ಮಂಗಳೂರು ಶೈಲಿಯಲ್ಲಿ ಈ ರೀತಿ ಸೀಗಡಿ ಘೀ ರೋಸ್ಟ್ ಮಾಡಿ ಸವಿಯಿರಿ: ಮನೆಮಂದಿಯೆಲ್ಲ ಬಾಯಿಚಪ್ಪರಿಸಿಕೊಂಡು ತಿಂತಾರೆ
ನೀವು ಮೀನಿನ ಖಾದ್ಯಗಳ ಪ್ರಿಯರಾಗಿದ್ದರೆ, ಸೀಗಡಿ ಘೀ ರೋಸ್ಟ್ ರೆಸಿಪಿಯನ್ನು ಸವಿಯಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕರ್ನಾಟಕದ ಮಂಗಳೂರು ಭಾಗದಲ್ಲಿ ಹುಟ್ಟಿಕೊಂಡ ಈ ರೆಸಿಪಿಯು ಬಹಳ ಜನಪ್ರಿಯತೆ ಪಡೆದಿದೆ. ಇದನ್ನು ಅನ್ನ, ಚಪಾತಿ, ರೊಟ್ಟಿಯೊಂದಿಗೆ ಮಾತ್ರವಲ್ಲ ಸೈಡ್ ಡಿಶ್ ಆಗಿಯೂ ಸವಿಯಬಹುದು. ಇಲ್ಲಿದೆ ರೆಸಿಪಿ.
ಭಾನುವಾರ ಬಾಡೂಟ ತಿನ್ನದಿದ್ದರೆ ನಾನ್ ವೆಜ್ ಪ್ರಿಯರಿಗೆ ಸಮಾಧಾನವೇ ಆಗುವುದಿಲ್ಲ. ಇಂದು ಚಿಕನ್ ಅಥವಾ ಮಟನ್ ಖಾದ್ಯಗಳನ್ನು ಸವಿಯಲು ಮುಂದಾಗುತ್ತಾರೆ. ಹಾಗೆಯೇ ಮೀನಿನಿಂದಲೂ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ನೀವು ಮೀನಿನ ಖಾದ್ಯಗಳ ಪ್ರಿಯರಾಗಿದ್ದರೆ, ಸೀಗಡಿ ಘೀ ರೋಸ್ಟ್ ರೆಸಿಪಿಯನ್ನು ಸವಿಯಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕರ್ನಾಟಕದ ಮಂಗಳೂರು ಭಾಗದಲ್ಲಿ ಹುಟ್ಟಿಕೊಂಡ ಈ ರೆಸಿಪಿಯು ಬಹಳ ಜನಪ್ರಿಯತೆ ಪಡೆದಿದೆ. ಇದನ್ನು ಅನ್ನ, ಚಪಾತಿ, ರೊಟ್ಟಿಯೊಂದಿಗೆ ಮಾತ್ರವಲ್ಲ ಸೈಡ್ ಡಿಶ್ ಆಗಿಯೂ ಸವಿಯಬಹುದು. ಬಹಳ ಸರಳವಾಗಿ, ಬೇಗನೆ ತಯಾರಾಗುವ ಈ ರೆಸಿಪಿಯನ್ನು ಮಾಡುವುದು ಮಾತ್ರ ತುಂಬ ಸಿಂಪಲ್. ಹಾಗಿದ್ದರೆ ಪ್ರಾನ್ಸ್ (ಸೀಗಡಿ) ಘೀ ರೋಸ್ಟ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸೀಗಡಿ ಘೀ ರೋಸ್ಟ್ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಸೀಗಡಿ- 1 ಕೆಜಿ, ತುಪ್ಪ- 6 ಟೀ ಚಮಚ, ಬೆಳ್ಳುಳ್ಳಿ (ಕೊಚ್ಚಿದ) – 4 ರಿಂದ 5, ಶುಂಠಿ (ಕೊಚ್ಚಿದ)- 1 ಇಂಚಿನಷ್ಟು, ಕರಿಬೇವಿನ ಎಲೆಗಳು- 8 ರಿಂದ 10, ಅರಿಶಿನ- 1/4 ಟೀ ಚಮಚ, ಮೆಣಸಿನಪುಡಿ- 1/2 ಟೀ ಚಮಚ.
ಮಸಾಲೆ ಮಿಶ್ರಣಕ್ಕೆ ಬೇಕಾಗಿರುವ ಪದಾರ್ಥಗಳು: ಒಣ ಕೆಂಪು ಮೆಣಸಿನಕಾಯಿ- 10, ಕೊತ್ತಂಬರಿ ಬೀಜಗಳು- 2 ಚಮಚ, ಜೀರಿಗೆ- 2 ಟೀ ಚಮಚ, ಸೋಂಪು- 1/2 ಟೀ ಚಮಚ, ಕಾಳುಮೆಣಸು- 1/2 ಟೀ ಚಮಚ, ಅರಿಶಿನ ಪುಡಿ- 1/2 ಟೀ ಚಮಚ, ಗರಂ ಮಸಾಲೆ- 1/2 ಟೀ ಚಮಚ, ಮೆಂತ್ಯ ಕಾಳು- 6 ರಿಂದ 8, ಉಪ್ಪು- ರುಚಿಗೆ ತಕ್ಕಷ್ಟು, ಹುಣಸೆಹಣ್ಣಿನ ಪೇಸ್ಟ್- 2 ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಒಣ ಕೆಂಪು ಮೆಣಸಿನಕಾಯಿಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ (20 ನಿಮಿಷ).
- ಸೀಗಡಿಯನ್ನು ಮ್ಯಾರಿನೇಟ್ ಮಾಡುವ ಮುನ್ನ ಅವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಸ್ವಲ್ಪ ಉಪ್ಪು, ಅರಿಶಿನ, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ 20 ರಿಂದ 30 ನಿಮಿಷಗಳ ಕಾಲ ಮುಚ್ಚಿಡಿ.
- ಬಾಣಲೆಯಲ್ಲಿ ಕೊತ್ತಂಬರಿ ಬೀಜಗಳು, ಜೀರಿಗೆ, ಸೋಂಪು, ಕಾಳುಮೆಣಸು ಮತ್ತು ಮೆಂತ್ಯ ಕಾಳನ್ನು ಪರಿಮಳ ಬರುವವರೆಗೆ ಒಂದೆರಡು ನಿಮಿಷಗಳ ಕಾಲ ಹುರಿಯಿರಿ.
- ಮಸಾಲೆಗಳನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಮಸಾಲೆಗಳು ಹಾಗೂ ನೀರಿನಲ್ಲಿ ನೆನೆಸಿಟ್ಟ ಒಣಮೆಣಸು, ಹುಣಸೆಹಣ್ಣನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
- ನಂತರ ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ. ಮಧ್ಯಮ ಉರಿಯಲ್ಲಿರಲಿ.
- ತುಪ್ಪ ಬಿಸಿಯಾದಾಗ ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿ. ನಂತರ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ. ಪರಿಮಳ ಬರುವವರೆಗೆ 1 ರಿಂದ 2 ನಿಮಿಷ ಬೇಯಿಸಿ.
- ನಂತರ ಮ್ಯಾರಿನೇಟ್ ಮಾಡಿರುವ ಸೀಗಡಿಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಅವುಗಳನ್ನು ಬೇಯಲು ಬಿಡಿ. ಸೀಗಡಿ ಸಂಪೂರ್ಣವಾಗಿ ಬೇಯಲು ಬಿಡಬೇಕು. 5 ರಿಂದ 7 ನಿಮಿಷಗಳ ಕಾಲ ಬೇಯಿಸಿ.
- ನಂತರ ರುಬ್ಬಿರುವ ಮಸಾಲೆ ಮಿಶ್ರಣಗಳನ್ನು ಸೇರಿಸಿ, ಮತ್ತಷ್ಟು ತುಪ್ಪ ಸೇರಿಸಿ ಮಿಶ್ರಣ ಮಾಡಿ. ಮಸಾಲೆಯು ತುಪ್ಪದಿಂದ ಬೇರ್ಪಡುವವರೆಗೆ ಬೇಯಿಸಬೇಕು. ಇದು 10 ರಿಂದ 15 ನಿಮಿಷ ಬೇಕಾಗುತ್ತದೆ. ಮಧ್ಯಮ ಉರಿಯಲ್ಲಿ ಈ ರೀತಿ ಮಾಡಿ.
- ಮಸಾಲೆಯಿಂದ ತುಪ್ಪ ಬೇರ್ಪಟ್ಟರೆ ರುಚಿಕರವಾದ ಸೀಗಡಿ ಖಾದ್ಯ ಸವಿಯಲು ಸಿದ್ಧ. ನೀವು ಬಯಸಿದಲ್ಲಿ ತಾಜಾ ಕರಿಬೇವಿನ ಎಲೆಗಳು ಅಥವಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.
ಈ ಸೀಗಡಿ ಖಾದ್ಯವನ್ನು ಅನ್ನ, ರೊಟ್ಟಿ, ಚಪಾತಿ ಅಥವಾ ಸೈಡ್ ಡಿಶ್ ಆಗಿ ಬಡಿಸಬಹುದು. ಈ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ, ಖಂಡಿತ ಮನೆಮಂದಿಯೆಲ್ಲ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ.