ಹಸಿ ಬಟಾಣಿಯಿಂದ ತಯಾರಿಸಿ ರುಚಿಕರ ವಡೆ; ಸಂಜೆ ಚಹಾ ಹೀರುತ್ತಾ ತಿನ್ನಲು ಬೆಸ್ಟ್, ಪಾಕವಿಧಾನ ತುಂಬಾ ಸರಳ
ಹಸಿ ಬಟಾಣಿಗಳಿಂದ ವಡೆ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?ಅವು ಸಂಜೆ ಚಹಾದೊಂದಿಗೆ ಅಥವಾ ಊಟದಲ್ಲಿ ಸೈಡ್ ಡಿಶ್ ಆಗಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಹಸಿ ಬಟಾಣಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಹಸಿರು ಬಟಾಣಿ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮವಾಗೆದೆ. ಸತು, ತಾಮ್ರ, ಮ್ಯಾಂಗನೀಸ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುವ ಹಸಿರು ಬಟಾಣಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಸಿವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ.
ಹಸಿರು ಬಟಾಣಿಯು ಅದ್ಭುತ ರುಚಿಯನ್ನು ಹೊಂದಿದೆ. ಆರೋಗ್ಯಕರ ಹಸಿರು ಬಟಾಣಿಗಳಿಂದ ಎಂದಾದರೂ ವಡೆಯನ್ನು ಪ್ರಯತ್ನಿಸಿದ್ದೀರಾ? ಇದರ ಪಾಕವಿಧಾನ ತುಂಬಾ ಸರಳ. ಸಂಜೆ ಚಹಾಕ್ಕೆ ತಿಂಡಿಯಾಗಿ ಅಥವಾ ಊಟದ ಜೊತೆಗೂ ಸೈಡ್ ಡಿಶ್ ಆಗಿ ತಿನ್ನಬಹುದು. ಮನೆಮಂದಿ ಖಂಡಿತ ಇದನ್ನು ಇಷ್ಟಪಟ್ಟು ತಿಂತಾರೆ. ಹಸಿ ಬಟಾಣಿ ವಡೆಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಸಿ ಬಟಾಣಿ ವಡೆಯನ್ನು ಹೇಗೆ ತಯಾರಿಸುವುದು
ಬೇಕಾಗುವ ಪದಾರ್ಥಗಳು: 1 ಕಪ್ ಹಸಿರು ಬಟಾಣಿ, ಅರ್ಧ ಟೀ ಚಮಚ ಸಕ್ಕರೆ, 4 ಅಥವಾ 5 ಬೆಳ್ಳುಳ್ಳಿ ಎಸಳುಗಳು, 1 ಸಣ್ಣ ತುಂಡು ಶುಂಠಿ, 2-4 ಹಸಿಮೆಣಸಿನಕಾಯಿ, 1 ಚಮಚ ಜೀರಿಗೆ, ಅರ್ಧ ಚಮಚ ಕಾಳುಮೆಣಸು, 1 ಚಮಚ ಕೊತ್ತಂಬರಿ ಬೀಜ, 1 ಈರುಳ್ಳಿ, ಕಾಲು ಚಮಚ ಕೊತ್ತಂಬರಿ ಪುಡಿ, ಕಾಲು ಚಮಚ ಮೆಣಸಿನ ಪುಡಿ, ಒಂದು ಚಿಟಿಕೆ ಅರಿಶಿನ, 2 ಚಮಚ ಕೊತ್ತಂಬರಿ ಸೊಪ್ಪು, ಅರ್ಧ ಟೀ ಚಮಚ ಕಸೂರಿ ಮೆಂತೆ, 1 ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಅಡಿಗೆ ಸೋಡಾ, ಡೀಪ್ ಫ್ರೈಗೆ ಬೇಕಾಗುಷ್ಟು ಎಣ್ಣೆ.
ತಯಾರಿಸುವ ವಿಧಾನ: ಹಸಿರು ಬಟಾಣಿಯಿಂದ ವಡೆಗಳನ್ನು ತಯಾರಿಸುವ ಮೊದಲು, ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಒಲೆ ಮೇಲಿಟ್ಟು ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಅದಕ್ಕೆ ಸಕ್ಕರೆ ಬೆರೆಸಿ. ನಂತರ ಅದಕ್ಕೆ ಹಸಿರು ಬಟಾಣಿಗಳನ್ನು ಹಾಕಿ ನಾಲ್ಕರಿಂದ ಐದು ನಿಮಿಷಗಳ ಕಾಲ ಬೇಯಲು ಬಿಡಿ.
ಬಟಾಣಿಗಳನ್ನು ಬೇಯಿಸಿದ ನಂತರ, ನೀರನ್ನು ಸೋಸಿ ಮತ್ತು ಬಟಾಣಿಗಳನ್ನು ಮ್ಯಾಶ್ ಮಾಡಿ. ಈಗ ಒಂದು ಮಿಕ್ಸಿ ಬೌಲ್ ಅಥವಾ ರೋಲ್ ತೆಗೆದುಕೊಂಡು ಬೆಳ್ಳುಳ್ಳಿ ಲವಂಗ, ಸಣ್ಣ ತುಂಡು ಶುಂಠಿ, ಹಸಿ ಮೆಣಸಿನಕಾಯಿ ಬೆರೆಸಿ ರುಬ್ಬಿಕೊಳ್ಳಿ. ನಂತರ ಕಾಳುಮೆಣಸು, ಕೊತ್ತಂಬರಿ ಮತ್ತು ಜೀರಿಗೆಯನ್ನು ಹಾಕಿ ಒರಟಾಗಿ ರುಬ್ಬಿ.
ಈಗ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಮೊದಲೇ ಬೇಯಿಸಿದ ಬಟಾಣಿ ಮತ್ತು ನುಣ್ಣಗೆ ಬೇಯಿಸಿದ ಬಟಾಣಿ ಮತ್ತು ಮಸಾಲೆ ಪೇಸ್ಟ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಸೂರಿಮೆಂತ್ಯ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಕೈಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಬಟಾಣಿ ಮತ್ತು ಮಸಾಲೆಗಳು ಒಟ್ಟಿಗೆ ಬೆರೆಯುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ತೆಗೆದುಕೊಂಡು ವಡೆಗಳಾಗಿ ಮಾಡಿ ಪಕ್ಕಕ್ಕೆ ಇಡಿ. ಈ ವಡೆಗಳನ್ನು ತುಂಬಾ ತೆಳುವಾಗಿ ಅಥವಾ ತುಂಬಾ ದಪ್ಪವಾಗಿ ಮಾಡಬೇಡಿ, ಆದರೆ ಮಧ್ಯಮ ಗಾತ್ರದಲ್ಲಿ ಅಂದರೆ ಬಿಸ್ಕತ್ತುಗಳಂತೆ ಮಾಡಿ.
ಈಗ ಒಂದು ಬಾಣಲೆ ತೆಗೆದುಕೊಂಡು ಡೀಪ್ ಫ್ರೈ ಮಾಡಲು ಅದಕ್ಕೆ ಬೇಕಾದಕಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಒಂದೊಂದೆ ವಡೆಯನ್ನು ಹಾಕಿ ಫ್ರೈ ಮಾಡಿ. ವಡೆ ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಕರಿಯಿರಿ. ನಂತರ ಅದನ್ನು ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿದರೆ ಗರಿಗರಿಯಾದ ಮತ್ತು ರುಚಿಕರವಾದ ಹಸಿಬಟಾಣಿ ವಡೆ ಸಿದ್ಧ. ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಕೆಚಪ್‌ನೊಂದಿಗೆ ಬಿಸಿಯಾಗಿ ಬಡಿಸಿ. ಚಹಾ ಜೊತೆ ತಿನ್ನಲು ಉತ್ತಮವಾಗಿರುತ್ತದೆ.
ವಿಭಾಗ