ಬಟರ್ ನಾನ್ ರೋಟಿ ತಿನ್ನುವುದು ಇಷ್ಟ, ಮಾಡುವುದು ಕಷ್ಟ ಎನ್ನುವಿರಾ; ರೆಸ್ಟೋರೆಂಟ್ ಶೈಲಿಯ ರೆಸಿಪಿ ಮನೆಯಲ್ಲೇ ಹೀಗೆ ತಯಾರಿಸಿ
ರೆಸ್ಟೋರೆಂಟ್‍ಗೆ ಹೋದಾಗ ಬಹಳ ಮಂದಿ ಬಟರ್ ನಾನ್ ರೋಟಿ ತಿನ್ನುವುದೇ ಹೆಚ್ಚು. ಮನೆಯಲ್ಲೇ ಮಾಡುವುದು ಕಷ್ಟ ಎಂದು ರೆಸ್ಟೋರೆಂಟ್‍ಗಳಿಗೆ ಹೋದಾಗ ಇದನ್ನೇ ಹೆಚ್ಚಾಗಿ ತಿನ್ನುತ್ತಾರೆ. ಅದರಲ್ಲೂ ಬಟರ್ ನಾನ್ ರೋಟಿ ಜತೆ ಚಿಕನ್ ಕರಿ ಅಥವಾ ಪನೀರ್ ಗ್ರೇವಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ರೆಸ್ಟೋರೆಂಟ್‍ಗೆ ಹೋದಾಗ ಬಹಳ ಮಂದಿ ಬಟರ್ ನಾನ್ ರೋಟಿ ತಿನ್ನುವುದೇ ಹೆಚ್ಚು. ಅದರಲ್ಲೂ ಬಟರ್ ನಾನ್ ಜತೆ ಚಿಕನ್ ಕರಿ ಅಥವಾ ಪನೀರ್ ಗ್ರೇವಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮನೆಯಲ್ಲಿ ಇದನ್ನು ತಯಾರಿಸುವುದು ಸ್ವಲ್ಪ ಕಷ್ಟ ಎಂದು ಬಹುತೇಕರು ಹೋಟೆಲ್‍ಗಳಲ್ಲಿಯೇ ತಿನ್ನುವುದು ಹೆಚ್ಚು. ಮೈದಾದಿಂದ ಮಾಡಲಾಗುವುದರಿಂದ ಹೆಚ್ಚು ತಿನ್ನುವುದು ಅಷ್ಟು ಒಳ್ಳೆಯದಲ್ಲ. ಅಪರೂಪಕ್ಕೊಮ್ಮೆ ತಿನ್ನಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಬಟರ್ ನಾನ್ ರೋಟಿ ರೆಸಿಪಿ ಮಾಡುವ ವಿಧಾನ ಹೀಗೆ
ಬೇಕಾಗುವ ಸಾಮಗ್ರಿಗಳು: ಮೈದಾ- ಒಂದೂವರೆ ಕಪ್, ಮೊಸರು- ಕಾಲು ಕಪ್, ಅಡುಗೆ ಸೋಡಾ- ಅರ್ಧ ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ- ಅರ್ಧ ಟೀ ಚಮಚ, ನೀರು- ಅಗತ್ಯಕ್ಕೆ ತಕ್ಕಂತೆ, ಬೆಣ್ಣೆ - ಕಾಲು ಕಪ್, ಎಳ್ಳು- 3 ಟೀ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.
ಮಾಡುವ ವಿಧಾನ: ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು, ಬೇಕಿಂಗ್ ಸೋಡಾ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅಗತ್ಯವಿದ್ದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು ಚೆನ್ನಾಗಿ 5 ನಿಮಿಷಗಳ ಕಾಲ ಕಲಸಬೇಕು. ನಂತರ ಇದನ್ನು ಒಂದು ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಬೇಕು.
- ಎರಡು ಗಂಟೆಯ ನಂತರ ಮತ್ತೆ ಚೆನ್ನಾಗಿ ಕೈಯಿಂದಲೇ ಕಲಸಬೇಕು. ನಂತರ ಒಂದು ಸ್ವಲ್ಪ ದೊಡ್ಡ ಉಂಡೆಯನ್ನು ತೆಗೆದುಕೊಂಡು ಸ್ವಲ್ಪ ಮೈದಾ ಪುಡಿ ಹಾಕಿ ಚಪಾತಿ ಲಟ್ಟಣಿಗೆಯಲ್ಲಿ ಲಟ್ಟಿಸಬೇಕು. ಮೊಟ್ಟೆ ಆಕಾರ ಅಥವಾ ತ್ರಿಭುಜಾಕಾರದಲ್ಲಿ ಲಟ್ಟಿಸಬಹುದು. ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಕಪ್ಪು ಎಳ್ಳು ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ನಿಧಾನವಾಗಿ ಲಟ್ಟಿಸಿ.
- ಹಿಟ್ಟಿನ ಹಿಂಬದಿಗೆ ನೀರು ಅದ್ದಿ. ನಂತರ ತವಾ ಬಿಸಿಯಾಗಲು ಇಡಿ. ತವಾ ಚೆನ್ನಾಗಿ ಬಿಸಿಯಾದಾಗ ತವಾಗೆ ಹಾಕಿ. ನೀರು ಇರುವ ಬದಿಯನ್ನು ಕೆಳಭಾಗಕ್ಕೆ ಹಾಕಬೇಕು. ಉರಿಯನ್ನು ಮಧ್ಯಮ ಪ್ರಮಾಣದಲ್ಲಿಟ್ಟು, ಗುಳ್ಳೆಗಳು ಏಳಲಾರಂಭಿಸಿದ ನಂತರ ತವಾವನ್ನು ಉಲ್ಟಾ ಹಾಕಿ ಬೇಯಿಸಬೇಕು. ನಾನ್‍ಗೆ ನೀರು ಹಾಕಿರುವುದರಿಂದ ಅದು ತವಾಗೆ ಅಂಟಿಕೊಂಡಿರುತ್ತದೆ. ಕೆಳಗೆ ಬೀಳುವುದಿಲ್ಲ,
- ಎರಡೂ ಬದಿಗಳಲ್ಲಿ ಚೆನ್ನಾಗಿ ಹುರಿದ ನಂತರ, ಅದನ್ನು ತೆಗೆದು ಪಕ್ಕಕ್ಕೆ ಇರಿಸಿ. ಈಗ ಈ ನಾನ್ ರೋಟಿ ಮೇಲೆ ಬೆಣ್ಣೆಯನ್ನು ಹಚ್ಚಿ. ಇಷ್ಟು ಮಾಡಿದರೆ ರುಚಿಕರವಾದ ಬಟರ್ ನಾನ್ ರೋಟಿ ಸವಿಯಲು ಸಿದ್ಧ. ಇದು ಚಿಕನ್ ಗ್ರೇವಿ ಅಥವಾ ಪನ್ನೀರ್ ಗ್ರೇವಿಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.
ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಹೆಚ್ಚಾಗಿ ತಿನ್ನುವುದು ಉತ್ತಮ ಅಭ್ಯಾಸವಲ್ಲ. ಗೋಧಿಯಿಂದ ಈ ರೀತಿ ಮಾಡಲು ಹೋದರೆ ಅದು ಚಪಾತಿಯಂತಾಗುತ್ತದೆ. ಹೀಗಾಗಿ ಮೈದಾದಿಂದಲೇ ನಾನ್ ರೋಟಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ನಾನ್ ರೋಟಿ ತಿನ್ನಲು ಬಯಸಿದರೆ ಮೈದಾ ಹಿಟ್ಟನ್ನೇ ಬಳಸಬೇಕು. ಮನೆಯಲ್ಲಿಯೇ ಈ ರೆಸಿಪಿ ಮಾಡಿ ತಿನ್ನಬೇಕು ಎಂದಾದರೆ ಹೀಗೆ ಸರಳವಾಗಿ ತಯಾರಿಸಬಹುದು.
ವಿಭಾಗ