ಸಂಕ್ರಾಂತಿ ಹಬ್ಬಕ್ಕೆ ಸಕ್ಕರೆ ಅಚ್ಚು ಮನೆಯಲ್ಲೇ ತಯಾರಿಸಿ; ಸಕ್ಕರೆ, ಕಲ್ಲು ಸಕ್ಕರೆ, ಮೊಸರು, ಹಾಲು ಇದ್ರೆ ಸಾಕು
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಕ್ರಾಂತಿ ಹಬ್ಬಕ್ಕೆ ಸಕ್ಕರೆ ಅಚ್ಚು ಮನೆಯಲ್ಲೇ ತಯಾರಿಸಿ; ಸಕ್ಕರೆ, ಕಲ್ಲು ಸಕ್ಕರೆ, ಮೊಸರು, ಹಾಲು ಇದ್ರೆ ಸಾಕು

ಸಂಕ್ರಾಂತಿ ಹಬ್ಬಕ್ಕೆ ಸಕ್ಕರೆ ಅಚ್ಚು ಮನೆಯಲ್ಲೇ ತಯಾರಿಸಿ; ಸಕ್ಕರೆ, ಕಲ್ಲು ಸಕ್ಕರೆ, ಮೊಸರು, ಹಾಲು ಇದ್ರೆ ಸಾಕು

Sugar cube Recipe: ಹಬ್ಬ ಬಂತು ಅಂದ್ರೆ ಹೆಂಗಳೆಯರು ತಯಾರಿಯಲ್ಲಿ ತೊಡಗುವುದು ಸಾಮಾನ್ಯ. ಇದೀಗ ಮಕರ ಸಂಕ್ರಾಂತಿ ಹಬ್ಬ ಸಮೀಪಿಸಿದ್ದು, ಈ ಹಬ್ಬಕ್ಕೆ ಸಕ್ಕರೆ ಅಚ್ಚು ತಯಾರಿಸುವಲ್ಲಿಂದ ಕೆಲಸ ಶುರುವಾಗುತ್ತದೆ. ಇದನ್ನು ತಯಾರಿಸುವುದು ತುಂಬಾನೇ ಸರಳ. ಸಾಂಪ್ರದಾಯಿಕ ವಿಧಾನದಲ್ಲಿ ಮಾಡಲಾಗುವ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ.

ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ರುಚಿಕರ ಸಕ್ಕರೆ ಅಚ್ಚು, ಇಲ್ಲಿದೆ ರೆಸಿಪಿ (ಸಾಂಕೇತಿಕ ಚಿತ್ರ)
ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ರುಚಿಕರ ಸಕ್ಕರೆ ಅಚ್ಚು, ಇಲ್ಲಿದೆ ರೆಸಿಪಿ (ಸಾಂಕೇತಿಕ ಚಿತ್ರ) (Canva)

ಸಂಕ್ರಾಂತಿ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಲ್ಲರೂ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಮಕರ ಸಂಕ್ರಾಂತಿ ಹಬ್ಬ ಬಂತು ಅಂದ್ರೆ ಹೆಂಗಳೆಯರಿಗೆ ಸಕ್ಕರೆ ಅಚ್ಚು ತಯಾರಿಸುವಲ್ಲಿಂದ ಕೆಲಸ ಶುರುವಾಗುತ್ತದೆ. ಮಹಿಳೆಯರಂತೂ ಬಹಳ ಸಂಭ್ರಮದಿಂದ ಇದರ ತಯಾರಿಯಲ್ಲಿ ತೊಡಗುತ್ತಾರೆ. ಸಕ್ಕರೆ ಅಚ್ಚು ಮಾಡಲು ಮಾರುಕಟ್ಟೆಯಲ್ಲಿ ಅಚ್ಚುಗಳು ಹೇರಳವಾಗಿ ದೊರೆಯುತ್ತದೆ. ಸಾಂಪ್ರದಾಯಿಕ ವಿಧಾನದಂತೆ ಮರದ ಅಚ್ಚಿನಿಂದಲೂ ಸಕ್ಕರೆ ಅಚ್ಚು ತಯಾರಿಸಬಹುದು. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಸಕ್ಕರೆ ಅಚ್ಚು ಮಾಡಲು ಬೇಕಾಗುವ ಪದಾರ್ಥಗಳು

  •  ಸಕ್ಕರೆ- 2 ಕಪ್
  •  ನೀರು- ಅಗತ್ಯಕ್ಕೆ ತಕ್ಕಷ್ಟು
  •  ಕಲ್ಲು ಸಕ್ಕರೆ- ಅರ್ಧ ಕಪ್
  • ಹಾಲು- ಕಾಲು ಕಪ್
  • ಮೊಸರು- 4 ಟೀ ಚಮಚ.

ಇದನ್ನೂ ಓದಿ: ಎಳ್ಳು-ಬೆಲ್ಲ ಹಂಚದಿದ್ದರೆ ಮಕರ ಸಂಕ್ರಾಂತಿ ಅಪೂರ್ಣ: ಇದನ್ನು ತಯಾರಿಸುವ ವಿಧಾನ ಇಲ್ಲಿದೆ

ಸಕ್ಕರೆ ಅಚ್ಚು ಮಾಡುವ ವಿಧಾನ

ಮೊದಲಿಗೆ ಮರದ ಅಚ್ಚಿನ ಮಣೆಗಳನ್ನು ನೀರಿನಲ್ಲಿ 1 ಗಂಟೆ ಕಾಲ ನೆನೆಸಿಡಬೇಕು. ನಂತರ ಸಕ್ಕರೆಯನ್ನು ಒಂದು ಪಾತ್ರೆಗೆ ಹಾಕಿ. ಸಕ್ಕರೆ ಮುಳುಗುವವರೆಗೆ ನೀರು ಹಾಕಿ. ನಂತರ ಇದಕ್ಕೆ ಕಲ್ಲು ಸಕ್ಕರೆ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯ ಮೇಲೆ ಇಡಿ. ಕಲ್ಲು ಸಕ್ಕರೆ ಹಾಕಿದ್ರೆ ರುಚಿ ಇನ್ನೂ ಚೆನ್ನಾಗಿರುತ್ತದೆ. ಒಲೆಯನ್ನು ಮಧ್ಯಮ ಉರಿಯಲ್ಲಿಟ್ಟು, ನಿಧಾನವಾಗಿ ಚಮಚದಿಂದ ಪಾಕವನ್ನು ಮಿಶ್ರಣ ಮಾಡುತ್ತಲೇ ಇರಬೇಕು. ಸಕ್ಕರೆ ಕರಗುವವರೆಗೆ ಚಮಚದಿಂದ ಮಿಶ್ರಣ ಮಾಡಬೇಕು.

ಸಕ್ಕರೆ ಕರಗಿದ ನಂತರ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿ. ನಂತರ 2 ಟೀ ಚಮಚದಷ್ಟು ಮೊಸರು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡುತ್ತಿರುವಾಗ ಮೇಲೆ ನೊರೆ ರೀತಿಯಂತೆ ಬರುತ್ತದೆ. ಅದನ್ನು ಚಮಚದಿಂದ ತೆಗೆಯಿರಿ. ಮತ್ತೆ ಮಿಶ್ರಣ ಮಾಡುತ್ತಾ ನಂತರ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿ. ನಂತರ 2 ಟೀ ಚಮಚದಷ್ಟು ಮೊಸರು ಹಾಕಿ ಮಿಶ್ರಣ ಮಾಡಿ. ಮತ್ತೆ ನೊರೆ ರೀತಿ ಬಂದಾಗ ಚಮಚದಿಂದ ತೆಗೆಯಿರಿ. ಒಲೆ ಮಧ್ಯಮ ಉರಿಯಲ್ಲೇ ಇರಲಿ. ಕೊನೆಯ ಬಾರಿಗೆ ಉಳಿದ ಹಾಲು ಹಾಕಿ. ನೊರೆ ಬಂದಾಗ ಅದನ್ನು ತೆಗೆಯಿರಿ.

ಇದೀಗ ಒಂದು ಪಾತ್ರೆಗೆ ಹತ್ತಿ ಬಟ್ಟೆಯನ್ನಿಟ್ಟು (ಬಟ್ಟೆಯನ್ನು ಮೂರ್ನಾಲು ಪದರ ಇಡಬೇಕು) ಸಕ್ಕರೆ ಪಾಕವನ್ನು ಸೋಸಿ. ಹಿಂಡಿ, ಚೆನ್ನಾಗಿ ಸೋಸಿಕೊಳ್ಳಿ. ಈ ವೇಳೆ ನೆನೆಸಿಟ್ಟ ಅಚ್ಚಿನ ಮಣೆಗಳನ್ನು ಸಿದ್ಧಮಾಡಿಕೊಳ್ಳಬೇಕು. ಈ ವೇಳೆ ದಪ್ಪ ತಳ ಇರುವ ಪಾತ್ರೆಯಲ್ಲಿ ಸೋಸಿಟ್ಟ ಸಕ್ಕರೆ ಪಾಕವನ್ನು ಚೆನ್ನಾಗಿ ಕುದಿಸಿ. ಚಮಚದಿಂದ ತಿರುಗಿಸುವುದನ್ನು ಮಾತ್ರ ಮರೆಯದಿರಿ. ಸಕ್ಕರೆ ಪಾಕ ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಒಲೆಯನ್ನು ಆಫ್ ಮಾಡಿ. ಮತ್ತೆ ಸಕ್ಕರೆ ಪಾಕವನ್ನು ಚೆನ್ನಾಗಿ ಮಿಶ್ರಣ ಮಾಡಿ, ಅಚ್ಚಿನ ಮಣೆಗಳಿಗೆ ಪಾಕ ಹಾಕಬೇಕು. ಬೇಕಾದ ಆಕಾರದ ಅಚ್ಚಿನ ಮಣೆಗಳಿದ್ದರೆ ತುಂಬಾ ಚೆನ್ನಾಗಿರುತ್ತದೆ. ಸಕ್ಕರೆ ಪಾಕ ಹಾಕಿ 5 ನಿಮಿಷಗಳ ಬಳಿಕ (ತಣ್ಣಗಾದ ಬಳಿಕ) ತೆಗೆಯಬಹುದು.

ಮಕರ ಸಂಕ್ರಾಂತಿ ಹಬ್ಬಕ್ಕೆ ಈ ರೀತಿ ಸಕ್ಕರೆ ಅಚ್ಚನ್ನು ತಯಾರಿಸಬಹುದು. ಈ ವಿಧಾನದಂತೆ ತಯಾರಿಸಿದರೆ ಸಕ್ಕರೆ ಅಚ್ಚು ಬಿಳಿಯಾಗಿ, ಚೆನ್ನಾಗಿ ಬರುತ್ತದೆ. ರುಚಿಯೂ ಚೆನ್ನಾಗಿರುತ್ತದೆ.

Whats_app_banner