ಮಂಗಳೂರು ಶೈಲಿಯಲ್ಲಿ ಈ ರೀತಿ ಮಾಡಿ ಸಂಜೀರ; ಸಂಜೆಯ ಚಹಾಗೆ ಬೆಸ್ಟ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಂಗಳೂರು ಶೈಲಿಯಲ್ಲಿ ಈ ರೀತಿ ಮಾಡಿ ಸಂಜೀರ; ಸಂಜೆಯ ಚಹಾಗೆ ಬೆಸ್ಟ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ

ಮಂಗಳೂರು ಶೈಲಿಯಲ್ಲಿ ಈ ರೀತಿ ಮಾಡಿ ಸಂಜೀರ; ಸಂಜೆಯ ಚಹಾಗೆ ಬೆಸ್ಟ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ

ಮಂಗಳೂರಿನ ಸಾಂಪ್ರದಾಯಿಕ ತಿಂಡಿಗಳಲ್ಲಿ ಸಂಜೀರವೂ ಒಂದು. ಪೂರಿಯಂತಿರುವ ಈ ತಿಂಡಿ ಗರಿಗರಿಯಾದ ವಿನ್ಯಾಸ ಹಾಗೂ ಸಿಹಿ ರುಚಿಯನ್ನು ಹೊಂದಿರುತ್ತದೆ. ಪೂರಿಯನ್ನು ಕರಿಯುವಂತೆ ಇದನ್ನು ಕೂಡ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಮಂಗಳೂರು ಶೈಲಿಯ ಸಂಜೀರ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳೂರು ಶೈಲಿಯಲ್ಲಿ ಈ ರೀತಿ ತಯಾರಿಸಿ ಸಂಜೀರ
ಮಂಗಳೂರು ಶೈಲಿಯಲ್ಲಿ ಈ ರೀತಿ ತಯಾರಿಸಿ ಸಂಜೀರ (Slurrp )

ಸಂಜೀರ ತಿಂಡಿಯ ಬಗ್ಗೆ ಕೇಳಿದ್ದೀರಾ. ನೋಡಲು ಪೂರಿಯಂತಿರುವ ಸಂಜೀರವು ಸಿಹಿ ರುಚಿಗೆ ಹೆಸರುವಾಸಿಯಾದ ಮಂಗಳೂರಿನ ಸಾಂಪ್ರದಾಯಿಕ ತಿಂಡಿ. ಈ ತಿಂಡಿಯನ್ನು ಸಾಮಾನ್ಯವಾಗಿ ಸಂಜೆಯ ಚಹಾಗೆ ತಯಾರಿಸಲಾಗುತ್ತದೆ. ಈ ರುಚಿಕರವಾದ ತಿಂಡಿಯನ್ನು ಮೈದಾ ಹಿಟ್ಟು, ರವೆ, ಸಕ್ಕರೆ ಮತ್ತು ಏಲಕ್ಕಿಯಂತಹ ಸರಳ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೂರಿಯನ್ನು ಕರಿಯುವಂತೆ ಇದನ್ನು ಕೂಡ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಸ್ವಲ್ಪ ಸಿಹಿ ಹಾಗೂ ಗರಿಗರಿಯಾದ ಸಂಜೀರಾ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಹಾಗಿದ್ದರೆ ರುಚಿಕರ ಹಾಗೂ ಗರಿಗರಿಯಾದ ಮಂಗಳೂರು ಶೈಲಿಯ ಸಂಜೀರ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಂಗಳೂರು ಶೈಲಿಯ ಸಂಜೀರ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೈದಾ- 2 ಕಪ್, ರವೆ- ಮುಕ್ಕಾಲು ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಉಪ್ಪು, ಅರಶಿನ- ಚಿಟಿಕೆ, ಏಲಕ್ಕಿ ಪುಡಿ- ಅರ್ಧ ಚಮಚ, ತೆಂಗಿನತುರಿ- ಅರ್ಧ ಕಪ್, ಸಕ್ಕರೆ- 1 ಕಪ್, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು ಹಾಕಿ. ಇದಕ್ಕೆ ಕಾಲು ಕಪ್ ರವೆ, ಬಣ್ಣಕ್ಕೆ ಅರಶಿನ, ಸ್ವಲ್ಪ ಉಪ್ಪು, ನೀರು ಹಾಕಿ ಕಲಸಿ. ಚಪಾತಿ ಹಿಟ್ಟು ಕಲಸುವಂತೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಿ. ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ದಪ್ಪವಿರಲಿ. ಹಿಟ್ಟನ್ನು ಚೆನ್ನಾಗಿ ಕಲಸಿದ ನಂತರ ಅದರ ಮೇಲೆ ಒಂದು ಚಮಚದಷ್ಟು ಎಣ್ಣೆ ಹಾಕಿ ಮುಚ್ಚಳವನ್ನು ಮುಚ್ಚಿ.

ತೆಂಗಿನಕಾಯಿಯನ್ನು ತುರಿದು ಅದನ್ನು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಒಂದು ಬಾಣಲೆಯಿಟ್ಟು ಅದಕ್ಕೆ ಅರ್ಧ ಕಪ್ ರವೆ ಹಾಕಿ ಹುರಿಯಿರಿ. ರವೆ ಪರಿಮಳ ಬರುವವರೆಗೆ ಹುರಿಯಿರಿ. ಅದು ಸುಟ್ಟು ಹೋಗದಂತೆ ಎಚ್ಚರವಹಿಸಿ. ಇದಕ್ಕೆ ಅರ್ಧ ಕಪ್ ಪುಡಿ ಮಾಡಿದ ತೆಂಗಿನತುರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. 2 ರಿಂದ ಮೂರು ನಿಮಿಷ ಚಮಚದಲ್ಲಿ ಕಲಸುತ್ತಿರಿ. ಬಳಿಕ ಈ ಮಿಶ್ರಣಕ್ಕೆ ಏಲಕ್ಕಿ ಪುಡಿ ಹಾಗೂ ಸಕ್ಕರೆ ಹಾಕಿ ಮಿಶ್ರಣ ಮಾಡಿ. ಕೂಡಲೇ ಒಲೆ ಆಫ್ ಮಾಡಿದರೆ ಹೂರಣ ಸಿದ್ಧವಾಗುತ್ತದೆ.

ನಂತರ ಚಪಾತಿ ಹಿಟ್ಟಿನಂತೆ ಕಲಸಿರುವ ಮಿಶ್ರಣದಿಂದ ಎಲ್ಲವನ್ನು ಚಪಾತಿ ಉಂಡೆಗಿಂತ ಸ್ವಲ್ಪ ದೊಡ್ಡದಾಗಿ ಒಂದೊಂದೇ ಉಂಡೆ ಮಾಡಿ. ನಂತರ ಇದನ್ನು ಪೂರಿ ಲಟ್ಟಿಸಿದಂತೆ ಲಟ್ಟಣಿಗೆಯಲ್ಲಿ ಮೈದಾ ಪುಡಿ ಹಾಕಿ ಲಟ್ಟಿಸಿ. ಬಳಿಕ ಇದರ ಮಧ್ಯಕ್ಕೆ ತಯಾರಿಸಿಟ್ಟಿರುವ ಹೂರಣದ ಮಿಶ್ರಣವನ್ನು ಹಾಕಿ. ಸುಮಾರು ಒಂದು ಚಮಚದಷ್ಟು ಹಾಕಿದರೆ ಸಾಕು. ಅದನ್ನು ಮಡಚಿ ಉಂಡೆಯ ರೀತಿ ಮಾಡಿ ನಂತರ ಮತ್ತೆ ನಿಧಾನಕ್ಕೆ ಲಟ್ಟಿಸಿ. ಈ ರೀತಿ ಎಲ್ಲವನ್ನೂ ಸಿದ್ಧ ಮಾಡಿಕೊಳ್ಳಿ.

ಇನ್ನು ಒಲೆ ಮೇಲೆ ಬಾಣಲೆಯಿಟ್ಟು ಕರಿಯಲು ಎಣ್ಣೆ ಹಾಕಿ. ಎಣ್ಣೆ ಚೆನ್ನಾಗಿ ಕಾದ ನಂತರ ಲಟ್ಟಿಸಿಟ್ಟ ಒಂದೊಂದೇ ಸಂಜೀರವನ್ನು ಎಣ್ಣೆಯಲ್ಲಿ ಬಿಡಿ. ಎರಡೂ ಬದಿಗೂ ಚೆನ್ನಾಗಿ ಕರಿಯಿರಿ. ಮಧ್ಯಮ ಉರಿಯಲ್ಲಿ ಇದನ್ನು ಬೇಯಿಸಬೇಕು. ಸಂಜೀರ ಪೂರಿ ಉಬ್ಬಿ ಬರುವಂತೆ ಉಬ್ಬುತ್ತದೆ. ಇದನ್ನು ಟಿಶ್ಯೂ ಪೇಪರ್ ಹಾಕಿರುವ ತಟ್ಟೆಗೆ ಎತ್ತಿಡಿ. ಇಷ್ಟೇ ರುಚಿಕರವಾದ ಮಂಗಳೂರು ಶೈಲಿಯ ಗರಿಗರಿ ಸಂಜೀರ ತಿನ್ನಲು ಸಿದ್ಧ.

ನೋಡಲು ಪೂರಿಯಂತಿರುವ ಈ ತಿಂಡಿ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಸಿಹಿ ಪೂರಿ ಅಂತಲೂ ಕರೆಯಬಹುದು. ಆದರೆ, ಇದು ಮಂಗಳೂರಿನಲ್ಲಿ ಸಂಜೀರ ಅಂತಾಲೇ ಪ್ರಸಿದ್ಧಿ ಪಡೆದಿದೆ. ರವೆ ಹಾಕುವುದರಿಂದ ಇದು ಗರಿಗರಿಯಾಗಿ ಬರುತ್ತದೆ. ಸಂಜೆ ಚಹಾ ಜೊತೆ ಸಂಜೀರ ತಿನ್ನುವ ಮಜಾವೇ ಬೇರೆ. ಇಲ್ಲಿ ತಿಳಿಸಿರುವ ಪಾಕವಿಧಾನದಂತೆ ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ನಿಮಗೆ ಇಷ್ಟವಾಗಬಹುದು. ಸಿಹಿ ರುಚಿಯನ್ನು ಹೊಂದಿರುವ ಈ ತಿಂಡಿಯನ್ನು ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿಂತಾರೆ.

Whats_app_banner