ಈ ರೀತಿ ಮಾಡಿ ಆರೋಗ್ಯಕರ ಪಾಲಕ್ ಪೂರಿ: ರುಚಿಕರವಾಗಿರುವ ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ
ಆರೋಗ್ಯಕರ ಪದಾರ್ಥಗಳೊಂದಿಗೆ ಪೂರಿ ರೆಸಿಪಿ ಮಾಡುವುದು ತುಂಬಾ ಒಳ್ಳೆಯದು. ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟಿನ ಪೂರಿಯನ್ನು ನೀವು ತಿಂದಿರಬಹುದು. ಪಾಲಕ್ ಸೊಪ್ಪಿನ ಪೂರಿಯನ್ನು ಸವಿದಿದ್ದೀರಾ. ಆರೋಗ್ಯಕ್ಕೆ ಉತ್ತಮವಾದ ಪಾಲಕ್ ಸೊಪ್ಪಿನ ಪೂರಿ ಮಾಡುವುದು ತುಂಬಾನೇ ಸಿಂಪಲ್. ಇಲ್ಲಿದೆ ಪಾಕವಿಧಾನ.
ಪೂರಿಯನ್ನು ಮೈದಾ ಹಿಟ್ಟಿನಿಂದ ಮಾತ್ರವಲ್ಲ ಗೋಧಿ ಹಿಟ್ಟಿನಿಂದಲೂ ತಯಾರಿಸಬಹುದು. ಆರೋಗ್ಯಕರ ಪಾಲಕ್ ಸೊಪ್ಪಿನ ಪೂರಿಯನ್ನು ಸಹ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ. ಇಲ್ಲಿ ಪಾಲಕ್ ಪೂರಿ ಪಾಕವಿಧಾನವನ್ನು ನೀಡಲಾಗಿದೆ. ಪಾಲಕ್ ಪೂರಿಯೊಂದಿಗೆ ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಚಿಕನ್ ಕರಿ, ಮೊಟ್ಟೆ ಕರಿ ಜತೆ ಸವಿಯಬಹುದು. ಅಥವಾ ಚನಾ ಮಸಾಲ, ಪನೀರ್ ಕರಿ, ಆಲೂಗಡ್ಡೆ ಕರಿಯೊಂದಿಗೆ ಸವಿಯಲೂ ರುಚಿಕರವಾಗಿರುತ್ತದೆ. ಪಾಲಕ್ ಪೂರಿ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಪಾಲಕ್ ಪೂರಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು- ಒಂದು ಕಪ್, ಗೋಧಿ ಹಿಟ್ಟು- ಒಂದು ಕಪ್, ಉಪ್ಮಾ ರವೆ- ಒಂದೂವರೆ ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಚಮಚ, ಚಿಲ್ಲಿ ಪೇಸ್ಟ್- ಒಂದು ಟೀ ಚಮಚ, ಎಳ್ಳು- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಕಾಲು ಟೀ ಚಮಚ, ಜೀರಿಗೆ ಪುಡಿ- ಕಾಲು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ- ಕರಿಯಲು.
ರೆಸಿಪಿ ಮಾಡುವ ವಿಧಾನ: ಸ್ಟೌವ್ ಮೇಲೆ ಒಂದು ಪಾತ್ರೆ ಇಟ್ಟು ಒಂದು ಟೀ ಚಮಚ ಎಣ್ಣೆ ಹಾಕಿ ಅದರಲ್ಲಿ ಸೊಪ್ಪನ್ನು ಹುರಿಯಿರಿ. ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ತಣ್ಣಗಾದ ನಂತರ ಮಿಕ್ಸರ್‌ಗೆ ಹಾಕಿ ನಯವಾದ ಪ್ಯೂರಿ (ರಸ) ಮಾಡಿ. ನಂತರ ಚಪಾತಿಗೆ ಮಾಡುವಂತೆ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ. ಇದಕ್ಕೆ ಪಾಲಕ್ ಸೊಪ್ಪಿನ ರಸ, ರವೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಪುಡಿ, ಎಳ್ಳು, ಜೀರಿಗೆ ಪುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನೀರನ್ನು ನಿಧಾನವಾಗಿ ಸೇರಿಸಿ ಹಿಟ್ಟು ನಾದಿಕೊಳ್ಳಿ. ನಂತರ 2 ಟೀ ಚಮಚ ಎಣ್ಣೆ ಸವರಿ ಹತ್ತು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
ಈಗ ಹಿಟ್ಟಿನಿಂದ ಒಂದು ಚಿಕ್ಕ ಉಂಡೆಯನ್ನು ತೆಗೆದು ಸಣ್ಣಗೆ ಲಟ್ಟಿಸಿ. ಸ್ಟೌವ್‍ನಲ್ಲಿ ಬಾಣಲೆ ಇಟ್ಟು ಅದಕ್ಕೆ ಕರಿಯಲು ಬೇಕಾಗುವಷ್ಟು ಎಣ್ಣೆ ಸೇರಿಸಿ. ಎಣ್ಣೆ ಕಾದ ನಂತರ ಅದರಲ್ಲಿ ಪೂರಿ ಕರಿಯಿರಿ. ಎರಡೂ ಕಡೆ ಚೆನ್ನಾಗಿ ಕರಿದರೆ ರುಚಿಕರವಾದ ಪಾಲಕ್ ಪೂರಿ ರೆಸಿಪಿ ಸವಿಯಲು ಸಿದ್ಧ.
ಪೂರಿ ಎಣ್ಣೆ ತುಂಬಾ ಹೀರಿಕೊಂಡಿದೆ ಎಂದು ಅನಿಸಿದರೆ ಅದನ್ನು ಟಿಶ್ಯೂ ಪೇಪರ್ ಮೇಲೆ ಹಾಕಿ. ಚಿಕನ್ ಗ್ರೇವಿ, ಮೊಟ್ಟೆಯ ಗ್ರೇವಿ, ಪನೀರ್, ಆಲೂಗಡ್ಡೆ ಗ್ರೇವಿಯೊಂದಿಗೆ ಸವಿಯಿರಿ. ರುಚಿ ತುಂಬಾ ಚೆನ್ನಾಗಿರುತ್ತದೆ. ಒಂದು ಸಲ ಟ್ರೈ ಮಾಡಿ ನೋಡಿ. ಸೀಗಡಿ ಕರಿಯೊಂದಿಗೂ ತಿನ್ನಲು ಚೆನ್ನಾಗಿರುತ್ತದೆ.
ಸಸ್ಯಾಹಾರಿಗಳಾಗಿದ್ದರೆ, ಚನಾ ಮಸಾಲ, ಹಸಿರು ಬಟಾಣಿ ಕರಿ ಮತ್ತು ಆಲೂಗಡ್ಡೆ ಕರಿ ಜತೆ ಸವಿಯಬಹುದು. ವಿಶೇಷವಾಗಿ ಮಕ್ಕಳು ಇಷ್ಟಪಡುತ್ತಾರೆ. ಆದರೆ, ಎಣ್ಣೆಯಲ್ಲಿ ಕರಿದಿರುವುದರಿಂದ ಆಗಾಗ ತಿನ್ನುವುದಕ್ಕಿಂತ ಅಪರೂಪಕ್ಕೊಮ್ಮೆ ತಿನ್ನುವುದು ಒಳ್ಳೆಯದು. ಕರಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಏರ್ ಫ್ರೈಯರ್‍ನಲ್ಲೂ ಪೂರಿ ಮಾಡಿ ತಿನ್ನಬಹುದು.
ವಿಭಾಗ