ಬೆಳಗ್ಗಿನ ಉಪಾಹಾರಕ್ಕೆ ದಿಢೀರನೆ ತಯಾರಿಸಿ ರವೆ ವಡೆ; ಕೇವಲ 10 ನಿಮಿಷದಲ್ಲಿ ಸಿದ್ಧವಾಗುವ ತಿಂಡಿಯಿದು
ಮಕ್ಕಳು ಹೊಸ ಬಗೆಯ ತಿಂಡಿ ಕೇಳುತ್ತಿದ್ದರೆ ಈ ರೆಸಿಪಿ ಟ್ರೈ ಮಾಡಿ. ಮುಂಚಿತವಾಗಿ ನೆನೆಸದೆ ದಿಢೀರನೇ ತಯಾರಿಸಬಹದಾದ ಉಪಾಹಾರ ತಿಂಡಿಯಿದು. ಕೇವಲ 10 ನಿಮಿಷದಲ್ಲಿ ಸಿದ್ಧವಾಗುವ ರವೆ ವಡೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಕೇಳುವುದು ಏನು ತಿಂಡಿ ಮಾಡಿದ್ದೀರಿ ಎಂದು. ದಿನದಿನವೂ ಹೊಸತರ ಉಪಾಹಾರ ಮಾಡುವಂತೆ ಮಕ್ಕಳು ಬಯಸುತ್ತಾರೆ. ಪ್ರತಿದಿನ ಒಂದೇ ರೀತಿಯ ತಿಂಡಿ ಮಾಡಿದರೆ ಅವರು ತಿನ್ನುವುದೇ ಇಲ್ಲ. ಹೀಗಾಗಿ ಮಕ್ಕಳಿಗೆ ಆರೋಗ್ಯಕರ ಹಾಗೂ ರುಚಿಕರ ತಿಂಡಿ ತಯಾರಿಸುವುದು ಅಮ್ಮಂದಿರಿಗೆ ಒಂದು ಸವಾಲು. ಹೀಗಾಗಿ ದಿಢೀರನೆ ತಯಾರಿಸಬಹುದಾದ ರವೆ ವಡೆಯನ್ನು ಪ್ರಯತ್ನಿಸಬಹುದು. ಮಕ್ಕಳು ಮಾತ್ರವಲ್ಲ ವಯಸ್ಕರೂ ಕೂಡ ಇದನ್ನು ಇಷ್ಟಪಟ್ಟು ತಿಂತಾರೆ. ರುಚಿ ಕೂಡ ಅದ್ಭುತವಾಗಿರುತ್ತದೆ. ದಿಢೀರನೆ ರವೆ ವಡೆ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ದಿಢೀರನೆ ರವೆ ವಡೆ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ರವೆ - 1 ಕಪ್, ನೀರು - 2 ಕಪ್, ಶುಂಠಿ - ಸಣ್ಣ ತುಂಡು, ಹಸಿ ಮೆಣಸಿನಕಾಯಿ - ಎರಡು ಅಥವಾ ಮೂರು, ಕಾಳುಮೆಣಸು - 1 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು ಬೇಕಾದಷ್ಟು.
ಮಾಡುವ ವಿಧಾನ: ರವೆ ವಡೆ ಮಾಡುವ ಮೊದಲು, ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಒಲೆ ಮೇಲಿಡಿ. ಅದಕ್ಕೆ ನೀರು ಹಾಕಿ ಬಿಸಿ ಮಾಡಿ. ಈ ನೀರಿಗೆ ನುಣ್ಣಗೆ ಕತ್ತರಿಸಿದ ಶುಂಠಿ ತುಂಡು, ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸು, ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಅದಕ್ಕೆ ರವೆಯನ್ನು ಬೆರೆಸಿ. ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ರವೆ ಸ್ವಲ್ಪ ಮೃದುವಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ರವೆ ಕುದಿಯುವ ಹಂತಕ್ಕೆ ಬಂದಾಗ ಕೂಡಲೇ ಒಲೆಯನ್ನು ಆಫ್ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಈ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಸಣ್ಣ ಉಂಡೆಗಳಾಗಿ ತೆಗೆದುಕೊಂಡು ವಡೆಗಳನ್ನಾಗಿ ಮಾಡಿ ಪಕ್ಕಕ್ಕೆ ಇರಿಸಿ. ಈಗ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ, ಮಾಡಿಟ್ಟಿರುವ ವಡೆಯನ್ನು ಬಿಸಿ ಎಣ್ಣೆಗೆ ಹಾಕಿ ಎರಡೂ ಬದಿ ಚೆನ್ನಾಗಿ ಕರಿಯಿರಿ. ವಡೆ ಬಣ್ಣ ಬದಲಾಯಿಸಿದ ನಂತರ ಇದನ್ನು ಟಿಶ್ಯೂ ಪೇಪರ್ ಹಾಕಿರುವ ತಟ್ಟೆಗೆ ಹಾಕಿ.
ಈ ವಡೆ ಬಹಳ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ ನಿಮಗೂ ಇಷ್ಟವಾಗಬಹುದು. ಈ ಪಾಕವಿಧಾನ ಕೂಡ ಬಹಳ ಸರಳ. ಇದನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಚಟ್ನಿ, ಶುಂಠಿ ಚಟ್ನಿ ಇತ್ಯಾದಿ ನಿಮಗಿಷ್ಟವಾದ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಬಹುದು. ಮೊಸರಿನ ಜೊತೆ ತಿನ್ನಲು ಕೂಡ ಬಹಳ ರುಚಿಕರವಾಗಿರುತ್ತದೆ. ಬೆಳಗ್ಗೆ ಉಪಾಹಾರವಾಗಿ ಮತ್ತು ಸಂಜೆ ತಿಂಡಿಯಾಗಿಯೂ ತಿನ್ನಬಹುದು. ಕೇವಲ 10 ನಿಮಿಷದಲ್ಲಿ ಸಿದ್ಧವಾಗುವ ತಿಂಡಿಯಿದು. ಮನೆಯಲ್ಲಿ ಎಲ್ಲರೂ ಇಷ್ಟಪಟ್ಟು ತಿಂತಾರೆ. ಯಾಕೆಂದರೆ ಅಷ್ಟು ರುಚಿಕರವಾಗಿರುತ್ತದೆ.
ವಿಭಾಗ