ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆ ತಯಾರಿಸುವುದು ತುಂಬಾ ಸಿಂಪಲ್; ಇಲ್ಲಿದೆ ಪಾಕವಿಧಾನ
ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆಯನ್ನು ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದು. ಈ ರೆಸಿಪಿ ತುಂಬಾ ಸುಲಭ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆಯನ್ನು ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದು. ನೀವು ಹೋಟೆಲ್‌ಗೆ ಹೋದಾಗ ಮಾತ್ರ ತಿನ್ನಬೇಕೆಂದಿಲ್ಲ. ಈ ರೆಸಿಪಿ ತುಂಬಾ ಸರಳ. ರೊಟ್ಟಿ, ಚಪಾತಿ, ನಾನ್ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗೆಯೇ ಅನ್ನದೊಂದಿಗೂ ತಿನ್ನಲು ಚೆನ್ನಾಗಿರುತ್ತದೆ. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆ.ಜಿ, ಮೊಸರು- ಅರ್ಧ ಕಪ್, ಗರಂ ಮಸಾಲೆ- 1 ಚಮಚ, ಮೆಣಸಿನ ಪುಡಿ- 2 ಚಮಚ, ಅರಶಿನ- 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ- 1 ಚಮಚ, ಹಸಿಮೆಣಸಿನಕಾಯಿ- 2, ಈರುಳ್ಳಿ- 2, ಟೊಮೆಟೊ- 2, ಒಣಮೆಣಸು- 6, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಕಾಳುಮೆಣಸು- ಅರ್ಧ ಚಮಚ, ಏಲಕ್ಕಿ- 3, ಲವಂಗ- 2, ಕಸೂರಿ ಮೇಥಿ- ಅರ್ಧ ಚಮಚ, ಸೋಂಪು ಕಾಳು- 1 ಚಮಚ, ಗಸಗಸೆ- ಅರ್ಧ ಚಮಚ, ಚೆಕ್ಕೆ- 1 ಸಣ್ಣ ಇಂಚು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಅದಕ್ಕೆ ಮೆಣಸಿನ ಪುಡಿ, ಗರಂ ಮಸಾಲೆ, ಅರಶಿನ ಪುಡಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ನಿಂಬೆ ರಸ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 2 ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.
ಈಗ ಒಲೆ ಮೇಲೆ ಬಾಣಲೆಯಿಟ್ಟು ಅದರಲ್ಲಿ ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಕಾಳುಮೆಣಸು ಹಾಕಿ ಹುರಿಯಿರಿ. ನಂತರ ಏಲಕ್ಕಿ, ಲವಂಗ, ಕಸೂರಿ ಮೇಥಿ, ಸೋಂಪು ಕಾಳು, ಗಸಗಸೆ, ಚೆಕ್ಕೆ ಹಾಕಿ ಹುರಿಯಿರಿ. ಇದನ್ನು ತಣ್ಣಗಾಗಿಸಿ ಮಿಕ್ಸಿ ಜಾರ್‌ಗೆ ಹಾಕಿ ಇದನ್ನು ಪುಡಿ ಮಾಡಿಕೊಳ್ಳಿ.
ಮ್ಯಾರಿನೇಟ್ ಆದ ಚಿಕನ್ ಅನ್ನು ಈಗ ತವಾ ಫ್ರೈ ಮಾಡಬೇಕು. ಇದಕ್ಕಾಗಿ ಬಾಣಲೆಯನ್ನು ಒಲೆ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕೋಳಿ ಮಾಂಸವನ್ನು ಒಂದೊಂದಾಗಿ ಹಾಕಿ ಬೇಯಲು ಬಿಡಿ. ಮಧ್ಯಮ ಉರಿಯಲ್ಲಿರಲಿ. ಇದನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿ, ತಟ್ಟೆಗೆ ಎತ್ತಿಡಿ.
ಈಗ ಒಂದು ಪಾತ್ರೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. ಈರುಳ್ಳಿಯನ್ನು ಚೆನ್ನಾಗಿ ಹುರಿದ ನಂತರ ಹಸಿಮೆಣಸಿನಕಾಯಿ ಹಾಕಿ. ನಂತರ ಟೊಮೆಟೊವನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ ಅದರ ರಸವನ್ನು (ಪ್ಯೂರಿ) ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಸಿವಾಸನೆ ಹೋಗುವವರೆಗೆ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ.
ನಂತರ ಪುಡಿ ಮಾಡಿಟ್ಟ ಮಸಾಲೆಯ ಮಿಶ್ರಣವನ್ನು ಹಾಕಿ. ಜೊತೆಗೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು. ಇದು ಕುದಿ ಬಂದಾಗ ಫ್ರೈ ಮಾಡಿಟ್ಟಿರುವ ಚಿಕನ್ ಅನ್ನು ಹಾಕಿ ಚೆನ್ನಾಗಿ ಕುದಿಯಬಲು ಬಿಡಿ. 10 ರಿಂದ 15 ನಿಮಿಷ ಕುದಿಯಲು ಬಿಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಚಿಕನ್ ಟಿಕ್ಕಾ ಮಸಾಲೆ ತಿನ್ನಲು ಸಿದ್ಧ.
ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆಯನ್ನು ನೀವು ಮನೆಯಲ್ಲೇ ಈ ರೀತಿ ಮಾಡಿ ನೋಡಿ. ಖಂಡಿತಾ ಇಷ್ಟಪಡುವಿರಿ. ಮನೆಗೆ ಅತಿಥಿಗಳು ಬಂದಾಗ ಕೂಡ ಈ ರುಚಿಕರ ಖಾದ್ಯವನ್ನು ಮಾಡಿ ಬಡಿಸಬಹುದು.
