ಈ ವಾರಾಂತ್ಯಕ್ಕೆ ಮನೆಯಲ್ಲೇ ತಯಾರಿಸಿ ಡಾಬಾ ಶೈಲಿಯ ಚಿಕನ್ ಕರಿ: ಬಾಯಲ್ಲಿ ನೀರೂರುವುದು ಗ್ಯಾರಂಟಿ
ವೀಕೆಂಡ್ ಬಂತು ಅಂದ್ರೆ ಸಾಕು ಮಾಂಸಾಹಾರ ಪ್ರಿಯರಿಗೆ ಏನಾದರೂ ಮಾಂಸದ ಭಕ್ಷ್ಯ ತಿನ್ನುವ ಮನಸ್ಸಾಗುತ್ತದೆ. ಮನೆಯಲ್ಲಿಯೇ ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ ಮಾಡಿ ಸವಿಯಬಹುದು. ಇದನ್ನು ತಯಾರಿಸುವುದು ತುಂಬಾ ಸರಳ.

ವೀಕೆಂಡ್ ಬಂತು ಎಂದರೆ ಸಾಕು ಮಾಂಸಾಹಾರ ಪ್ರಿಯರಿಗೆ ಏನಾದರೂ ಮಾಂಸದ ಭಕ್ಷ್ಯ ತಿನ್ನುವ ಮನಸ್ಸಾಗುತ್ತದೆ. ಆದರೆ ಪ್ರತಿವಾರವೂ ಹೋಟೆಲ್ಗೆ ಹೋಗಿ ಮಾಂಸಾಹಾರ ತಿಂದರೆ ಜೇಬು ಖಾಲಿಯಾಗುತ್ತಾ ಹೋಗುತ್ತದೆ. ಆದರೆ ನೀವು ಮನಸ್ಸು ಮಾಡಿದರೆ ಮನೆಯಲ್ಲಿಯೇ ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ ಮಾಡಿ ಸವಿಯಬಹುದು. ಇದಕ್ಕೆ ನಿಮಗೆ ಹೆಚ್ಚೇನು ಖರ್ಚಾಗುವುದೂ ಇಲ್ಲ. ಕೋಳಿ ಮಾಂಸದ ಜೊತೆಯಲ್ಲಿ ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನೇ ಸೇರಿಸಿ ಬಾಯಲ್ಲಿ ನೀರೂರುವಂತಹ ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಡಾಬಾ ಶೈಲಿಯ ಚಿಕನ್ ಕರಿ ರೆಸಿಪಿ
ಬೇಕಾಗುವ ಪದಾರ್ಥಗಳು: ಚಿಕನ್ - 1/2 ಕೆಜಿ, ಮೊಸರು- 1 ಚಮಚ, ಅರಶಿಣ- 1 ಚಮಚ, ಖಾರದ ಪುಡಿ ಹಾಗೂ ಉಪ್ಪು ರುಚಿಗೆ ತಕ್ಕಷ್ಟು, ಸಾಸಿವೆ ಎಣ್ಣೆ- 2 ರಿಂದ 3 ಚಮಚ, ದೊಡ್ಡ ಈರುಳ್ಳಿ- 2, ದೊಡ್ಡ ಗಾತ್ರದ ಟೊಮೆಟೊ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಹಸಿ ಮೆಣಸಿನಕಾಯಿ- 2, ಜೀರಿಗೆ- 1 ಚಮಚ, ಬಿರಿಯಾನಿ ಎಲೆ- 3, ಲವಂಗ- 5, ಸಣ್ಣ ಗಾತ್ರದ ಚಕ್ಕೆ- 1, ಕಾಳುಮೆಣಸು- 5, ಕೊತ್ತಂಬರಿ ಬೀಜ- 1 ಚಮಚ, ಜೀರಿಗೆ ಪುಡಿ- 1 ಚಮಚ, ಗರಂ ಮಸಾಲೆ- 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ನೀರು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ: ಮೊದಲನೆಯದಾಗಿ ಚಿಕನ್ ಅನ್ನು ಚೆನ್ನಾಗಿ ತೊಳೆದು ಕತ್ತರಿಸಿ ಒಂದು ಕಡೆ ಇಟ್ಟುಕೊಳ್ಳಿ. ಈ ಭಕ್ಷ್ಯ ತಯಾರಿಸಲು ಬೇಕಾದ ತರಕಾರಿಗಳನ್ನು ಚೆನ್ನಾಗಿ ಶುದ್ಧ ನೀರಿನಲ್ಲಿ ತೊಳೆದು ಕತ್ತರಿಸಿಕೊಳ್ಳಿ.
ಈಗ ಒಂದು ದೊಡ್ಡ ಪಾತ್ರೆಗೆ ಚಿಕನ್ ಮಾಂಸವನ್ನು ಹಾಕಿ ಇದಕ್ಕೆ ಮೇಲೆ ತಿಳಿಸಲಾದ ಅಳತೆಯಲ್ಲಿ ಅರಶಿಣ, ಮೊಸರು, ಖಾರದಪುಡಿ ಹಾಗೂ ಉಪ್ಪನ್ನು ಹಾಕಿ ಚೆನ್ನಾಗಿ ಸವರಿ. ಚಿಕನ್ ಅನ್ನು ಕನಿಷ್ಟ 30 ನಿಮಿಷಗಳಿಂದ 2 ಗಂಟೆಯವರೆಗೂ ಮ್ಯಾರಿನೇಟ್ ಮಾಡಿ ಇಡಬಹುದಾಗಿದೆ. ಚಿಕನ್ ಮಾಂಸವನ್ನು ಮ್ಯಾರಿನೇಟ್ ಮಾಡಿ ಇಟ್ಟಷ್ಟೂ ಚಿಕನ್ ಕರಿಯ ಸ್ವಾದ ಹೆಚ್ಚಲಿದೆ.
ಈಗ ಒಂದು ಬಾಣಲೆಯನ್ನು ಸ್ಟವ್ ಮೇಲಿಡಿ. ಇದಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿಕೊಂಡು ಎಣ್ಣೆ ಬಿಸಿಯಾದ ಬಳಿಕ ಜೀರಿಗೆ, ಬಿರಿಯಾನಿ ಎಲೆ, ಚಕ್ಕೆ, ಲವಂಗ ಹಾಗೂ ಕಾಳುಮೆಣಸನ್ನು ಹಾಕಿಕೊಂಡು ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ಈಗ ಉದ್ದನೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಸುಮಾರು 10 ರಿಂದ 12 ನಿಮಿಷದ ಬಳಿಕ ಈರುಳ್ಳಿಯು ಬಣ್ಣ ಬದಲಾಗುತ್ತದೆ. ಒಮ್ಮೆ ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಇದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ನ್ನು ಹಾಕಿ. ಕೊನೆಯಲ್ಲಿ ಕತ್ತರಿಸಿದ ಟೊಮೆಟೊ ಹಾಕಿ. ಈ ಮಿಶ್ರಣದಿಂದ ಎಣ್ಣೆ ಬೇರ್ಪಡುವವರೆಗೂ ಹುರಿದುಕೊಳ್ಳಿ.
ಮಸಾಲೆಯಿಂದ ಎಣ್ಣೆ ಬೇರ್ಪಡಲು ಆರಂಭವಾಗುತ್ತಿದ್ದಂತೆಯೇ ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕೊತ್ತಂಬರಿ ಪುಡಿಯನ್ನು ಹಾಕಬೇಕು. ಈಗಾಗಲೇ ಚಿಕನ್ ಮ್ಯಾರಿನೇಟ್ ಮಾಡಲು ಖಾರದಪುಡಿಯನ್ನು ಬಳಸಿರುವ ಕಾರಣ ನೋಡಿಕೊಂಡು ಖಾರದ ಪುಡಿ ಸೇರಿಸಿ. ಇದೇ ಹಂತದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಸಾಲೆಯು ಗಾಢ ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿಕೊಳ್ಳಿ.
ಕೊನೆಯದಾಗಿ ನೀವು ಇದಕ್ಕೆ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ. ಮಧ್ಯಮ ಉರಿಯಲ್ಲಿ ಚಿಕನ್ ಬೇಯುವವರೆಗೂ ಈ ಪದಾರ್ಥವನ್ನು ಬೇಯಲು ಬಿಡಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಕೊನೆಯಲ್ಲಿ ಅಳತೆಗೆ ತಕ್ಕಷ್ಟು ನೀರನ್ನು ಸೇರಿಸಿ. ಅಗತ್ಯವೆನಿಸಿದರೆ ಈ ಹಂತದಲ್ಲಿ ಖಾರದಪುಡಿ ಹಾಗೂ ಗರಂ ಮಸಾಲೆಯನ್ನು ಹಾಕಬಹುದಾಗಿದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಚಿಕನ್ ಕರಿಯನ್ನು ಅಲಂಕರಿಸಿ. ಸಣ್ಣ ಉರಿಯಲ್ಲಿ ಕೆಲವು ನಿಮಿಷಗಳ ಕಾಲ ಬೇಯಲು ಬಿಡಿ.
ಈಗ ಬಿಸಿಬಿಸಿಯಾದ ಡಾಬಾ ಶೈಲಿಯ ಚಿಕನ್ ಕರಿ ಸವಿಯಲು ಸಿದ್ಧ. ಇದು ತಣ್ಣಗಾಗುವ ಮೊದಲೇ ಪರೋಟಾ ಅಥವಾ ರೋಟಿ ಜೊತೆಯಲ್ಲಿ ತಿನ್ನಿ. ಈ ಚಿಕನ್ ಕರಿ ಡಾಬಾಗಳಲ್ಲಿ ಸಿಗುವ ಚಿಕನ್ ಕರಿಯ ರುಚಿಯನ್ನೇ ಹೊಂದಿರುವುದರಿಂದ ನಿಮ್ಮ ಬಾಯಲ್ಲಿ ನೀರೂರುವುದು ಖಚಿತ.