ಒಣ ಮೀನಿನ ಸಾಂಬಾರ್ ಈ ರೀತಿ ಮಾಡಿ: ಮಂಗಳೂರು ಶೈಲಿಯ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ
ಕರಾವಳಿ ಪ್ರದೇಶಗಳಲ್ಲಿ ಹಸಿ ಮೀನಿನ ಖಾದ್ಯಗಳು ಮತ್ತು ಒಣ ಮೀನುಗಳ ಖಾದ್ಯಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಒಣ ಮೀನುಗಳ ಖಾದ್ಯವು ಕೂಡ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಒಣ ಮೀನಿನ ಜತೆಗೆ ಅಲಸಂಡೆ ಕಾಳು ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಇಲ್ಲಿದೆ ಮಂಗಳೂರು ಶೈಲಿಯ ಒಣ ಮೀನಿನ ಸಾಂಬಾರ್ ರೆಸಿಪಿ.
ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಣ ಮೀನುಗಳ ಪರಿಚಯ ತುಂಬಾ ಚೆನ್ನಾಗಿ ಇರುತ್ತದೆ. ಮಂಗಳೂರು, ಉಡುಪಿ ಭಾಗಗಳಲ್ಲಿ ಹಸಿ ಮೀನಿನ ಖಾದ್ಯ ಮಾತ್ರವಲ್ಲ ಒಣ ಮೀನಿನ ಖಾದ್ಯವೂ ಬಹಳ ಪ್ರಸಿದ್ಧಿ ಪಡೆದಿದೆ. ಇದು ಕೂಡ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಣ ಮೀನುಗಳಲ್ಲೂ ಕೂಡ ಹಲವು ವಿಧಗಳಿವೆ. ಹಸಿ ಮೀನುಗಳನ್ನು ಬಿಸಿಲಿನಲ್ಲಿ ಒಣಗಿಸುವ ಮೂಲಕ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಹಲವು ದಿನಗಳವರೆಗೆ ಇದನ್ನು ಶೇಖರಿಸಿಡಬಹುದು. ಹಸಿ ಮೀನು ಸಿಗದಿದ್ದಾಗ, ಅಥವಾ ವಿಭಿನ್ನ ರುಚಿ ಬೇಕು ಎಂದೆನಿಸಿದರೆ ಒಣ ಮೀನಿನ ಸಾಂಬಾರ್ ಮಾಡಬಹುದು. ಒಣ ಮೀನಿನ ಜತೆಗೆ ಹೆಸರು ಕಾಳು ಅಥವಾ ಅಲಸಂಡೆ ಕಾಳನ್ನು ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಮಂಗಳೂರು ಶೈಲಿಯ ಒಣ ಮೀನಿನ ಸಾಂಬಾರ್ ರೆಸಿಪಿಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮಂಗಳೂರು ಶೈಲಿಯ ಒಣ ಮೀನಿನ ಸಾಂಬಾರ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಒಣ ಮೀನು- 1 ಕೆ.ಜಿ, ಅಲಸಂಡೆ ಕಾಳು- 1 ಕಪ್, ಬ್ಯಾಡಗಿ ಮೆಣಸು- 10, ಖಾರದ ಮೆಣಸು- 4, ಧನಿಯಾ ಬೀಜ- 3 ಟೀ ಚಮಚ, ಮೆಂತ್ಯ ಕಾಳು- 5 ರಿಂದ 6 ಕಾಳು, ಜೀರಿಗೆ- 1 ಟೀ ಚಮಚ, ಸಾಸಿವೆ- ಕಾಲು ಟೀ ಚಮಚ, ಅರಿಶಿನ- 1 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ- 8 ಎಸಳು, ಈರುಳ್ಳಿ- 2, ಟೊಮೆಟೊ- 1, ಹುಣಸೆಹಣ್ಣಿನ ಹುಳಿ- ಅರ್ಧ ನಿಂಬೆ ಗಾತ್ರ, ತೆಂಗಿನ ತುರಿ- 1 ಕಪ್.
ಮಾಡುವ ವಿಧಾನ: ಮೊದಲಿಗೆ ಬ್ಯಾಡಗಿ ಮೆಣಸು, ಖಾರದ ಮೆಣಸು, ಧನಿಯಾ ಬೀಜ, ಮೆಂತ್ಯ ಕಾಳು, ಜೀರಿಗೆ, ಸಾಸಿವೆ, 1 ಈರುಳ್ಳಿ ಇವೆಲ್ಲವನ್ನೂ ಹುರಿದುಕೊಳ್ಳಿ.
- ಒಣ ಮೀನನ್ನು ಸ್ವಚ್ಛಗೊಳಿಸಿ ಅರ್ಧ ಗಂಟೆ ಉಗುರು ಬೆಚ್ಚಗಿನ ನೀರಿನಲ್ಲಿ ಇರಿಸಿ.
- ಅಲಸಂಡೆ ಕಾಳನ್ನು ರಾತ್ರಿಯಿಡೀ ನೆನೆಸಿಡಿ (ಅಲಸಂಡೆ ಕಾಳು ಬದಲಿಗೆ ಹೆಸರು ಕಾಳನ್ನೂ ಉಪಯೋಗಿಸಬಹುದು).
- ಅಲಸಂಡೆ ಕಾಳನ್ನು ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ 2 ರಿಂದ 3 ಸೀಟಿ ಬರುವವರೆಗೆ ಬೇಯಿಸಿ.
- ಈ ವೇಳೆ ಹುರಿದಿಟ್ಟಿರುವ ಮಸಾಲೆಗಳು, ಹುಣಸೆಹಣ್ಣು, ತೆಂಗಿನತುರಿ, ಅರಿಶಿನ, ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ.
- ನಂತರ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಒಣ ಮೀನುಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ.
- ಒಂದು ಕುದಿ ಬಂದಾಗ ಅದಕ್ಕೆ ಬೇಯಿಸಿದ ಅಲಸಂಡೆ ಕಾಳುಗಳನ್ನು ಸೇರಿಸಿ. ಜತೆಗೆ 1 ಕತ್ತರಿಸಿದ ಈರುಳ್ಳಿ ಹಾಗೂ ಟೊಮೆಟೋವನ್ನು ಸೇರಿಸಿ ಮಿಶ್ರಣ ಮಾಡಿ.
- ನಂತರ ರುಬ್ಬಿರುವ ಮಸಾಲೆಯ ಮಿಶ್ರಣವನ್ನು ಹಾಕಿ ಬೇಯಿಸಿ. ಬೇಕಿದ್ದರೆ ನೀರು, ಉಪ್ಪು ಸೇರಿಸಬಹುದು. ಚೆನ್ನಾಗಿ ಕುದಿ ಬಂದಾಗ ಪಕ್ಕಕ್ಕೆ ಇರಿಸಿ. ರುಚಿಕರವಾದ ಅಲಸಂಡೆ ಕಾಳು ಹಾಗೂ ಒಣ ಮೀನಿನ ಸಾಂಬಾರು ಸವಿಯಲು ಸಿದ್ಧ.
- ಈ ಸಾಂಬಾರ್ ಅನ್ನು ಅನ್ನದೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅದರಲ್ಲೂ ಕೆಂಪಕ್ಕಿ ಅನ್ನದೊಂದಿಗೆ ತುಂಬಾ ಟೇಸ್ಟಿಯಾಗಿರುತ್ತದೆ. ನೀವು ಒಮ್ಮೆ ಈ ರೆಸಿಪಿ ಮಾಡಿ ನೋಡಿ, ಖಂಡಿತ ನಿಮಗೆ ಇಷ್ಟವಾಗಬಹುದು.