ಈ ರೀತಿ ತಯಾರಿಸಿ ಬಾಯಲ್ಲಿ ನೀರೂರುವ ಮಾವಿನ ಹಣ್ಣಿನ ಚೀಸ್ ಕೇಕ್; ರೆಸಿಪಿ ತುಂಬಾ ಸರಳ
ಮಾಗಿದ ಮಾವಿನಹಣ್ಣನ್ನು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಮಾವಿನಹಣ್ಣಿನ ಚೀಸ್ ಕೇಕ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಸಿಗೆ ಕಾಲ ಇಷ್ಟವಿಲ್ಲದಿದ್ದರೂ ಬಹುತೇಕರು ಮಾವಿನಹಣ್ಣಿಗಾಗಿ ಈ ಋತುವನ್ನು ಇಷ್ಟಪಡುತ್ತಾರೆ. ಮಾಗಿದ ಮಾವಿನಹಣ್ಣನ್ನು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಮಾವಿನ ಹಣ್ಣಿನ ಶೇಕ್, ಚಟ್ನಿ, ಆಮ್ ಪನ್ನಾ, ಕೇಕ್, ಸಲಾಡ್, ಸ್ಮೂಥಿ, ಐಸ್ ಕ್ರೀಮ್, ಖೀರ್ ಮುಂತಾದ ವೈವಿಧ್ಯಮಯ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.
ಹಸಿ ಮಾವಿನಕಾಯಿಯಿಂದ ತಯಾರಿಸಲಾಗುವ ಆಮ್ ಪನ್ನಾ ದೇಹವನ್ನು ತಂಪಾಗಿಸುತ್ತದೆ. ಹಾಗೆಯೇ ಮಾವಿನಹಣ್ಣಿನ ಶೇಕ್ ಅದರ ಅದ್ಭುತ ರುಚಿಯೊಂದಿಗೆ ನಾಲಗೆಯನ್ನು ಸಿಹಿಗೊಳಿಸುತ್ತದೆ. ಮಾವಿನ ಹಣ್ಣಿನಿಂದ ವಿಶಿಷ್ಟ ಹಾಗೂ ರುಚಿಕರ ಪಾಕವಿಧಾನಗಳನ್ನು ಪ್ರಯತ್ನಿಸಲು ಬಯಸಿದರೆ ಇಲ್ಲಿದೆ ಮ್ಯಾಂಗೋ (ಮಾವಿನಹಣ್ಣಿನ) ಚೀಸ್ ಕೇಕ್ ರೆಸಿಪಿ. ಇದನ್ನು ತಯಾರಿಸುವುದು ತುಂಬಾನೇ ಸರಳ. ಇಲ್ಲಿದೆ ರೆಸಿಪಿ.
ಮ್ಯಾಂಗೋ (ಮಾವಿನ) ಚೀಸ್ ಕೇಕ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಮಾರಿ ಬಿಸ್ಕತ್ತು - 125 ಗ್ರಾಂ, ಬೆಣ್ಣೆ- 75 ಗ್ರಾಂ, ಕ್ರೀಮ್ ಚೀಸ್- 500 ಗ್ರಾಂ, ಸಕ್ಕರೆ- 100 ಗ್ರಾಂ, ಮೊಟ್ಟೆ -100 ಗ್ರಾಂ, ವೆನಿಲ್ಲಾ ಎಸೆನ್ಸ್, ಕಾರ್ನ್ ಫ್ಲೋರ್ -12 ಗ್ರಾಂ, ಮೊಸರು - 125 ಗ್ರಾಂ, ಮಾವಿನ ಪಲ್ಪ್ (ರಸ)- 120 ಗ್ರಾಂ, ಕತ್ತರಿಸಿದ ಮಾವಿನಹಣ್ಣು- 400 ಗ್ರಾಂ.
ಮಾಡುವ ವಿಧಾನ: ಕೇಕ್ ಅಚ್ಚಿನ ತಳಭಾಗದಲ್ಲಿ ಬಿಸ್ಕತ್ತನ್ನು ಪುಡಿ ಮಾಡಿ ಹಾಕಿಡಿ. ಕ್ರೀಮ್ ಚೀಸ್ ಮತ್ತು ಸಕ್ಕರೆಯನ್ನು ಒಟ್ಟಿಗೆ ಮಿಶ್ರಣ ಮಾಡಿ. ಮೊಟ್ಟೆಯನ್ನು ಒಡೆದು ಅದಕ್ಕೆ ನಿಧಾನವಾಗಿ ವೆನಿಲ್ಲಾ ಎಸೆನ್ಸ್ ಸೇರಿಸಿ. ನಂತರ ಕಾರ್ನ್ ಫ್ಲೋರ್ ಬೆರೆಸಿ. ಮೊಸರು ಮತ್ತು ಮಾವಿನ ತಿರುಳನ್ನು ಮಿಶ್ರಣ ಮಾಡಿ.
ಚೀಸ್ ಕೇಕ್ ಮಿಶ್ರಣದಿಂದ ಅಚ್ಚನ್ನು ಮುಕ್ಕಾಲು ಭಾಗಕ್ಕೆ ತುಂಬಿಸಿ. ಮೈಕ್ರೋವೇವ್ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೇಕ್ ಮಾಡಿ. ಇದು ತಣ್ಣಗಾದ ನಂತರ ಕತ್ತರಿಸಿದ ಮಾವಿನಹಣ್ಣುಗಳನ್ನು ಕೇಕ್ ಮೇಲಿಟ್ಟರೆ ರುಚಿಕರ ಮಾವಿನಹಣ್ಣಿನ ಚೀಸ್ ಕೇಕ್ ಸವಿಯಲು ಸಿದ್ಧ.
ಈ ಪಾಕವಿಧಾನವನ್ನು ನೀವು ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ಇಷ್ಟಪಡುವಿರಿ. ಬಾಯಲ್ಲಿ ನೀರೂರುವ ಈ ಕೇಕ್ ಅನ್ನು ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಮಾವಿನಹಣ್ಣಿನಿಂದ ತರಹೇವಾರಿ ರೆಸಿಪಿಗಳನ್ನು ಪ್ರಯತ್ನಿಸಬಹುದು. ಅವುಗಳಲ್ಲಿ ಇದೂ ಒಂದು. ಈ ಮ್ಯಾಂಗೋ ಚೀಸ್ ಕೇಕ್ ತಯಾರಿಸುವುದು ತುಂಬಾನೇ ಸರಳ. ಒಮ್ಮೆ ತಯಾರಿಸಿ ನೋಡಿ. ಮತ್ತೆ ಮತ್ತೆ ಮಾಡಿ ತಿನ್ನುವಿರಿ.
ವಿಭಾಗ