ದೋಸೆ, ಇಡ್ಲಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಬಿಳಿ ಎಳ್ಳು ಚಟ್ನಿ; ಇದನ್ನು ತಯಾರಿಸುವುದು ತುಂಬಾ ಸರಳ
ಕನ್ನಡ ಸುದ್ದಿ  /  ಜೀವನಶೈಲಿ  /  ದೋಸೆ, ಇಡ್ಲಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಬಿಳಿ ಎಳ್ಳು ಚಟ್ನಿ; ಇದನ್ನು ತಯಾರಿಸುವುದು ತುಂಬಾ ಸರಳ

ದೋಸೆ, ಇಡ್ಲಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಬಿಳಿ ಎಳ್ಳು ಚಟ್ನಿ; ಇದನ್ನು ತಯಾರಿಸುವುದು ತುಂಬಾ ಸರಳ

ದಿನಾ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ಹೊಸ ರುಚಿಯ ಎಳ್ಳಿನ ಚಟ್ನಿಯನ್ನು ತಯಾರಿಸಿ. ಇದು ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ರೊಟ್ಟಿ, ದೋಸೆ, ಇಡ್ಲಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅನ್ನದೊಂದಿಗೂ ತಿನ್ನಲು ಚೆನ್ನಾಗಿರುತ್ತದೆ. ಹಾಗಿದ್ದರೆ ರುಚಿಕರ ಬಿಳಿ ಎಳ್ಳಿನ ಚಟ್ನಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ದೋಸೆ, ಇಡ್ಲಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಬಿಳಿ ಎಳ್ಳಿನ ಚಟ್ನಿ
ದೋಸೆ, ಇಡ್ಲಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಬಿಳಿ ಎಳ್ಳಿನ ಚಟ್ನಿ (Shutterstock )

ಇಡ್ಲಿ, ದೋಸೆ ಇತ್ಯಾದಿ ಉಪಾಹಾರಕ್ಕೆ ದಿನಾ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ಹೊಸ ರುಚಿಯ ಚಟ್ನಿಯನ್ನು ತಯಾರಿಸಿ. ತೆಂಗಿನಕಾಯಿ ಚಟ್ನಿ, ಕಡಲೆಕಾಯಿ ಚಟ್ನಿ ತಯಾರಿಸುವುದು ಸಾಮಾನ್ಯ. ಹೀಗಾಗಿ ಸ್ವಲ್ಪ ವಿಭಿನ್ನವಾಗಿ ಬಿಳಿ ಎಳ್ಳಿನ ಚಟ್ನಿಯನ್ನು ತಯಾರಿಸಿ. ಇದು ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ರೊಟ್ಟಿ, ದೋಸೆ, ಇಡ್ಲಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬಿಳಿ ಎಳ್ಳು ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಬಿಳಿ ಎಳ್ಳು- ಅರ್ಧ ಕಪ್, ಒಣಮೆಣಸಿನಕಾಯಿ- 2, ಟೊಮೆಟೊ- 1, ಹುಣಸೆಹಣ್ಣು- ಸಣ್ಣ ನಿಂಬೆಹಣ್ಣಿನ ಗಾತ್ರ, ಬೆಳ್ಳುಳ್ಳಿ ಎಸಳು- ಮೂರರಿಂದ ನಾಲ್ಕು, ಶುಂಠಿ- 1 ಸಣ್ಣ ಇಂಚು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಪುದೀನಾ- ಸ್ವಲ್ಪ, ಮೆಂತ್ಯ- 4 ಕಾಳು, ಹಸಿ ಮೆಣಸಿನಕಾಯಿ- 3, ಕರಿಬೇವಿನ ಎಲೆ- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಬಾಣಲೆಯಲ್ಲಿ ಬಿಳಿ ಎಳ್ಳು ಹಾಗೂ ಒಣ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಎಳ್ಳಿನ ಬಣ್ಣ ಬದಲಾಗುವವರೆಗೆ ಹುರಿದು ಒಂದು ತಟ್ಟೆಗೆ ಹಾಕಿ. ಈಗ ಟೊಮೆಟೊವನ್ನು ತೆಗೆದುಕೊಂಡು ಗ್ಯಾಸ್ ಜ್ವಾಲೆಯ ಮೇಲಿಟ್ಟು ಬೇಯಿಸಿ. ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಅದರ ಸಿಪ್ಪೆ ತೆಗೆಯಿರಿ.

ಒಂದು ಮಿಕ್ಸರ್ ಜಾರ್‌ನಲ್ಲಿ ಹುರಿದ ಬಿಳಿ ಎಳ್ಳು, ಹುರಿದ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹುಣಸೆಹಣ್ಣನ್ನು ಬೆರೆಸಿ ರುಬ್ಬಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ನೀರು ಬೆರಿಸಿ ಮೃದುವಾಗಿ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ.

ಈಗ ಒಂದು ಸಣ್ಣ ಕಡಾಯಿಯನ್ನು ತೆಗೆದುಕೊಂಡು ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಜೀರಿಗೆ, ಮೆಂತ್ಯ, ಹಸಿಮೆಣಸಿನಕಾಯಿ, ಕರಿಬೇವಿನ ಎಲೆ ಹಾಕಿ ಹುರಿಯಿರಿ. ನಂತರ ಇದನ್ನು ರುಬ್ಬಿರುವ ಎಳ್ಳಿನ ಮಿಶ್ರಣಕ್ಕೆ ಹಾಕಿ ಬೆರೆಸಿದರೆ ರುಚಿಕರ ಎಳ್ಳು ಚಟ್ನಿ ಸವಿಯಲು ಸಿದ್ಧ. ಇದನ್ನು ದೋಸೆ, ಇಡ್ಲಿ, ರೊಟ್ಟಿ ಮಾತ್ರವಲ್ಲದೆ ಅನ್ನದೊಂದಿಗೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗಬಹುದು.

Whats_app_banner