ಕ್ಯಾರೆಟ್ ಹಲ್ವಾ ತಿಂದಿರಬಹುದು, ಇಲ್ಲಿದೆ ಕ್ಯಾರೆಟ್ ರಸಗುಲ್ಲಾ ರೆಸಿಪಿ: ತಯಾರಿಸುವುದು ತುಂಬಾ ಸರಳ
ಕನ್ನಡ ಸುದ್ದಿ  /  ಜೀವನಶೈಲಿ  /  ಕ್ಯಾರೆಟ್ ಹಲ್ವಾ ತಿಂದಿರಬಹುದು, ಇಲ್ಲಿದೆ ಕ್ಯಾರೆಟ್ ರಸಗುಲ್ಲಾ ರೆಸಿಪಿ: ತಯಾರಿಸುವುದು ತುಂಬಾ ಸರಳ

ಕ್ಯಾರೆಟ್ ಹಲ್ವಾ ತಿಂದಿರಬಹುದು, ಇಲ್ಲಿದೆ ಕ್ಯಾರೆಟ್ ರಸಗುಲ್ಲಾ ರೆಸಿಪಿ: ತಯಾರಿಸುವುದು ತುಂಬಾ ಸರಳ

ಕ್ಯಾರೆಟ್ ಹಲ್ವಾ, ಕ್ಯಾರೆಟ್ ಜಾಮೂನು ತಯಾರಿಸಿರಬಹುದು. ಅದೇ ರೀತಿ ಕ್ಯಾರೆಟ್ ರಸಗುಲ್ಲವನ್ನು ಎಂದಾದರೂ ತಿಂದಿದ್ದೀರಾ? ನಿಮಗೇನಾದರೂ ಸಿಹಿತಿಂಡಿ ತಿನ್ನುವ ಬಯಕೆಯಾದರೆ ಕ್ಯಾರೆಟ್ ರಸಗುಲ್ಲವನ್ನು ತಯಾರಿಸಿ. ಒಮ್ಮೆ ಮಾಡಿನೋಡಿ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಇಲ್ಲಿದೆ ಕ್ಯಾರೆಟ್ ರಸಗುಲ್ಲಾ ರೆಸಿಪಿ
ಇಲ್ಲಿದೆ ಕ್ಯಾರೆಟ್ ರಸಗುಲ್ಲಾ ರೆಸಿಪಿ (Instagram )

ಚಳಿಗಾಲದಲ್ಲಿ ಕ್ಯಾರೆಟ್ ಹೇರಳವಾಗಿ ಲಭ್ಯವಿದೆ. ಕ್ಯಾರೆಟ್ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಬಹುದು. ಕ್ಯಾರೆಟ್ ಪಲ್ಯ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಜಾಮೂನು ತಯಾರಿಸಿರಬಹುದು. ಅದೇ ರೀತಿ ಕ್ಯಾರೆಟ್ ರಸಗುಲ್ಲಾವನ್ನು ಎಂದಾದರೂ ತಿಂದಿದ್ದೀರಾ? ನಿಮಗೇನಾದರೂ ಸಿಹಿತಿಂಡಿ ತಿನ್ನುವ ಬಯಕೆಯಾದರೆ ಕ್ಯಾರೆಟ್ ರಸಗುಲ್ಲವನ್ನು ತಯಾರಿಸಿ. ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುತ್ತೀರಿ. ಅಷ್ಟು ರುಚಿಕರವಾಗಿರುತ್ತದೆ ಈ ಸಿಹಿತಿಂಡಿ. ಹಾಗಿದ್ದರೆ ಕ್ಯಾರೆಟ್ ರಸಗುಲ್ಲ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕ್ಯಾರೆಟ್ ರಸಗುಲ್ಲ ಪಾಕವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಕ್ಯಾರೆಟ್- 3, ಹಾಲು- 2 ಕಪ್, ತುಪ್ಪ- ಮೂರು ಚಮಚ, ಬಾಂಬೆ ರವೆ- 1 ಕಪ್, ಸಕ್ಕರೆ- 1 ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಏಲಕ್ಕಿ ಪುಡಿ- ಕಾಲು ಚಮಚ.

ತಯಾರಿಸುವ ವಿಧಾನ: ಕ್ಯಾರೆಟ್ ರಸಗುಲ್ಲಾ ತಯಾರಿಸುವ ಮೊದಲು, ಮೂರು ದೊಡ್ಡ ಕ್ಯಾರೆಟ್ ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಕತ್ತರಿಸಿದ ಕ್ಯಾರೆಟ್ ಅನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಸುಮಾರು ಅರ್ಧ ಕಪ್ ಹಾಲು ಬೆರಿಸಿ ನಯವಾಗಿ ರುಬ್ಬಿಕೊಳ್ಳಿ.

ಈಗ ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಮತ್ತು ಅದಕ್ಕೆ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ನಂತರ ರುಬ್ಬಿರುವ ಕ್ಯಾರೆಟ್ ಮಿಶ್ರಣವನ್ನು ಬೆರಿಸಿ ನಾಲ್ಕರಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಇದನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದ ನಂತರ ಅದಕ್ಕೆ ಒಂದು ಕಪ್ ಬಿಸಿ ಹಾಲನ್ನು ತೆಗೆದುಕೊಂಡು ಹಾಕಿ.

ಈಗ ಈ ಮಿಶ್ರಣವನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಬೇಯಿಸಿ. ನಂತರ ಅದಕ್ಕೆ ಒಂದು ಕಪ್ ಬಾಂಬೆ ರವೆಯನ್ನು ಬೆರಿಸಿ. ರವೆ ಉಂಡೆ ಕಟ್ಟಿಕೊಳ್ಳದಂತೆ ತಡೆಯಲು ಅದು ಹಾಲಿನಲ್ಲಿ ಬೆರೆಯುವವರೆಗೆ ಚೆನ್ನಾಗಿ ಕಲಕಿ. ರವೆಯನ್ನು ಬೇಯಿಸಿ ಹಿಟ್ಟಾಗಿ ಪರಿವರ್ತಿಸಿದ ನಂತರ, ಅದಕ್ಕೆ ಒಂದು ಚಮಚ ತುಪ್ಪ ಮತ್ತು ಸಕ್ಕರೆಯನ್ನು ಬೆರಿಸಿ ಮಿಶ್ರಣ ಮಾಡಿ.

ಮಿಶ್ರಣವನ್ನು ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಿ. ನಂತರ ಒಲೆಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತರ, ರುಬ್ಬಿರುವ ಕ್ಯಾರೆಟ್ ಮಿಶ್ರಣವನ್ನು ಉಂಡೆಗಳಾಗಿ ಮಾಡಿ ಬಟ್ಟಲಿಗೆ ಹಾಕಿ ಪಕ್ಕಕ್ಕೆ ಇರಿಸಿ.

ಈಗ ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಬಿಸಿ ಮಾಡಿ. ನೀರು ಕುದಿಯುತ್ತಿರುವಾಗ, ಅದರ ಮೇಲೆ ಹಬೆಯಲ್ಲಿಡಬಹುದಾದಂತಹ ಬಟ್ಟಲನ್ನು ಇರಿಸಿ, ಅದರಲ್ಲಿ ರಸಗುಲ್ಲ ಇಡಿ. ಸುಮಾರು ಹತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಲು ಬಿಡಿ. ಸುಮಾರು ಹತ್ತು ನಿಮಿಷಗಳ ಕಾಲ ಹಬೆಯಲ್ಲಿ ಕುದಿಸಿದ ನಂತರ, ರಸಗುಲ್ಲಗಳನ್ನು ತೆಗೆದು ತಣ್ಣಗಾಗಲು ಬಿಡಿ.

ಈಗ ಸಕ್ಕರೆ ಪಾಕ ತಯಾರಿಸಬೇಕು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ. ನೀರು ಕುದಿಯುತ್ತಿರುವಾಗ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಗುಲಾಬ್ ಜಾಮೂನ್‌ಗೆ ತಯಾರಿಸುವ ಪಾಕದಷ್ಟು ಬಂದರೆ ಸಾಕು. ನಂತರ ಒಲೆ ಆಫ್ ಮಾಡಿ. ಇದಕ್ಕೆ ಹಬೆಯಲ್ಲಿ ಬೇಯಿಸಿದ ರಸಗುಲ್ಲ ಹಾಕಿ ಅರ್ಧ ಗಂಟೆಯಿಂದ 1 ಗಂಟೆ ಕಾಲ ಹಾಗೆಯೇ ಬಿಡಿ. ತಣ್ಣಗಾದ ನಂತರ ತಿಂದರೆ ತುಂಬಾ ಚೆನ್ನಾಗಿರುತ್ತದೆ.

ಕ್ಯಾರೆಟ್ ರಸಗುಲ್ಲ ತಯಾರಿಸುವುದು ತುಂಬಾ ಸರಳ. ಮೇಲೆ ತಿಳಿಸಿದ ಪಾಕವಿಧಾನದಂತೆ ಪ್ರಯತ್ನಿಸಿ. ಖಂಡಿತಾ ರುಚಿಕರವಾಗಿರುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ.

Whats_app_banner