ಮನೆಯಲ್ಲೇ ಮಾಡಿ ರುಚಿಕರ ಕಾಡು ಮಾವಿನಹಣ್ಣಿನ ಪಾಯಸ; ಇದರ ರುಚಿ ಸವಿದವರಿಗಷ್ಟೇ ಗೊತ್ತು
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೇ ಮಾಡಿ ರುಚಿಕರ ಕಾಡು ಮಾವಿನಹಣ್ಣಿನ ಪಾಯಸ; ಇದರ ರುಚಿ ಸವಿದವರಿಗಷ್ಟೇ ಗೊತ್ತು

ಮನೆಯಲ್ಲೇ ಮಾಡಿ ರುಚಿಕರ ಕಾಡು ಮಾವಿನಹಣ್ಣಿನ ಪಾಯಸ; ಇದರ ರುಚಿ ಸವಿದವರಿಗಷ್ಟೇ ಗೊತ್ತು

ಕರಾವಳಿಯಲ್ಲಿ ಕಾಡು ಮಾವಿನಹಣ್ಣಿನ ಪಾಯಸ ಮಾಡುತ್ತಾರೆ. ಇದರ ರುಚಿ ಸವಿದವರಿಗಷ್ಟೇ ಗೊತ್ತು. ಈ ಸಿಹಿಖಾದ್ಯವನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮನೆಯಲ್ಲೇ ಮಾಡಿ ರುಚಿಕರ ಕಾಡು ಮಾವಿನಹಣ್ಣಿ ಪಾಯಸ
ಮನೆಯಲ್ಲೇ ಮಾಡಿ ರುಚಿಕರ ಕಾಡು ಮಾವಿನಹಣ್ಣಿ ಪಾಯಸ (Pixabay)

ಬೇಸಿಗೆ ಬಂತು ಅಂದ್ರೆ ಹಣ್ಣುಗಳ ರಾಜನದ್ದೇ ಕಾರುಬಾರು. ಮಾವಿನಹಣ್ಣನ್ನು ಸವಿಯಲು ಬೇಸಿಗೆ ಇಷ್ಟಪಡುವವರು ಅನೇಕರಿದ್ದಾರೆ. ಮಾವಿನಹಣ್ಣು ಸವಿಯಲು ರುಚಿಕರವಾಗಿರುವುದಲ್ಲದೆ, ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಮಾವಿನ ಹಣ್ಣಿನಿಂದ ತರಹೇವಾರಿ ಖಾದ್ಯಗಳನ್ನು ಕೂಡ ತಯಾರಿಸಬಹುದು. ಕರಾವಳಿಯಲ್ಲಿ ಕಾಡು ಮಾವಿನಹಣ್ಣಿನ ಪಾಯಸ ಮಾಡುತ್ತಾರೆ. ಇದು ಬಹಳ ರುಚಿಕರವಾಗಿರುತ್ತದೆ. ಈ ಸಿಹಿಖಾದ್ಯವನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕಾಡು ಮಾವಿನಹಣ್ಣಿನ ಪಾಯಸ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಕಾಡುಮಾವಿನ ಹಣ್ಣು- 8, ತೆಂಗಿನತುರಿ- 3.5 ಕಪ್, ನೆನೆಸಿದ ಅಕ್ಕಿ- ಅರ್ಧ ಕಪ್, ಬೆಲ್ಲ- 300 ಗ್ರಾಂ, ನೀರು- ಅಗತ್ಯಕ್ಕೆ ತಕ್ಕಷ್ಟು, ಏಲಕ್ಕಿ- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಕಾಡು ಮಾವಿನಹಣ್ಣನ್ನು ಚೆನ್ನಾಗಿ ತೊಳೆಯಿರಿ. ಕಾಡು ಮಾವಿನಹಣ್ಣಿನ ಬದಲು ಹುಳಿ-ಸಿಹಿ ರುಚಿ ಹೊಂದಿರುವ ಇತರೆ ಮಾವಿನಹಣ್ಣುಗಳನ್ನು ಕೂಡ ಬಳಸಬಹುದು. ಆದರೆ, ಕಾಡು ಮಾವಿನಹಣ್ಣಿನ ಪಾಯಸವು ಹೆಚ್ಚು ರುಚಿ ಹೊಂದಿರುತ್ತದೆ.

ನಂತರ ಮಾವಿನಹಣ್ಣನ್ನು ಕತ್ತರಿಸಿ ಅದರ ಸಿಪ್ಪೆಯನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹಿಂಡಿಕೊಳ್ಳಿ. ರಸವನ್ನು ತೆಗೆದ ನಂತರ ಸಿಪ್ಪೆಯನ್ನು ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಗೆ ಹಾಕಿ. ಜೊತೆಗೆ ಗೊರಟೆಯನ್ನು ಕೂಡ ಹಿಂಡದೆ ಹಾಗೆಯೇ ಪಾತ್ರೆಗೆ ಸೇರಿಸಿ.

ಈಗ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇರಿಸಿ ಅದಕ್ಕೆ ಅರ್ಧ ಕಪ್‍ನಷ್ಟು ನೀರು ಹಾಕಿ ಕುದಿಸಿ. ನೀರು ಚೆನ್ನಾಗಿ ಕುದಿ ಬಂದ ನಂತರ ಗೊರಟೆ ಸಹಿತ ರಸ ಇರುವ ಮಾವಿನಹಣ್ಣುಗಳನ್ನು ಕುದಿಯುತ್ತಿರುವ ನೀರಿಗೆ ಬೆರೆಸಿ.

ನಂತರ ಪಾತ್ರೆಯನ್ನು ಮುಚ್ಚಿ ಮಾವಿನಹಣ್ಣನ್ನು ಬೇಯಿಸಿ. ಈ ವೇಳೆ ತೆಂಗಿನತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಂಡು ಇದರ ಹಾಲು ತೆಗೆದು ಪಾತ್ರೆಯಲ್ಲಿ ಹಾಕಿಡಬೇಕು. ಮಾವಿನಹಣ್ಣು ಚೆನ್ನಾಗಿ ಬೆಂದಾಗ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ. ಬೆಲ್ಲ ಕರಗಿದ ನಂತರ ತೆಂಗಿನಹಾಲನ್ನು ಬೆರೆಸಿ. ಇದು ಕುದಿ ಬಂದಾಗ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿದರೆ ರುಚಿಕರ ಮಾವಿನ ಹಣ್ಣಿನ ಪಾಯಸ ಸಿದ್ಧ. ಒಮ್ಮೆ ಮಾಡಿ ನೋಡಿ ಮನೆ ಮಂದಿ ಇಷ್ಟಪಟ್ಟು ತಿನ್ನುತ್ತಾರೆ.

ಮಾವಿನಹಣ್ಣಿನ ಆರೋಗ್ಯ ಪ್ರಯೋಜನ

  • ಮಾವಿನಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತವೆ. ಬೇಸಿಗೆಯಲ್ಲಿ ಆಲಸ್ಯವನ್ನು ಅನುಭವಿಸಿದಾಗ ಮಾವು ತಿನ್ನುವುದರಿಂದ ಅಥವಾ ಇದರ ಪಾಯಸ ಮಾಡಿ ಸವಿಯುವುದರಿಂದ ತಕ್ಷಣದ ಶಕ್ತಿಯನ್ನು ನೀಡುತ್ತದೆ.
  • ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಕಾರಿ.
  • ಮಾವಿನಹಣ್ಣಿನಲ್ಲಿ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
  • ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
  • ಈ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
  • ಮಾವಿನಹಣ್ಣಿನಲ್ಲಿ ಬೀಟಾ-ಕ್ಯಾರೋಟಿನ್ ಇದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
  • ಮಾವಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೆಸರುಬೇಳೆ, ಕಡಲೆಬೇಳೆ ಪಾಯಸ ತಿಂದಿರುವಿರಿ ಸೋರೆಕಾಯಿ ಪಾಯಸ ಸವಿದಿದ್ದೀರಾ: ಒಮ್ಮೆ ಮಾಡಿ ನೋಡಿ, ಮನೆಮಂದಿ ಇಷ್ಟಪಟ್ಟು ತಿಂತಾರೆ

Priyanka Gowda

eMail