ನೀವು ಚಿಕನ್ ಪ್ರಿಯರಾಗಿದ್ದರೆ ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಚಿಕನ್ ಪ್ರಿಯರಾಗಿದ್ದರೆ ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ; ಇಲ್ಲಿದೆ ರೆಸಿಪಿ

ನೀವು ಚಿಕನ್ ಪ್ರಿಯರಾಗಿದ್ದರೆ ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ; ಇಲ್ಲಿದೆ ರೆಸಿಪಿ

ನೀವು ಮಾಂಸಾಹಾರ ಪ್ರಿಯರಾಗಿದ್ದರೆ ವಾರಕ್ಕೊಮ್ಮೆಯಾದರೂ ಚಿಕನ್‌ನಿಂದ ಹೊಸ ಪಾಕವಿಧಾನವನ್ನು ಪ್ರಯತ್ನಿಸಿ. ಇಲ್ಲಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ಪಾಕವಿಧಾನ ನೀಡಲಾಗಿದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ರೆಸಿಪಿ
ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ರೆಸಿಪಿ (Pinterest )

ನೀವು ಮಾಂಸಾಹಾರ ಪ್ರಿಯರಾಗಿದ್ದರೆ ವಾರಕ್ಕೊಮ್ಮೆಯಾದರೂ ಚಿಕನ್‌ನಿಂದ ಹೊಸ ಪಾಕವಿಧಾನವನ್ನು ಪ್ರಯತ್ನಿಸಿ. ಇಲ್ಲಿ ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ಪಾಕವಿಧಾನ ನೀಡಲಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ ಖಂಡಿತ ಇಷ್ಟವಾಗುತ್ತದೆ. ಇದು ರೊಟ್ಟಿ, ಚಪಾತಿ, ಅನ್ನ, ನಾನ್ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ರೆಸ್ಟೋರೆಂಟ್ ಶೈಲಿಯ ಚಿಕನ್ ಅಂಗಾರ ಖಾದ್ಯ ರುಚಿಕರ ಮಾತ್ರವಲ್ಲ, ತಯಾರಿಸುವುದು ಕೂಡ ಸುಲಭ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕನ್ ಅಂಗಾರ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಕೋಳಿ ಮಾಂಸ- 1 ಕೆಜಿ, ಮೊಸರು- 1 ಕಪ್, ಈರುಳ್ಳಿ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಟೊಮೆಟೊ- 1 ಕಪ್, ಕಾಶ್ಮೀರಿ ಮೆಣಸಿನ ಪುಡಿ- 2 ಚಮಚ, ಅರಿಶಿನ- 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಗರಂ ಮಸಾಲೆ- ½ ಚಮಚ, ಕಸೂರಿ ಮೇಥಿ- 1 ಚಮಚ, ಕೊತ್ತಂಬರಿ ಬೀಜ- 2 ಚಮಚ, ಕಾಳುಮೆಣಸು- 1 ಚಮಚ, ಚೆಕ್ಕೆ- 1 ಸಣ್ಣ ತುಂಡು, ಜೀರಿಗೆ- 1 ಚಮಚ, ಒಣ ಮೆಣಸಿನಕಾಯಿ- 10, ತುಪ್ಪ- 3 ಚಮಚ, ಎಣ್ಣೆ- 3 ಚಮಚ, ಬಿರಿಯಾನಿ ಎಲೆ- 2, ಲವಂಗ- 3, ಏಲಕ್ಕಿ- 2, ಗೋಡಂಬಿ- 4.

ತಯಾರಿಸುವ ವಿಧಾನ: ಚಿಕನ್ ಅಂಗಾರ ಮಾಡಲು, ಮೊದಲಿಗೆ ಒಣ ಮೆಣಸಿನಕಾಯಿ, ಗೋಡಂಬಿ, ಕೊತ್ತಂಬರಿ ಬೀಜ, ಜೀರಿಗೆ, ಕಾಳುಮೆಣಸು, ಚೆಕ್ಕೆ ಇವೆಲ್ಲವನ್ನೂ ಹುರಿಯಬೇಕು. ನಂತರ ಇದನ್ನು ತಣ್ಣಗಾಗಿಸಿ ಪುಡಿ ಮಾಡಿಕೊಳ್ಳಿ. ಈಗ ಕೋಳಿ ಮಾಂಸವನ್ನು ಮ್ಯಾರಿನೇಟ್ ಮಾಡಿಕೊಳ್ಳಿ.

ಮ್ಯಾರಿನೇಟ್ ಮಾಡಲು ಕೋಳಿ ಮಾಂಸಕ್ಕೆ ಪುಡಿ ಮಾಡಿದ ಮಸಾಲೆ ಪುಡಿಯನ್ನು ಬೆರೆಸಿ. ನಂತರ ಇದಕ್ಕೆ ರುಬ್ಬಿರುವ ಟೊಮೆಟೋ ಪ್ಯೂರಿಯನ್ನು ಬೆರೆಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಮೊಸರು, ಕಸೂರಿ ಮೇಥಿ, ಕಾಶ್ಮೀರಿ ಮೆಣಸಿನ ಪುಡಿ, ಅರಿಶಿನ, ಉಪ್ಪು, ಸಣ್ಣಗೆ ಕತ್ತರಿಸಿ ಫ್ರೈ ಮಾಡಿರುವ ಈರುಳ್ಳಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದರ ಮೇಲೆ 3 ಚಮಚದಷ್ಟು ತುಪ್ಪ ಹಾಕಿ, 1 ಗಂಟೆ ಕಾಲ ಮ್ಯಾರಿನೇಟ್ ಮಾಡಲು ಇಡಿ.

ಈಗ ಮಧ್ಯಮ ಉರಿಯಲ್ಲಿ ದೊಡ್ಡ ಬಾಣಲೆಯಿಟ್ಟು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾದ ನಂತರ, ಬಿರಿಯಾನಿ ಎಲೆ, ಲವಂಗ, ಏಲಕ್ಕಿ ಹಾಕಿ 5 ಸೆಕೆಂಡುಗಳ ಕಾಲ ಹುರಿಯಿರಿ. ನಂತರ, ಮ್ಯಾರಿನೇಟ್ ಮಾಡಿದ ಮಸಾಲಾ ಮಿಶ್ರಣವಿರುವ ಕೋಳಿ ಮಾಂಸವನ್ನು ಬಾಣಲೆಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಉರಿಯನ್ನು ಕಡಿಮೆ ಮಾಡಿ, ಮುಚ್ಚಳವನ್ನು ಮುಚ್ಚಿ. ಚಿಕನ್ ಅನ್ನು ಅರ್ಧ ಗಂಟೆ ಕಾಲ ಬೇಯಿಸಿ. ನಂತರ ಪಿಂಗಣಿಯಲ್ಲಿ ಬಿಸಿ ಇದ್ದಿಲು ಹಾಕಿ ಚಿಕನ್ ಮೇಲಿಟ್ಟು ಮತ್ತೆ ಮುಚ್ಚಳವನ್ನು ಮುಚ್ಚಿ 5 ನಿಮಿಷ ಕಾಲ ಬೇಯಿಸಿದರೆ ರುಚಿಕರವಾದ ಚಿಕನ್ ಅಂಗಾರ ತಿನ್ನಲು ಸಿದ್ಧ. ರೆಸ್ಟೋರೆಂಟ್ ಶೈಲಿಯಲ್ಲೇ ತಿನ್ನಬೇಕು ಅಂತಿದ್ದರೆ ಇದ್ದಿಲನ್ನು ಇಡುವುದು ಸೂಕ್ತ.

Whats_app_banner