್ನಿರಿ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನು ಒಮ್ಮೆ ತಯಾರಿಸಿದ ನಂತರ ಎರಡರಿಂದ ಮೂರು ವಾರಗಳವರೆಗೆ ತಾಜಾವಾಗಿರುತ್ತದೆ. ಮಕ್ಕಳು ಬೇಕರಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತಿದ್ದರೆ ಅವರಿಗೆ ಇದನ್ನು ಮಾಡಿ ಕೊಡಿ. ಖಂಡಿತ ಇಷ್ಟಪಟ್ಟು ತಿಂತಾರೆ. ಆರೋಗ್ಯಕ್ಕೂ ಉತ್ತಮ. ರಕ್ತಹೀನತೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿ. ಗೋಧಿ ಹಿಟ್ಟು ಹಾಗೂ ಬೆಲ್ಲದಿಂದ ಮಾಡಿದ ಈ ಬೆಲ್ಲದ ಮುರುಕು ರೆಸಿಪಿ ತಯಾರಿಸುವುದು ತುಂಬಾನೇ ಸರಳ. ಮೈದಾ ಹಿಟ್ಟಿನಿಂದ ಮಾಡಿದ ಆಹಾರಗಳಿಗಿಂತ ಈ ಗೋಧಿ ಹಿಟ್ಟಿನಿಂದ ತಯಾರಿಸಿದ ತಿಂಡಿ ಆರೋಗ್ಯಕ್ಕೆ ಉತ್ತಮ. ಇಲ್ಲಿದೆ ಗರಿಗರಿ ಬೆಲ್ಲದ ಮುರುಕು ರೆಸಿಪಿ ಮಾಡುವ ವಿಧಾನ.
ಬೆಲ್ಲದ ಮುರುಕು ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು- ಎರಡು ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಬೆಣ್ಣೆ - ಐವತ್ತು ಗ್ರಾಂ, ನೀರು- ಬೇಕಾದಷ್ಟು, ತುರಿದ ಬೆಲ್ಲ- ಎರಡೂವರೆ ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ತುಪ್ಪ- 1 ಟೀ ಚಮಚ.
ತಯಾರಿಸುವ ವಿಧಾನ: ಬೆಲ್ಲದ ಮುರುಕು ತಯಾರಿಸುವ ಮೊದಲು, ಗೋಧಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
- ಅರ್ಧ ಚಮಚ ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
- ಈಗ ಬೆಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ.
- ಸಾಕಷ್ಟು ನೀರು ಸೇರಿಸಿ. ಚಪಾತಿ ಹಿಟ್ಟನ್ನು ಕಲಸುವಂತೆ ಈ ಹಿಟ್ಟನ್ನು ಕಲಸಿ.
- ಚೆನ್ನಾಗಿ ಕಲಸಿದ ನಂತರ, ಹಿಟ್ಟನ್ನು 10 ನಿಮಿಷಗಳ ಕಾಲ ಪಕ್ಕಕ್ಕೆ ಬಿಡಿ.
- ನಂತರ ಒಂದು ಸಣ್ಣ ಉಂಡೆ ತೆಗೆದುಕೊಂಡು ಅದನ್ನು ದಪ್ಪ ಚಪಾತಿಗಳಾಗಿ ಒತ್ತಿ.
- ಚಾಕುವಿನಿಂದ ಕೊಂಬುಗಳಂತೆ ಇದನ್ನು ಕತ್ತರಿಸಿ (ಮುರುಕು ಇರುವಂತೆ ಕತ್ತರಿಸಬೇಕು).
- ಕಡಾಯಿಯನ್ನು ಸ್ಟೌವ್ ಮೇಲೆ ಇರಿಸಿ, ಡೀಪ್ ಫ್ರೈ ಮಾಡಲು ಸಾಕಷ್ಟು ಎಣ್ಣೆಯನ್ನು ಸೇರಿಸಿ.
- ಎಣ್ಣೆ ಕಾದ ನಂತರ ಈ ಮುರುಕನ್ನು ಅದಕ್ಕೆ ಸೇರಿಸಿ, ಬಣ್ಣ ಬದಲಾಗುವವರೆಗೆ ಹುರಿಯಿರಿ.
- ಇನ್ನೊಂದು ಪಾತ್ರೆಯಲ್ಲಿ ಬೆಲ್ಲ, ಏಲಕ್ಕಿ ಪುಡಿ ಮತ್ತು ಸಾಕಷ್ಟು ನೀರನ್ನು ಸೇರಿಸಿ ಪಾಕ ತಯಾರಿಸಿ.
- ಬೆಲ್ಲದ ಪಾಕಕ್ಕೆ ಏಲಕ್ಕಿ ಪುಡಿ ಹಾಗೂ ತುಪ್ಪ ಸೇರಿಸಿ.
- ಬೆಲ್ಲ ಒಂದೆಳೆ ಪಾಕ ಬಂದ ನಂತರ ಕರಿದ ಮುರುಕನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಅವುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಒಂದು ತಟ್ಟೆಗೆ ಹಾಕಿ, ತಣ್ಣಗಾಗುವವರೆಗೆ ಹಾಗೆಯೇ ಬಿಡಿ.
- ಇದನ್ನು ಒಂದು ಡಬ್ಬಾಗೆ ಸಂಗ್ರಹಿಸಿ, ಅವು ಎರಡರಿಂದ ನಾಲ್ಕು ವಾರಗಳವರೆಗೆ ತಾಜಾವಾಗಿರುತ್ತವೆ.
ಇಲ್ಲಿ ಬಳಸಿರುವ ಎಲ್ಲಾ ಸಾಮಗ್ರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಗೋಧಿ ಹಿಟ್ಟಿನಿಂದ ಏಲಕ್ಕಿ ಪುಡಿಯವರೆಗೆ ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ. ಹೀಗಾಗಿ ಹೊರಗೆ ಬೇಕರಿಗಳಲ್ಲಿ ತಿಂಡಿ ತಿನ್ನುವುದಕ್ಕಿಂತ ಇದನ್ನು ತಯಾರಿಸಿ ತಿನ್ನುವುದು ಉತ್ತಮ. ತಿನ್ನಲೂ ಬಹಳ ರುಚಿಕರವಾಗಿರುತ್ತದೆ. ಮಕ್ಕಳು ಕೂಡ ಬಹಳ ಇಷ್ಟಪಟ್ಟು ತಿಂತಾರೆ.