ಹುರುಳಿ ಸಾರು ಅಲ್ಲ, ಹುರುಳಿ ಕಾಳಿನ ಮಸಾಲೆ ಪುಡಿ ಮಾಡಿಡಿ; ತಿಂಗಳುಗಟ್ಟಲೆ ಸ್ಟೋರ್ ಮಾಡಿಟ್ರೂ ಕೆಡಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಹುರುಳಿ ಸಾರು ಅಲ್ಲ, ಹುರುಳಿ ಕಾಳಿನ ಮಸಾಲೆ ಪುಡಿ ಮಾಡಿಡಿ; ತಿಂಗಳುಗಟ್ಟಲೆ ಸ್ಟೋರ್ ಮಾಡಿಟ್ರೂ ಕೆಡಲ್ಲ

ಹುರುಳಿ ಸಾರು ಅಲ್ಲ, ಹುರುಳಿ ಕಾಳಿನ ಮಸಾಲೆ ಪುಡಿ ಮಾಡಿಡಿ; ತಿಂಗಳುಗಟ್ಟಲೆ ಸ್ಟೋರ್ ಮಾಡಿಟ್ರೂ ಕೆಡಲ್ಲ

ಹುರುಳಿ ಕಾಳಿನಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಚಟ್ನಿ, ಬಸಳೆ ಸೊಪ್ಪಿನ ಸಾರಿನ ಜೊತೆ ಹುರುಳಿ ಕಾಳು ಬೆರೆಸಿ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಹುರುಳಿ ಕಾಳಿನ ಮಸಾಲೆ ಪುಡಿಯನ್ನೂ ತಯಾರಿಸಬಹುದು. ಇದನ್ನು ಒಮ್ಮೆ ಪುಡಿ ಮಾಡಿ ಸಂಗ್ರಹಿಸಿದರೆ ಆರು ತಿಂಗಳವರೆಗೆ ಕೆಡದಂತೆ ಇಡಬಹುದು. ಹುರುಳಿ ಕಾಳಿನ ಮಸಾಲೆ ಪುಡಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿದೆ.

ಹುರುಳಿ ಕಾಳಿನ ಮಸಾಲೆ ಪುಡಿ ಹೀಗೆ ತಯಾರಿಸಿ
ಹುರುಳಿ ಕಾಳಿನ ಮಸಾಲೆ ಪುಡಿ ಹೀಗೆ ತಯಾರಿಸಿ (Pinterest)

ಹುರುಳಿಯು ಕಂದು ಬಣ್ಣದ ಸಣ್ಣ ದ್ವಿದಳ ಧಾನ್ಯವಾಗಿದ್ದು, ಇದು ಪೌಷ್ಟಿಕ ಆಹಾರವಾಗಿದೆ. ದಕ್ಷಿಣ ಭಾರತ ಹಾಗೂ ಏಷ್ಯಾದ ಹಲವು ಭಾಗಗಳಲ್ಲಿ ಅಡುಗೆಗೆ ಹುರುಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಅತ್ಯಂತ ಹಳೆಯ ಕೃಷಿ ಬೆಳೆಗಳಲ್ಲಿ ಒಂದಾಗಿದೆ. ಪ್ರೋಟೀನ್, ನಾರಿನಂಶ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಗತ್ಯ ಖನಿಜಗಳಿಂದ ತುಂಬಿರುವ ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಉತ್ತಮ ಆಯ್ಕೆಯಾಗಿದೆ. ಮಧುಮೇಹಿಗಳಿಗೆ ಕೂಡ ಇದು ಉತ್ತಮ ಆಯ್ಕೆ.

ಹುರುಳಿ ಕಾಳಿನಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಚಟ್ನಿ, ಸಾರು, ಬಸಳೆ ಸೊಪ್ಪಿನ ಸಾರಿನ ಜೊತೆ ಹುರುಳಿ ಕಾಳು ಬೆರೆಸಿ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಹುರುಳಿ ಕಾಳಿನ ಮಸಾಲೆ ಪುಡಿಯನ್ನೂ ತಯಾರಿಸಬಹುದು. ಇದನ್ನು ಒಮ್ಮೆ ಪುಡಿ ಮಾಡಿ ಸಂಗ್ರಹಿಸಿದರೆ ಆರು ತಿಂಗಳವರೆಗೆ ತಾಜಾವಾಗಿರುತ್ತದೆ. ಪ್ರತಿದಿನ ಇದನ್ನು ತಿನ್ನುವುದರಿಂದ ಹಲವು ಆರೋಗ್ಯ ಲಾಭಗಳಿವೆ. ಹಾಗಿದ್ದರೆ ಹುರುಳಿ ಕಾಳು ಮಸಾಲೆ ಪುಡಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಹುರುಳಿ ಕಾಳು ಮಸಾಲೆ ಪುಡಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಹುರುಳಿ ಕಾಳು- 200 ಗ್ರಾಂ, ಕಡಲೆಬೇಳೆ- ಒಂದೂವರೆ ಚಮಚ, ಉದ್ದಿನ ಬೇಳೆ- ಒಂದೂವರೆ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಒಣ ಮೆಣಸು- 10, ಕಾಳುಮೆಣಸು- 1 ಚಮಚ, ಬೆಳ್ಳುಳ್ಳಿ ಎಸಳು- 10, ಒಣಕೊಬ್ಬರಿ- 2 ಚಮಚ.

ತಯಾರಿಸುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಹುರುಳಿ ಕಾಳನ್ನು ಹುರಿದು ಒಂದು ತಟ್ಟೆಗೆ ಎತ್ತಿಡಿ. ನಂತರ ಕಡಲೆಬೇಳೆ ಹಾಗೂ ಉದ್ದಿನ ಬೇಳೆಯನ್ನು ಹುರಿದು ಅದೇ ತಟ್ಟೆಗೆ ಹಾಕಿ. ಬಳಿಕ ಬೆಳ್ಳುಳ್ಳಿ ಎಸಳು, ಒಣಮೆಣಸಿನಕಾಯಿ, ಕಾಳುಮೆಣಸು, ಒಣಕೊಬ್ಬರಿಯನ್ನು ಹುರಿಯಿರಿ. ನಂತರ ಹುರಿದ ಈ ಎಲ್ಲಾ ಮಿಶ್ರಣಕ್ಕೆ ಉಪ್ಪು ಬೆರೆಸಿ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಂಡರೆ ಹುರುಳಿ ಕಾಳು ಮಸಾಲೆ ಪುಡಿ ಸಿದ್ಧವಾಗಿದೆ.

ತಯಾರಾದ ಹುರುಳಿ ಕಾಳು ಮಸಾಲೆ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಅನ್ನದ ಜೊತೆ ಈ ಮಸಾಲೆ ಪುಡಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ದೋಸೆ, ಚಪಾತಿಯೊಂದಿಗೂ ತಿನ್ನಬಹುದು. ಈ ಮಸಾಲೆ ಪುಡಿಗೆ ಸ್ವಲ್ಪ ತುಪ್ಪ ಬೆರೆಸಿ ತಿಂದರೆ ಅದ್ಭುತ ರುಚಿ ಹೊಂದಿರುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟಪಡುತ್ತೀರಿ.

ಹುರುಳಿ ಕಾಳು ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಅವು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಇದನ್ನು ತಿನ್ನುವುದರಿಂದ ಮೂಳೆಗಳು ಸಹ ಬಲಗೊಳ್ಳುತ್ತವೆ ಎಂದು ನಂಬಲಾಗಿದೆ. ಹಾಗೆಯೇ ತೂಕ ಇಳಿಕೆಗೂ ಸಹಾಯಕವಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ನಮ್ಮ ದೇಹಕ್ಕೆ ಬಹಳ ಅತ್ಯಗತ್ಯವಾಗಿದೆ. ಮೇಲೆ ನೀಡಿರುವ ಹುರುಳಿಕಾಳು ಪಾಕವಿಧಾನವನ್ನು ಪ್ರಯತ್ನಿಸಿ ನೋಡಿ. ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

Whats_app_banner