ಮನೆಗೆ ದಿಢೀರನೆ ಅತಿಥಿಗಳು ಬಂದಾಗ ತಯಾರಿಸಿ ರುಚಿಕರ ಮೊಟ್ಟೆ ಬಿರಿಯಾನಿ; ಪಾಕವಿಧಾನ ತುಂಬಾ ಸರಳ ಮಾರಾಯ್ರೆ
ಕೆಲವರಿಗೆ ಮೊಟ್ಟೆ ಬಿರಿಯಾನಿ ಬಹಳ ಅಚ್ಚುಮೆಚ್ಚು. ಇದು ಬಹಳ ಸರಳ ಹಾಗೂ ಬೇಗನೇ ಸಿದ್ಧವಾಗುವ ಖಾದ್ಯ. ಮನೆಗೆ ಯಾರಾದರೂ ದಿಢೀರನೇ ಅತಿಥಿಗಳು ಬಂದಾಗ ಈ ಮೊಟ್ಟೆ ಬಿರಿಯಾನಿ ಮಾಡಿ ಕೊಡಿ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ತರಹೇವಾರಿ ಬಿರಿಯಾನಿ ಖಾದ್ಯಗಳನ್ನು ನೀವು ತಿಂದಿರಬಹುದು. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಸೀಗಡಿ ಬಿರಿಯಾನಿ ತಿಂದಿರಬಹುದು. ಅದೇ ರೀತಿ ಕೆಲವರಿಗೆ ಮೊಟ್ಟೆ ಬಿರಿಯಾನಿ ಬಹಳ ಅಚ್ಚುಮೆಚ್ಚು. ಇದು ಬಹಳ ಸರಳ ಹಾಗೂ ಬೇಗನೇ ಸಿದ್ಧವಾಗುವ ಖಾದ್ಯ. ಮನೆಗೆ ಯಾರಾದರೂ ದಿಢೀರನೇ ಅತಿಥಿಗಳು ಬಂದಾಗ ಈ ಮೊಟ್ಟೆ ಬಿರಿಯಾನಿ ಮಾಡಿ ಕೊಡಿ. ಎಲ್ಲರೂ ಬಾಯಿಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವಿಲ್ಲ. ಮೊಟ್ಟೆ ಬಿರಿಯಾನಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.
ಮೊಟ್ಟೆ ಬಿರಿಯಾನಿ ಪಾಕವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ (ಬಾಸ್ಮತಿ)- 2 ಕಪ್, ಮೊಟ್ಟೆ- 4, ಬಿರಿಯಾನಿ ಎಲೆ- 2, ಏಲಕ್ಕಿ- 4, ಲವಂಗ- 2, ನಕ್ಷತ್ರ ಹೂವು- 1, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದೂವರೆ ಚಮಚ, ಹಸಿಮೆಣಸಿನಕಾಯಿ- 4, ಈರುಳ್ಳಿ- 3, ಟೊಮೆಟೊ- 1, ಅರಶಿನ- ಅರ್ಧ ಚಮಚ, ಮೆಣಸಿನ ಪುಡಿ- 1 ಚಮಚ, ಕೊತ್ತಂಬರಿ ಪುಡಿ- 1 ಚಮಚ, ಬಿರಿಯಾನಿ ಪುಡಿ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ- ಅಗತ್ಯಕ್ಕೆ ತಕ್ಕಷ್ಟು, ಮೊಸರು- ಅರ್ಧ ಕಪ್, ಕೊತ್ತಂಬರಿ ಸೊಪ್ಪು- ಅರ್ಧ ಕಪ್.
ಮಾಡುವ ವಿಧಾನ: ಮೊದಲಿಗೆ ಬಾಸ್ಮತಿ ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿಡಿ. ಬೇರೆ ಅಕ್ಕಿಯನ್ನು ಸಹ ಬಳಸಬಹುದು. ಹಾಗೆಯೇ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ನೀರು ಹಾಕಿ ಮೊಟ್ಟೆ ಬೇಯಿಸಿ. ಮೊಟ್ಟೆ ಬೆಂದ ನಂತರ ಸಿಪ್ಪೆ ಸುಲಿದು ತಟ್ಟೆಯಲ್ಲಿ ಎತ್ತಿಟ್ಟಿರಿ.
ಈಗ ಕುಕ್ಕರ್ ಒಲೆ ಮೇಲಿಟ್ಟು ಎಣ್ಣೆ ಅಥವಾ ತುಪ್ಪ 4 ಚಮಚದಷ್ಟು ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಬಿರಿಯಾನಿ ಎಲೆ, ಏಲಕ್ಕಿ, ಲವಂಗ, ನಕ್ಷತ್ರ ಹೂವು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಜೊತೆಗೆ ಹಸಿಮೆಣಸಿನಕಾಯಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಶ್ರಣ ಮಾಡಿ. ಈರುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಟೊಮೆಟೊ ಹಾಕಿ ಮಿಶ್ರಣ ಮಾಡಿ.
ಟೊಮೆಟೊ ಹಾಕಿದ 2 ನಿಮಿಷದ ನಂತರ ಕೊತ್ತಂಬರಿ ಸೊಪ್ಪು ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಇದಕ್ಕೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಹಾಗೂ ಬಿರಿಯಾನಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಸಿ ವಾಸನೆ ಹೋಗುವವರೆಗೆ ಇದನ್ನು ಹುರಿಯಬೇಕು. ನಂತರ ಮೊಸರು ಮಿಶ್ರಣ ಮಾಡಿ.
ಈಗ 4 ಕಪ್ ನೀರು ಹಾಕಿ ಕುದಿಸಿ. ನೀರು ಚೆನ್ನಾಗಿ ಕುದಿಯುವಾಗ ಅಕ್ಕಿ ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 2 ನಿಮಿಷದ ನಂತರ ಬೇಯಿಸಿದ ಮೊಟ್ಟೆ ಹಾಕಿ, ಒಂದು ವಿಶಿಲ್ ಕೂಗಿಸಿ. ಬಾಸ್ಮತಿ ಅಕ್ಕಿ ಬೇಗ ಬೇಯುವುದರಿಂದ 1 ವಿಶಿಲ್ ಸಾಕಾಗುತ್ತದೆ. ಸೋನಮಸೂರಿ ಅಕ್ಕಿಯಾದರೆ 2 ಶಿಳ್ಳೆ ಹೊಡೆದ ನಂತರ ಆಫ್ ಮಾಡಿ.
10 ನಿಮಿಷದ ನಂತರ ಕುಕ್ಕರ್‌ನ ಮುಚ್ಚಳ ತೆಗೆದರೆ ರುಚಿಕರವಾದ ಮೊಟ್ಟೆ ಬಿರಿಯಾನಿ ತಿನ್ನಲು ಸಿದ್ಧ. ಇದು ಬಹಳ ಸರಳವಾಗಿ, ಬೇಗನೆ ಸಿದ್ಧವಾಗುವ ಖಾದ್ಯ. ಮನೆಗೆ ಯಾರಾದರೂ ದಿಢೀರನೇ ಅತಿಥಿಗಳು ಬಂದಾಗ ಮೊಟ್ಟೆ ಬಿರಿಯಾನಿಯನ್ನು ಮಾಡಿ ಕೊಡಬಹುದು. ಎಲ್ಲರೂ ಇಷ್ಟಪಟ್ಟು ತಿಂತಾರೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.
