ಹುದುಗುವಿಕೆಯ ಅಗತ್ಯವಿಲ್ಲ, ಬಾಯಲ್ಲಿಟ್ಟರೆ ಕರಗುತ್ತೆ ಇಡ್ಲಿ; ಇಲ್ಲಿದೆ ತ್ವರಿತ ಇಡ್ಲಿ ರೆಸಿಪಿ ಮಾಡುವ ವಿಧಾನ
Instant Idli Recipe: ಸಾಮಾನ್ಯವಾಗಿ ಇಡ್ಲಿಯನ್ನು ತಯಾರಿಸಲು ಹಿಂದಿನ ದಿನ ದಿನ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಹಲವು ಸಮಯಗಳ ಕಾಲ ನೆನೆಸಿ ರುಬ್ಬಿ, ರಾತ್ರಿಯಿಡೀ ಹುದುಗಲು ಬಿಡಬೇಕು. ಆದರೆ, ಇಲ್ಲಿ ನಾವು ತಿಳಿಸಿರುವ ಈ ಇಡ್ಲಿ ರೆಸಿಯನ್ನು ಸುಲಭವಾಗಿ, ತ್ವರಿತವಾಗಿ ತಯಾರಿಸಬಹುದಾಗಿದೆ. ಇಲ್ಲಿದೆ ತ್ವರಿತ ಅಥವಾ ಇನ್ಸ್ಟಾಂಟ್ ಇಡ್ಲಿ ರೆಸಿಪಿ ಮಾಡುವ ವಿಧಾನ.
ಸಾಮಾನ್ಯವಾಗಿ ಇಡ್ಲಿ ಮಾಡಲು ಉದ್ದುವನ್ನು ಕೆಲವು ಗಂಟೆಗಳ ಕಾಲ ನೆನೆಸಿ, ಅದನ್ನು ರುಬ್ಬಿ, ರವೆಯೊಂದಿಗೆ ಬೆರೆಸಿ ರಾತ್ರಿಯಿಡೀ ಹುದುಗಲು ಬಿಡಬೇಕು. ಇದಕ್ಕಾಗಿ ಕನಿಷ್ಠ ಒಂದು ದಿನ ಮುಂಚಿತವಾಗಿ ಯೋಜಿಸಬೇಕಾಗುತ್ತದೆ. ನೀವು ಎಂದಾದರೂ ತಕ್ಷಣ ಅಥವಾ ತ್ವರಿತವಾಗಿ ಇಡ್ಲಿ ಮಾಡಲು ಬಯಸಿದರೆ ಹುದುಗುವಿಕೆಯ ಅಗತ್ಯವಿಲ್ಲದೇ ಈ ಇಡ್ಲಿಗಳನ್ನು ಮಾಡಬಹುದು. ಇವು ತುಂಬಾ ಮೃದುವಾಗಿರುವುದಲ್ಲದೆ, ಬಾಯಲ್ಲಿಟ್ಟ ತಕ್ಷಣ ಕರಗುತ್ತದೆ. ಈ ತ್ವರಿತ ಅಥವಾ ಇನ್ಸ್ಟಾಂಟ್ ಇಡ್ಲಿ ರೆಸಿಪಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.
ತ್ವರಿತ ಇಡ್ಲಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ- 1 ಕಪ್ (ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ), ಮೊಸರು- ಒಂದೂವರೆ ಕಪ್, ಬಾಂಬೆ ರವೆ (ಉಪ್ಮಾ ರವೆ)- ಒಂದು ಕಪ್, ಅಡುಗೆ ಸೋಡಾ- ಅರ್ಧ ಟೀ ಚಮಚ, ಹಿಟ್ಟನ್ನು ರುಬ್ಬಲು ಮತ್ತು ಮಿಶ್ರಣ ಮಾಡಲು ನೀರು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಅವಲಕ್ಕಿಯನ್ನು ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಅದರ ನಂತರ, ಒಂದು ಪಾತ್ರೆಯಲ್ಲಿ ಅವಲಕ್ಕಿಗೆ ನೀರು ಸುರಿಯಿರಿ. ಅದು ಮುಳುಗುವವರೆಗೆ ನೀರು ಸೇರಿಸಬೇಕು. ಸುಮಾರು ಅರ್ಧ ಘಂಟೆಯವರೆಗೆ ನೆನೆಸಲು ಬಿಡಿ.
- ಇನ್ನೊಂದು ಮಿಕ್ಸಿಂಗ್ ಬೌಲ್‌ನಲ್ಲಿ ಮೊಸರು ಹಾಕಿ. ಇದಕ್ಕೆ ಅಡುಗೆ ಸೋಡಾ ಸೇರಿಸಿ ಗಂಟುಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು ಉಂಡೆಗಳಿಲ್ಲದೆ ನಯವಾಗುವವರೆಗೆ ಮಿಶ್ರಣ ಮಾಡಬೇಕು. ನಂತರ ಐದು ನಿಮಿಷಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ.
- ನಂತರ ಮೊಸರಿಗೆ ಬಾಂಬೆ ರವೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡಿದ ನಂತರ, ಅದನ್ನು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ.
- ನೆನೆಸಿದ ಅವಲಕ್ಕಿಯನ್ನು ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಂಡು ಮೃದುವಾದ ಪೇಸ್ಟ್ ಮಾಡಿ.
- ಮೊಸರು ಮತ್ತು ರವೆ ಮಿಶ್ರಣಕ್ಕೆ ರುಬ್ಬಿರುವ ಅವಲಕ್ಕಿಯನ್ನು ಹಾಕಿ ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಅವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ತುಂಬಾ ಹೊತ್ತು ಮಿಕ್ಸ್ ಮಾಡಿದರೆ ಇಡ್ಲಿಗಳು ಮೃದುವಾಗುತ್ತದೆ.
- ಮೊದಲು ನೀರನ್ನು ಸೇರಿಸದೆ ಮಿಶ್ರಣ ಮಾಡಿ. ಅದರ ನಂತರ ಸ್ವಲ್ಪ ನೀರು ಸುರಿಯಿರಿ. ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ.
- ನಂತರ, ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟನ್ನು ಸುರಿಯಿರಿ. ಹಿಟ್ಟಿನ ತಟ್ಟೆಗಳನ್ನು ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಿ. ಇಷ್ಟು ಮಾಡಿದರೆ ಇನ್‌ಸ್ಟಂಟ್ ಇಡ್ಲಿ ಸವಿಯಲು ಸಿದ್ಧ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೂ ಸವಿಯಬಹುದು.
ಈ ತ್ವರಿತ ಇಡ್ಲಿಯನ್ನು ಸುಮಾರು ಒಂದು ಗಂಟೆಯಲ್ಲಿ ಮಾಡಬಹುದು. ಅವು ತಿನ್ನಲು ತುಂಬಾ ಮೃದುವಾಗಿರುತ್ತವೆ. ಬಾಯಿಯಲ್ಲಿ ಇಟ್ಟ ತಕ್ಷಣ ಕರಗುತ್ತದೆ. ಆದರೆ, ಮೊಸರು, ರವೆ ಮತ್ತು ಅವಲಕ್ಕಿ ಮಿಶ್ರಣವನ್ನು ಸುಮಾರು ಹೊತ್ತು ಚೆನ್ನಾಗಿ ಬೆರೆಸಿದರೆ ಮಾತ್ರ ಇಡ್ಲಿ ಮೃದುವಾಗುತ್ತದೆ. ಸ್ವಲ್ಪ ಹೊತ್ತು ಬೆರೆಸಿದರೆ ಅದು ಮೃದುವಾಗುವುದಿಲ್ಲ. ಹುಳಿ ಮೊಸರು ಬಳಸಿದರೆ ಇನ್ನೂ ಉತ್ತಮ.
ವಿಭಾಗ