ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದೆಯಾ: ಬೆಳಗಿನ ಉಪಾಹಾರಕ್ಕೆ ಮಾಡಿ ತರಕಾರಿ ಮಿಶ್ರಿತ ಇಡ್ಲಿ, ಇದನ್ನು ಮಾಡುವುದು ತುಂಬಾನೇ ಸುಲಭ
ಬೆಳಗಿನ ಉಪಾಹಾರವಾಗಿ ಇಡ್ಲಿಯನ್ನು ತಿನ್ನುವುದು ತುಂಬಾ ಆರೋಗ್ಯಕರ ಎಂದು ಹೇಳಲಾಗುತ್ತದೆ. ಅಲ್ಲದೆ ದಿನ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ವಿಭಿನ್ನವಾಗಿ ತರಕಾರಿ ಮಿಶ್ರಿತ ಇಡ್ಲಿಯನ್ನು ಪ್ರಯತ್ನಿಸಬಹುದು. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
![ಬೆಳಗಿನ ಉಪಾಹಾರಕ್ಕೆ ಮಾಡಿ ತರಕಾರಿ ಮಿಶ್ರಿತ ಇಡ್ಲಿ, ಇದನ್ನು ಮಾಡುವುದು ತುಂಬಾನೇ ಸುಲಭ ಬೆಳಗಿನ ಉಪಾಹಾರಕ್ಕೆ ಮಾಡಿ ತರಕಾರಿ ಮಿಶ್ರಿತ ಇಡ್ಲಿ, ಇದನ್ನು ಮಾಡುವುದು ತುಂಬಾನೇ ಸುಲಭ](https://images.hindustantimes.com/kannada/img/2024/12/25/550x309/mixed_idli_1735093124402_1735093130786.png)
ಬೆಳಗಿನ ಉಪಾಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಿದರೆ, ದಿನವಿಡೀ ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬೆಳಗಿನ ಉಪಾಹಾರದ ವಿಷಯಕ್ಕೆ ಬಂದಾಗ ಹೆಚ್ಚಿನ ಜನರು ಇಡ್ಲಿಯನ್ನು ಇಷ್ಟಪಡುತ್ತಾರೆ. ಇಡ್ಲಿ ಇಷ್ಟಪಡದ ದಕ್ಷಿಣ ಭಾರತೀಯ ಜನರು ಇರಲಿಕ್ಕಿಲ್ಲ. ಇಡ್ಲಿ ತಿನ್ನುವುದು ಆರೋಗ್ಯಕ್ಕೆ ಸಹ ಒಳ್ಳೆಯದು. ಇಡ್ಲಿ ತಿನ್ನುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಅದಕ್ಕಾಗಿಯೇ ಇಡ್ಲಿಯನ್ನು ಆರೋಗ್ಯಕರ ಆಹಾರ ಎಂದು ಹೇಳಲಾಗುತ್ತದೆ. ಆದರೆ, ಪ್ರತಿದಿನ ಒಂದೇ ತರಹದ ಇಡ್ಲಿಯನ್ನು ಸೇವಿಸಿದರೆ, ನಿಮಗೆ ಅದು ಇಷ್ಟವಾಗದಿರಬಹುದು. ಹೀಗಾಗಿ ಇದರಲ್ಲಿ ವಿಭಿನ್ನತೆಯನ್ನು ಪ್ರಯತ್ನಿಸಬೇಕು. ಈ ರೀತಿ ತರಕಾರಿ ಮಿಶ್ರಿತ ಅಥವಾ ಮಿಕ್ಸ್‌ಡ್ ಇಡ್ಲಿ ರೆಸಿಪಿಯನ್ನು ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟವಾಗಬಹುದು. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
ತರಕಾರಿ ಮಿಶ್ರಿತ ಇಡ್ಲಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಇಡ್ಲಿ ರವೆ- 1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಪಿಂಚ್, ಕೊತ್ತಂಬರಿ ಸೊಪ್ಪು- 1 ಟೀ ಚಮಚ, ಅರಿಶಿನ- ಚಿಟಿಕೆ, ಕ್ಯಾರೆಟ್, ಕ್ಯಾಪ್ಸಿಕಂ ಹಾಗೂ ಬೀನ್ಸ್- ಸ್ವಲ್ಪ, ಹುಳಿ ಮೊಸರು- 1 ಟೀ ಚಮಚ, ಶುಂಠಿ ಪೇಸ್ಟ್- 1 ಟೀ ಚಮಚ, ಕರಿಬೇವು- 1 ಹಿಡಿ, ಇಂಗು- ಚಿಟಿಕೆ, ಉದ್ದಿನಬೇಳೆ- 1 ಟೀ ಚಮಚ, ಕಡಲೆಬೇಳೆ- 1 ಟೀ ಚಮಚ, ಎಣ್ಣೆ- ಬೇಕಾಗುವಷ್ಟು, ಮೊಸರು- ಅರ್ಧ ಕಪ್, ಜೀರಿಗೆ- ಅರ್ಧ ಟೀ ಚಮಚ, ಹಸಿಮೆಣಸಿನಕಾಯಿ- 3.
ಮಾಡುವ ವಿಧಾನ: ತರಕಾರಿ ಮಿಶ್ರಿತ ಇಡ್ಲಿಯ ವಿಶೇಷತೆಯೆಂದರೆ ಬೇಳೆಕಾಳುಗಳು ಅಥವಾ ಹಿಟ್ಟನ್ನು ಮುಂಚಿತವಾಗಿ ನೆನೆಸುವ ಅಗತ್ಯವಿಲ್ಲ.
- ಮೊದಲಿಗೆ ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ.
- ಇದರಲ್ಲಿ ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವಿನ ಎಲೆಗಳು ಮತ್ತು ಇಂಗು ಸೇರಿಸಿ.
- ನಂತರ ಹಸಿಮೆಣಸು ಮತ್ತು ಶುಂಠಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
- ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಬೀನ್ಸ್ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
- ಅವು ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ. ನಂತರ ಉಪ್ಪು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಇಡ್ಲಿ ರವೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಇದು ಉತ್ತಮ ವಾಸನೆ ಬರುವವರೆಗೆ ಹುರಿಯಿರಿ, ನಂತರ ಸ್ಟೌವ್ ಆಫ್ ಮಾಡಿ.
- ಮಿಶ್ರಣವನ್ನು ತಣ್ಣಗಾಗಿಸಿ. ಅದು ತಣ್ಣಗಾದ ನಂತರ, ಮೊಸರು ಸೇರಿಸಿ ಇಡ್ಲಿ ಹಿಟ್ಟಿನಂತೆ ಮಿಶ್ರಣ ಮಾಡಿ.
- ಇದಕ್ಕೆ ಸಾಕಷ್ಟು ನೀರು ಸೇರಿಸಿದರೆ, ಅದು ಚೆನ್ನಾಗಿ ಮಿಶ್ರಣವಾಗುತ್ತದೆ. ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣಗೊಳಿಸಿ. 20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
- ಈಗ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ, ಈ ಹಿಟ್ಟನ್ನು ಅದಕ್ಕೆ ಹಾಕಿ.
- ಇಡ್ಲಿಯನ್ನು ಬೇಯಿಸಿ. ಕಾಲು ಗಂಟೆಯ ನಂತರ, ರುಚಿಕರವಾದ ತರಕಾರಿ ಮಿಶ್ರಿತ ಇಡ್ಲಿ ಸವಿಯಲು ಸಿದ್ಧ.
- ಇದನ್ನು ಬಿಸಿ ಬಿಸಿಯಾಗಿ ಸೇವಿಸಿದರೆ, ನಿಮಗೆ ಉತ್ತಮ ರುಚಿ ಸಿಗುತ್ತದೆ. ಇಡ್ಲಿಯೊಂದಿಗೆ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿ ಸವಿಯಬಹುದು.
- ಖಂಡಿತವಾಗಿಯೂ ಇದನ್ನು ಇಷ್ಟಪಡುತ್ತೀರಿ. ಟೊಮೆಟೊ ಚಟ್ನಿ ಇನ್ನೂ ಉತ್ತಮ ರುಚಿಯನ್ನು ಹೊಂದಿರುತ್ತದೆ.
ಸಾಮಾನ್ಯ ಇಡ್ಲಿಗಳಿಗೆ ಹೋಲಿಸಿದರೆ ಇದು ಸಾಕಷ್ಟು ತರಕಾರಿಗಳನ್ನು ಹೊಂದಿರುತ್ತದೆ. ಹೀಗಾಗಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತರಕಾರಿ ಮಿಶ್ರಿತ ಇಡ್ಲಿ ಸಾಮಾನ್ಯ ಇಡ್ಲಿಗಳಿಗಿಂತಲೂ ರುಚಿಕರವಾಗಿರುತ್ತದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ನಿಮಗೂ ಇಷ್ಟವಾಗಬಹುದು. ಬೆಳಗಿನ ಉಪಾಹಾರಕ್ಕೆ ದಿನಾ ಒಂದೇ ತರಹದ ತಿಂಡಿ ಮಾಡಿ ಬೇಸರವಾಗಿದ್ದರೆ ಇದನ್ನು ಪ್ರಯತ್ನಿಸಬಹುದು.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ