ಈ ರೀತಿ ಎಲೆಕೋಸು-ಮೊಟ್ಟೆ ಫ್ರೈ ಪಾಕವಿಧಾನ ಪ್ರಯತ್ನಿಸಿ: ಅನ್ನ, ಚಪಾತಿ, ರೊಟ್ಟಿಗೆ ಸೂಪರ್ ಕಾಂಬಿನೇಶನ್
ಮೊಟ್ಟೆಯಿಂದ ವಿವಿಧ ಪಾಕವಿಧಾನಗಳನ್ನು ಪ್ರಯತ್ನಿಸಿರಬಹುದು. ಆದರೆ ನೀವು ಎಂದಾದರೂ ಎಲೆಕೋಸು-ಮೊಟ್ಟೆ ಫ್ರೈ ಟ್ರೈ ಮಾಡಿದ್ದೀರಾ?ಮೊಟ್ಟೆ-ಎಲೆಕೋಸು ಫ್ರೈ ಖಾದ್ಯವನ್ನು ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಬೆಳಗ್ಗಿನ ಉಪಾಹಾರವಾಗಿರಲಿ, ಮಧ್ಯಾಹ್ನದ ಅಥವಾ ರಾತ್ರಿಯೂಟಕ್ಕೂ ಮೊಟ್ಟೆಯ ಭಕ್ಷ್ಯಗಳು ಅತ್ಯುತ್ತಮ ಆಯ್ಕೆ ಅಂದ್ರೆ ತಪ್ಪಿಲ್ಲ. ಮೊಟ್ಟೆಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲ ರುಚಿಯಲ್ಲೂ ಅದ್ಭುತ.
ಮೊಟ್ಟೆಯ ಬುರ್ಜಿ, ಆಮ್ಲೆಟ್, ಮೊಟ್ಟೆ ಪರೋಟ, ಮೊಟ್ಟೆ ಫ್ರೈ, ಮೊಟ್ಟೆ ಘೀ ರೋಸ್ಟ್, ಮೊಟ್ಟೆ ಸಾರು ಇತ್ಯಾದಿ ಖಾದ್ಯಗಳನ್ನು ತಿಂದಿರಬಹುದು. ಇಲ್ಲಿದೆ ಆರೋಗ್ಯಕರ ಹಾಗೂ ರುಚಿಕರವಾದ ಮೊಟ್ಟೆ ಹಾಗೂ ಎಲೆಕೋಸಿನಿಂದ ತಯಾರಿಸಲಾದ ಖಾದ್ಯ. ಈ ಪಾಕವಿಧಾನ ತುಂಬಾ ಸರಳ. ಬೆಳಗ್ಗಿನ ಉಪಾಹಾರಕ್ಕೆ ಇದು ಉತ್ತಮ ಖಾದ್ಯ. ಇದನ್ನು ರೊಟ್ಟಿ, ಚಪಾತಿ, ಪರೋಟ, ಅನ್ನ ಇತ್ಯಾದಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ, ಹಾಗಿದ್ದರೆ ಎಲೆಕೋಸು-ಮೊಟ್ಟೆ ಫ್ರೈ ಖಾದ್ಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಎಲೆಕೋಸು-ಮೊಟ್ಟೆ ಫ್ರೈ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಮೊಟ್ಟೆ- 3, ಈರುಳ್ಳಿ- 2, ಟೊಮೆಟೊ- 1, ಹಸಿಮೆಣಸಿನಕಾಯಿ- 2, ಜೀರಿಗೆ- ಅರ್ಧ ಚಮಚ, ಕೆಂಪು ಮೆಣಸಿನಪುಡಿ- 1 ಚಮಚ, ಕೊತ್ತಂಬರಿ ಪುಡಿ- ಅರ್ಧ ಚಮಚ, ಗರಂ ಮಸಾಲೆ- ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- 3 ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.
ಇದನ್ನೂ ಓದಿ: ಕೇರಳ ಶೈಲಿಯಲ್ಲಿ ಈ ರೀತಿ ಮೊಟ್ಟೆ ಸಾರು ಮಾಡಿ ನೋಡಿ
ಮಾಡುವ ವಿಧಾನ: ಮೊದಲಿಗೆ ಒಲೆ ಮೇಲೆ ಬಾಣಲೆಯಿಟ್ಟು ಅದರಲ್ಲಿ 3 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಜೀರಿಗೆ ಬೆರಿಸಿ. ಜೀರಿಗೆಯನ್ನು ಹುರಿದ ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿ ಬೆರೆಸಿ ಫ್ರೈ ಮಾಡಿ. ಈರುಳ್ಳಿಯನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ಅವು ಬಣ್ಣ ಬದಲಾಗುತ್ತಿದ್ದಂತೆ ನುಣ್ಣಗೆ ಕತ್ತರಿಸಿದ ಎಲೆಕೋಸನ್ನು ಬೆರೆಸಿ ಹುರಿಯಿರಿ.
ಎಲೆಕೋಸನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಅವು ಸ್ವಲ್ಪ ಮೃದುವಾದ ನಂತರ, ಉದ್ದವಾಗಿ ಕತ್ತರಿಸಿದ ಟೊಮೆಟೊಗಳನ್ನು ಬೆರೆಸಿ ಹುರಿಯಿರಿ. ಇವನ್ನು ಮೃದುವಾಗುವವರೆಗೆ ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ. ಮೂರರಿಂದ ನಾಲ್ಕು ನಿಮಿಷಗಳ ಕಾಲ ಬೇಯಿಸಿದ ನಂತರ, ಉರಿಯನ್ನು ಸ್ವಲ್ಪ ಕಡಿಮೆಯಿಡಿ.
ಈಗ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಗರಂ ಮಸಾಲೆ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಮಸಾಲೆಗಳನ್ನು ಹಾಕಿದ ನಂತರ ಒಂದರಿಂದ ಎರಡು ನಿಮಿಷಗಳ ಕಾಲ ಬೇಯಿಸಿ .
ಈ ಮಧ್ಯೆ, ಮತ್ತೊಂದು ಒಲೆಯ ಮೇಲೆ ಸಣ್ಣ ಬಾಣಲೆಯನ್ನು ಇರಿಸಿ, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಮೊಟ್ಟೆಗಳನ್ನು ಅದರಲ್ಲಿ ಒಡೆದು ಚೆನ್ನಾಗಿ ಮಿಶ್ರಣ ಮಾಡಿ. ಅವನ್ನು ಚೆನ್ನಾಗಿ ಕಲಕಿ, ಬುರ್ಜಿಯಂತೆ ಬೇಯಿಸಿ. ಬುರ್ಜಿ ಸಿದ್ಧವಾದ ತಕ್ಷಣ ಇದನ್ನು ಬೇಯಿಸುತ್ತಿರುವ ಎಲೆಕೋಸು ಮಿಶ್ರಣಕ್ಕೆ ಬೆರೆಸಿ. ಇವನ್ನು ಎರಡು ನಿಮಿಷಗಳ ಕಾಲ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ, ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಎಲೆಕೋಸು-ಮೊಟ್ಟೆ ಫ್ರೈ ಸಿದ್ಧ. ಈ ಖಾದ್ಯವನ್ನು ಚಪಾತಿ, ರೊಟ್ಟಿ, ಪರೋಟ ಅಥವಾ ಅನ್ನದೊಂದಿಗೆ ತಿನ್ನಬಹುದು.
