ಬೆಳಗ್ಗಿನ ಉಪಾಹಾರಕ್ಕಾದ್ರೂ ಸರಿ, ಸಂಜೆ ಸ್ನಾಕ್ಸ್‌ಗಾದ್ರೂ ತಯಾರಿಸಿ ರುಚಿಕರ ಮಂಗಳೂರು ಬನ್ಸ್: ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗಿನ ಉಪಾಹಾರಕ್ಕಾದ್ರೂ ಸರಿ, ಸಂಜೆ ಸ್ನಾಕ್ಸ್‌ಗಾದ್ರೂ ತಯಾರಿಸಿ ರುಚಿಕರ ಮಂಗಳೂರು ಬನ್ಸ್: ಇಲ್ಲಿದೆ ಪಾಕವಿಧಾನ

ಬೆಳಗ್ಗಿನ ಉಪಾಹಾರಕ್ಕಾದ್ರೂ ಸರಿ, ಸಂಜೆ ಸ್ನಾಕ್ಸ್‌ಗಾದ್ರೂ ತಯಾರಿಸಿ ರುಚಿಕರ ಮಂಗಳೂರು ಬನ್ಸ್: ಇಲ್ಲಿದೆ ಪಾಕವಿಧಾನ

ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಭಾಗದಲ್ಲಿ ಹುಟ್ಟಿಕೊಂಡ ಬನ್ಸ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರ ಖಾದ್ಯ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಇದನ್ನು ತಿನ್ನಬಹುದು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು. ಮಂಗಳೂರು ಬನ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳೂರು ಬನ್ಸ್ ಪಾಕವಿಧಾನ
ಮಂಗಳೂರು ಬನ್ಸ್ ಪಾಕವಿಧಾನ (Pinterest )

ಮಂಗಳೂರು ಬನ್ಸ್ ಹೆಸರು ಕೇಳಿದ್ರೆ ಸಾಕು ಹಲವರ ಬಾಯಲ್ಲಿ ನೀರೂರುತ್ತದೆ. ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಭಾಗದಲ್ಲಿ ಹುಟ್ಟಿಕೊಂಡ ಈ ಸಿಹಿಖಾದ್ಯ ಬಹಳ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರ ಖಾದ್ಯ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಇದನ್ನು ತಿನ್ನಬಹುದು. ಮುಖ್ಯವಾಗಿ ಬಾಳೆಹಣ್ಣು, ಸಕ್ಕರೆ, ಮೈದಾ ಹಿಟ್ಟಿನಿಂದ ಇದನ್ನು ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು ಅಥವಾ ಹಾಗೆಯೇ ತಿನ್ನಲು ಕೂಡ ಚೆನ್ನಾಗಿರುತ್ತದೆ. ಹಾಗಿದ್ದರೆ ಮಂಗಳೂರು ಬನ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳೂರು ಬನ್ಸ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಚುಕ್ಕಿ ಬಾಳೆಹಣ್ಣು- 2, ಸಕ್ಕರೆ ಅಥವಾ ಬೆಲ್ಲ- ಕಾಲು ಕಪ್, ಜೀರಿಗೆ- 2 ಚಮಚ, ಅಡುಗೆ ಸೋಡಾ- ಕಾಲು ಚಮಚ, ಮೊಸರು- ಕಾಲು ಕಪ್, ಅಡುಗೆ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಮೈದಾ- 3 ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಬಾಳೆಹಣ್ಣು ಹಾಗೂ ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ನಂತರ ಇದಕ್ಕೆ ಜೀರಿಗೆ ಅಡುಗೆ ಸೋಡಾ, ಮೊಸರು, ಅಡುಗೆ ಎಣ್ಣೆ ಹಾಕಿ ಕೈಯಿಂದಲೇ ಚೆನ್ನಾಗಿ ಕಲಸಿ. ನಂತರ ಮೈದಾ ಹಾಕಿ ಚೆನ್ನಾಗಿ ಕಲಸಿ. ಮೈದಾ ಬೇಕಿದ್ದರೆ ಮತ್ತಷ್ಟು ಹಾಕಬಹುದು. ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ 2 ಚಮಚದಷ್ಟು ಎಣ್ಣೆ ಹಾಕಿ ಸವರಿ 6 ರಿಂದ 8 ಗಂಟೆ ಕಾಲ ಇದನ್ನು ಮುಚ್ಚಳವನ್ನು ಮುಚ್ಚಿ ಇಡಿ.

ಈ ಮಿಶ್ರಣವನ್ನು ರಾತ್ರಿ ಮಾಡಿ ಬೆಳಗ್ಗೆವರೆಗೆ ಹಾಗೆ ಇಡಬಹುದು. ಅಥವಾ ಬೆಳಗ್ಗೆ ಹಿಟ್ಟನ್ನು ಮಿಶ್ರಣ ಮಾಡಿ ಸಂಜೆವರೆಗೂ ಹಾಗೆಯೇ ಇಡಬಹುದು. 8 ಗಂಟೆ ನಂತರ ಹಿಟ್ಟನ್ನು ಕೈಯಿಂದ ಚೆನ್ನಾಗಿ ನಾದಿಕೊಳ್ಳಿ. ನಂತರ ಸ್ವಲ್ಪ ದೊಡ್ಡ ಉಂಡೆ ತೆಗೆದುಕೊಂಡು ಚಪಾತಿ ಲಟ್ಟಣಿಗೆಯಲ್ಲಿ ಲಟ್ಟಿಸಿ. ಸ್ವಲ್ಪ ಮೈದಾ ಹಿಟ್ಟು ಹಾಕಿ ಲಟ್ಟಿಸಿ. ತೆಳ್ಳಗೆ ಲಟ್ಟಿಸಬಾರದು, ದಪ್ಪವಾಗಿ ಇದನ್ನು ಲಟ್ಟಿಸಬೇಕು.

ಇನ್ನು ಒಲೆ ಮೇಲೆ ಒಂದು ಬಾಣಲೆಯಿಟ್ಟು ಅದಕ್ಕೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಇದನ್ನು ಪೂರಿ ಕರಿಯುವಂತೆ ಕರಿಯಬೇಕು. ಎಣ್ಣೆ ಕಾದ ನಂತರ ಬನ್ಸ್ ಅನ್ನು ಎಣ್ಣೆಗೆ ಹಾಕಿ. ಎರಡೂ ಕಡೆ ಚೆನ್ನಾಗಿ ಕರಿಯಿರಿ. ಕರಿಯುವ ವೇಳೆ ಬನ್ಸ್ ಉಬ್ಬಿ ಬರುತ್ತದೆ. ಇಷ್ಟಾದರೆ ರುಚಿಕರವಾದ ಬನ್ಸ್ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ತಿನ್ನಬಹುದು. ಅಥವಾ ಹಾಗೆಯೇ ತಿನ್ನಲು ಕೂಡ ರುಚಿಕರವಾಗಿರುತ್ತದೆ.

ಕರ್ನಾಟಕದ ಮಂಗಳೂರು ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಬನ್ಸ್, ಹೊರ ಭಾಗ ಗರಿಗರಿಯಾಗಿದ್ದರೆ ಒಳಭಾಗ ತುಂಬಾ ಮೃದುವಾಗಿರುತ್ತದೆ. ಇದನ್ನು ಬೆಳಗ್ಗೆ ತಿಂಡಿ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ತಿನ್ನಬಹುದು. ತಯಾರಿಸುವುದು ತುಂಬಾ ಸರಳ. ಮೇಲೆ ತಿಳಿಸಿದ ಪಾಕವಿಧಾನವನ್ನೇ ಅನುಸರಿಸಿ. ಸಕ್ಕರೆ ಬದಲು ಬೇಕಿದ್ದರೆ ಬೆಲ್ಲ ಕೂಡ ಹಾಕಿ ಮಾಡಬಹುದು. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner