ಹೊರಗಡೆ ಕ್ರಿಸ್ಪಿ, ಒಳಗೆ ಮೆತ್ತಗಿರುವ ಮಂಗಳೂರು ಸ್ಪೆಷಲ್ ಗೋಳಿಬಜೆ: ಈ ಬಜ್ಜಿ ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊರಗಡೆ ಕ್ರಿಸ್ಪಿ, ಒಳಗೆ ಮೆತ್ತಗಿರುವ ಮಂಗಳೂರು ಸ್ಪೆಷಲ್ ಗೋಳಿಬಜೆ: ಈ ಬಜ್ಜಿ ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ

ಹೊರಗಡೆ ಕ್ರಿಸ್ಪಿ, ಒಳಗೆ ಮೆತ್ತಗಿರುವ ಮಂಗಳೂರು ಸ್ಪೆಷಲ್ ಗೋಳಿಬಜೆ: ಈ ಬಜ್ಜಿ ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ

ಕರ್ನಾಟಕದ ಮಂಗಳೂರು, ಉಡುಪಿ ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಗೋಳಿಬಜೆ ಎಂದರೆ ಇಷ್ಟ ಇಲ್ಲದವರು ಬಹುಶಃ ಇರಲಿಕ್ಕಿಲ್ಲ. ಮಂಗಳೂರಿನಿಂದಾಚೆಗೆ ಮಂಗಳೂರು ಬಜ್ಜಿ ಎಂದೇ ಖ್ಯಾತಿ ಪಡೆದಿರುವ ಈ ತಿಂಡಿ, ಆಂಧ್ರಪ್ರದೇಶದಲ್ಲಿ ಮೈಸೂರು ಬೋಂಡಾ ಎಂದು ಹೆಸರು ಪಡೆದಿದೆ. ಈ ಜನಪ್ರಿಯ ತಿಂಡಿಯನ್ನು ತಯಾರಿಸುವುದು ಹೇಗೆ, ಇಲ್ಲಿದೆ ರೆಸಿಪಿ.

ಹೊರಗಡೆ ಕ್ರಿಸ್ಪಿ, ಒಳಗೆ ಮೆತ್ತಗಿರುವ ಮಂಗಳೂರು ಸ್ಪೆಷಲ್ ಗೋಳಿಬಜೆ: ಈ ಬಜ್ಜಿ ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ
ಹೊರಗಡೆ ಕ್ರಿಸ್ಪಿ, ಒಳಗೆ ಮೆತ್ತಗಿರುವ ಮಂಗಳೂರು ಸ್ಪೆಷಲ್ ಗೋಳಿಬಜೆ: ಈ ಬಜ್ಜಿ ತಯಾರಿಸುವುದು ತುಂಬಾ ಸಿಂಪಲ್, ಇಲ್ಲಿದೆ ರೆಸಿಪಿ (PC: Canva)

ಗೋಳಿಬಜೆ ಅಥವಾ ಮಂಗಳೂರು ಬಜ್ಜಿ ಎಂದು ಕರೆಯಲ್ಪಡುವ ಮಂಗಳೂರು ಬಜ್ಜಿಯು ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಿಂದ ಹುಟ್ಟಿಕೊಂಡ ಜನಪ್ರಿಯ ತಿಂಡಿ. ಬೆಳಗ್ಗೆ ಅಥವಾ ಸಂಜೆ ವೇಳೆ ಚಹಾ ಜತೆಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ. ಸಂಜೆ ಹೊತ್ತು ಏನಾದರೂ ಕರಿದ ತಿಂಡಿ ತಿನ್ನಬೇಕು ಎಂಬ ಆಸೆಯಾದರೆ ಮಂಗಳೂರು ಬಜ್ಜಿಯನ್ನು ಸವಿಯಬಹುದು. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜತೆಗೂ ಸವಿಯಬಹುದು. ಮಂಗಳೂರು ಭಾಗದಲ್ಲಂತೂ ಬಹಳ ಜನಪ್ರಿಯ ತಿಂಡಿಯಾಗಿರುವ ಇದು ಸಂಜೆ ಟೈಮ್‍ನಲ್ಲಿ ಹೋಟೆಲ್‍ಗಳಲ್ಲಿ ಗೋಳಿಬಜೆ ಉಂಟಾ ಅಂತಲೇ ಗ್ರಾಹಕರು ಕೇಳಿ ತಿನ್ನುತ್ತಾರೆ. ಈ ಬೋಂಡಾವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹೋಟೆಲ್ ಶೈಲಿಯ ಮಂಗಳೂರು ಬಜ್ಜಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಹೋಟೆಲ್ ಶೈಲಿಯಲ್ಲಿ ಗೋಳಿಬಜೆ/ಮಂಗಳೂರು ಬಜ್ಜಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಮೈದಾ- 2 ಕಪ್, ಮೊಸರು (ಹುಳಿಯಿಲ್ಲದ)- ¾ ಕಪ್, ಸಕ್ಕರೆ- 1 ಚಮಚ, ಕಡಲೆಬೇಳೆ ಹಿಟ್ಟು- 1 ಚಮಚ, ಜೀರಿಗೆ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಉದ್ದಿನ ಬೇಳೆ- ಅರ್ಧ ಕಪ್, ಕರಿಬೇವು ಸೊಪ್ಪು- ಸ್ವಲ್ಪ, ಹಸಿಮೆಣಸಿನಕಾಯಿ- 6 ರಿಂದ 7 (ಖಾರಕ್ಕೆ ಅನುಗುಣವಾಗಿ), ತೆಂಗಿನತುರಿ- ¼ ಕಪ್, ಶುಂಠಿ. ಒಂದು ಸಣ್ಣ ತುಂಡು, ಅಡುಗೆ ಎಣ್ಣೆ- ಕರಿಯಲು.

ಮಾಡುವ ವಿಧಾನ: ಮೊದಲಿಗೆ ಉದ್ದಿನ ಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿ ರುಬ್ಬಿಟ್ಟು ಅದನ್ನು ರಾತ್ರಿ ಪೂರ್ತಿ ಇಡಿ. ಅಥವಾ ಬೆಳಗ್ಗೆ ಮಾಡಿದರೆ ಹುಳಿ ಬರಲು ಸಂಜೆ ತನಕ ಹಾಗೆಯೇ ಇಡಿ. ಬಳಿಕ ಹೋಟೆಲ್ ಶೈಲಿಯ ಮಂಗಳೂರು ಬಜ್ಜಿ ಮಾಡಲು ಆರಂಭಿಸಿ.

ಮೊದಲಿಗೆ ಹಸಿಮೆಣಸಿನಕಾಯಿ, ಶುಂಠಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಪಾತ್ರೆಗೆ ಹೆಚ್ಚಿಟ್ಟ ಹಸಿಮೆಣಸಿನಕಾಯಿ, ಶುಂಠಿ, ತೆಂಗಿನತುರಿಯನ್ನು ಸೇರಿಸಿ. ಇದಕ್ಕೆ ಹುಳಿ ಬಂದಿರುವ ಉದ್ದಿನ ಹಿಟ್ಟು, ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಜೀರಿಗೆ, ಉಪ್ಪು, ಸಕ್ಕರೆ, ಕಡಲೆಬೇಳೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೈದಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಿಟ್ಟು ಗಟ್ಟಿಯಾದರೆ ನೀರು ಸೇರಿಸಬಹುದು. ಅಥವಾ ಹಿಟ್ಟು ತುಂಬಾ ತೆಳುವಾದರೆ ಮೈದಾವನ್ನು ಸೇರಿಸಬಹುದು. ಹಿಟ್ಟನ್ನು ಚೆನ್ನಾಗಿ ಬೆರೆಸಿ, ಹುಳಿ ಬರಲು 3 ರಿಂದ 4 ಗಂಟೆಗಳ ಕಾಲ ಮುಚ್ಚಿಟ್ಟು ಇಡಿ.

3 ಗಂಟೆಗಳ ನಂತರ ಕರಿಯುವ ಮುನ್ನ ಈ ಹಿಟ್ಟಿಗೆ ಚಿಟಿಕೆ ಅಡುಗೆ ಸೋಡಾ ಹಾಕಬಹುದು. ಅಡುಗೆ ಸೋಡಾ ಹಾಕಿದ ನಂತರ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸ್ಟೌವ್ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಸುರಿಯಿರಿ. ಎಣ್ಣೆ ಕಾದ ನಂತರ ಒಂದೊಂದಾಗಿ ಬೋಂಡಾ ಬಿಡುವಂತೆ ಎಣ್ಣೆಯಲ್ಲಿ ಕರಿಯಿರಿ. ಇದು ಗೋಲ್ಡನ್ ಬ್ರೌನ್ ಬರುವವರೆಗೆ ಚೆನ್ನಾಗಿ ಕರಿಯಬೇಕು. ನಂತರ ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ಈಗ ರುಚಿಕರವಾದ ಮಂಗಳೂರು ಬಜ್ಜಿ ಅಥವಾ ಗೋಳಿಬಜೆ ಸವಿಯಲು ಸಿದ್ಧ.

ಈ ಬಜ್ಜಿಯನ್ನು ಸಂಜೆ ಚಹಾ ಜತೆ ಸವಿಯಬಹುದು. ಈಗ ಚಳಿಗಾಲ ಬೇರೆ ಆರಂಭವಾಗಿರುವುದರಿಂದ ಚುಮು ಚುಮು ಚಳಿಗೆ ಚಹಾ ಹೀರುತ್ತಾ ಈ ಕರಿದ ತಿಂಡಿ ತಿನ್ನಲು ಮಜಾವಾಗಿರುತ್ತದೆ. ಈ ರೆಸಿಪಿಯನ್ನು ಇನ್ಸ್ಟಾಂಟ್ ಆಗಿ ಉದ್ದಿನಹಿಟ್ಟು ಹಾಕದೆಯೂ ತಯಾರಿಸಬಹುದು. ಆದರೆ, ಈ ರೀತಿ ಮಾಡಿದರೆ ಬಜ್ಜಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ನೀವು ಒಮ್ಮೆ ಟ್ರೈ ಮಾಡಿ ನೋಡಿ, ಖಂಡಿತಾ ಇಷ್ಟಪಡುವಿರಿ.

Whats_app_banner