ಈ ವೀಕೆಂಡ್‌ಗೆ ಕರಾವಳಿಯ ಮಾಂಸದಡುಗೆ ಟ್ರೈ ಮಾಡಿ; ಮಂಗಳೂರು ಶೈಲಿಯ ಕೋಳಿ ಪುಳಿಮುಂಚಿ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ವೀಕೆಂಡ್‌ಗೆ ಕರಾವಳಿಯ ಮಾಂಸದಡುಗೆ ಟ್ರೈ ಮಾಡಿ; ಮಂಗಳೂರು ಶೈಲಿಯ ಕೋಳಿ ಪುಳಿಮುಂಚಿ ರೆಸಿಪಿ ಇಲ್ಲಿದೆ

ಈ ವೀಕೆಂಡ್‌ಗೆ ಕರಾವಳಿಯ ಮಾಂಸದಡುಗೆ ಟ್ರೈ ಮಾಡಿ; ಮಂಗಳೂರು ಶೈಲಿಯ ಕೋಳಿ ಪುಳಿಮುಂಚಿ ರೆಸಿಪಿ ಇಲ್ಲಿದೆ

ಈ ವೀಕೆಂಡ್‌ಗೆ ಯಾವ ಮಾಂಸಾಹಾರ ಖಾದ್ಯ ಮಾಡುವುದು ಎಂದು ಯೋಚಿಸುತ್ತಿದ್ದರೆ ರುಚಿಕರವಾದ ಕೋಳಿ ಪುಳಿಮುಂಚಿ ಮಾಡಿ ನೋಡಿ. ಮಂಗಳೂರು ಶೈಲಿಯ ಕೋಳಿ (ಕೋರಿ) ಪುಳಿಮುಂಚಿಯನ್ನುಅನ್ನ, ದೋಸೆ, ಚಪಾತಿ, ರೊಟ್ಟಿ, ಇಡ್ಲಿಯೊಂದಿಗೂ ತಿನ್ನಬಹುದು. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳೂರು ಶೈಲಿಯ ಕೋಳಿ ಪುಳಿಮುಂಚಿ ರೆಸಿಪಿ
ಮಂಗಳೂರು ಶೈಲಿಯ ಕೋಳಿ ಪುಳಿಮುಂಚಿ ರೆಸಿಪಿ (Pinterest )

ಈ ವೀಕೆಂಡ್‌ಗೆ ಯಾವ ಮಾಂಸಾಹಾರ ಖಾದ್ಯ ಮಾಡುವುದು ಎಂದು ಯೋಚಿಸುತ್ತಿದ್ದರೆ ರುಚಿಕರವಾದ ಕೋಳಿ ಪುಳಿಮುಂಚಿ ರೆಸಿಪಿ ಪ್ರಯತ್ನಿಸಿ. ಮಂಗಳೂರು ಶೈಲಿಯ ಕೋಳಿ (ಕೋರಿ) ಪುಳಿಮುಂಚಿ ಸಾಂಪ್ರದಾಯಿಕ ಮಾಂಸಾಹಾರ ಖಾದ್ಯವಾಗಿದ್ದು, ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅನ್ನ, ದೋಸೆ, ಚಪಾತಿ, ರೊಟ್ಟಿ, ಇಡ್ಲಿಯೊಂದಿಗೂ ತಿನ್ನಬಹುದು. ಮಂಗಳೂರು ಸ್ಪೆಷಲ್ ಕೋರಿರೊಟ್ಟಿಯನ್ನು ಈ ಸಾಂಬಾರ್‌ನೊಂದಿಗೆ ತಿನ್ನಲು ಇನ್ನೂ ಚೆನ್ನಾಗಿರುತ್ತದೆ. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕೋಳಿ ಪುಳಿಮುಂಚಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆ.ಜಿ, ಬ್ಯಾಡಗಿ ಮೆಣಸು- 20, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಮೆಂತ್ಯ- ಕಾಲು ಟೀ ಚಮಚ, ಸೋಂಪು- ಅರ್ಧ ಟೀ ಚಮಚ, ಗಸಗಸೆ- ಅರ್ಧ ಟೀ ಚಮಚ, ಈರುಳ್ಳಿ- 1 ½, ಬೆಳ್ಳುಳ್ಳಿ ಎಸಳು- 12, ಶುಂಠಿ- 2 ಇಂಚಿನಷ್ಟು, ಚಕ್ಕೆ- 1, ಕಾಳುಮೆಣಸು- ಅರ್ಧ ಟೀ ಚಮಚ, ಕರಿಬೇವಿನ ಎಲೆ- ಕಾಲು ಕಪ್, ಟೊಮೆಟೊ- 1, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು- 1 ಚಿಕ್ಕ ನಿಂಬೆಗಾತ್ರದಷ್ಟು, ಅರಿಶಿನ- 1 ಚಮಚ, ಅಡುಗೆ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ನೀರು- ಅಗತ್ಯಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲಿಗೆ 1 ಈರುಳ್ಳಿ, ಟೊಮೆಟೊವನ್ನು ಉದ್ದವಾಗಿ ಕತ್ತರಿಸಿ. ನಂತರ 4 ಬೆಳ್ಳುಳ್ಳಿ ಎಸಳು, 1 ಸಣ್ಣ ಇಂಚಿನಷ್ಟು ಶುಂಠಿಯನ್ನು ಸಣ್ಣದಾಗಿ ಹೆಚ್ಚಿಟ್ಟು ಒಂದು ತಟ್ಟೆಗೆ ಎತ್ತಿಡಿ. ನಂತರ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಿರಿ. ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಟೊಮೆಟೊ ಬೆರೆಸಿ ಹುರಿಯಿರಿ. ಟೊಮೆಟೊ ಬೆಂದ ನಂತರ ಸಣ್ಣಗೆ ಹೆಚ್ಚಿಟ್ಟ ಶುಂಠಿ-ಬೆಳ್ಳುಳ್ಳಿ, ಕರಿಬೇವಿನ ಎಲೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಸ್ವಚ್ಛಗೊಳಿಸಿದ ಕೋಳಿ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ರುಚ್ಚಿಗೆ ತಕ್ಕಷ್ಟು ಉಪ್ಪು ಹಾಕಿ. ಇದಕ್ಕೆ ಮುಚ್ಚಳವನ್ನು ಮುಚ್ಚಿ 10 ರಿಂದ 15 ನಿಮಿಷ ಬೇಯಿಸಲು ಬಿಡಿ (ಬೇಕಿದ್ದರೆ ನೀರು ಸ್ವಲ್ಪ ಹಾಕಬಹುದು, ಕೋಳಿ ಮಾಂಸ ಬೇಯುವ ವೇಳೆಗೆ ನೀರು ಹೊರಬರುವುದರಿಂದ ಹಾಕಲೇಬೇಕು ಅನ್ನುವ ಅಗತ್ಯವಿಲ್ಲ).

ಈ ವೇಳೆ ಮಸಾಲೆ ತಯಾರಿಸೋಣ. ಇದನ್ನು ತಯಾರಿಸಲು ಮೊದಲಿಗೆ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಕರಿಬೇವಿನ ಎಲೆ, ಬ್ಯಾಡಗಿ ಮೆಣಸನ್ನು ಹಾಕಿ ಹುರಿದು ತಟ್ಟೆಗೆ ಹಾಕಿ. ನಂತರ ಕೊತ್ತಂಬರಿ ಬೀಜ, ಜೀರಿಗೆ, ಸೋಂಪು, ಚಕ್ಕೆ, ಗಸಗಸೆಯನ್ನು ಹಾಕಿ ಹುರಿದು ತಟ್ಟೆಗೆ ಹಾಕಿ. ನಂತರ ಇದರಲ್ಲೇ ಕತ್ತರಿಸಿದ ಅರ್ಧ ಈರುಳ್ಳಿಯನ್ನು ಹಾಕಿ ಹುರಿಯಿರಿ. ಈ ಹುರಿದಿರುವ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ. ಜೊತೆಗೆ ಅರಶಿನ, ಹುಣಸೆಹಣ್ಣು, 8 ಎಸಳು ಬೆಳ್ಳುಳ್ಳಿ, 1 ಸಣ್ಣ ಇಂಚು ಶುಂಠಿ ಹಾಕಿ ಅಗತ್ಯ ತಕ್ಕಷ್ಟು ನೀರು ಬೆರೆಸಿ ನಯವಾಗಿ ರುಬ್ಬಿಕೊಳ್ಳಿ.

ಮಸಾಲೆ ಹುರಿದು, ರುಬ್ಬಿದ ನಂತರ ಕೋಳಿ ಮಾಂಸ ಬೆಂದಿದೆಯೇ ಎಂಬುದನ್ನು ಪರೀಕ್ಷಿಸಿ. ಬೆಂದಿದ್ದರೆ ರುಬ್ಬಿರುವ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ, ಜಾಸ್ತಿ ನೀರು ಹಾಕಬೇಡಿ. ಸಾಂಬಾರ್ ಕೊಂಚ ದಪ್ಪವಾಗಿದ್ದರೆ ಚೆನ್ನಾಗಿರುತ್ತದೆ. ತುಂಬಾ ತೆಳುವಾಗಿರಬಾರದು. ಇದನ್ನು ಕುದಿಯಲು ಬಿಡಿ. ಸಾಂಬಾರ್ ಚೆನ್ನಾಗಿ ಕುದಿದ ನಂತರ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿ ಸ್ಟವ್ ಆಫ್ ಮಾಡಿ. ಈಗ ರುಚಿಕರವಾದ ಕೋಳಿಮುಂಚಿ ಸಾಂಬಾರ್ ಸಿದ್ಧವಾಗಿದೆ.

ಈ ಚಿಕನ್ ಸಾಂಬಾರ್ ಅನ್ನು ಅನ್ನ, ಚಪಾತಿ, ರೊಟ್ಟಿ, ದೋಸೆ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಮಂಗಳೂರು ಸ್ಪೆಷಲ್ ಕೋಳಿರೊಟ್ಟೆಯೊಂದಿಗೆ ಈ ಸಾಂಬಾರ್ ಸವಿಯಲು ಸಖತ್ ಆಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner