ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ತಯಾರಿಸುವುದು ತುಂಬಾನೇ ಸುಲಭ: ಮನೆಯಲ್ಲೇ ಹೀಗೆ ಮಾಡಿ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ತಯಾರಿಸುವುದು ತುಂಬಾನೇ ಸುಲಭ: ಮನೆಯಲ್ಲೇ ಹೀಗೆ ಮಾಡಿ, ಇಲ್ಲಿದೆ ಪಾಕವಿಧಾನ

ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ತಯಾರಿಸುವುದು ತುಂಬಾನೇ ಸುಲಭ: ಮನೆಯಲ್ಲೇ ಹೀಗೆ ಮಾಡಿ, ಇಲ್ಲಿದೆ ಪಾಕವಿಧಾನ

ಶನಿವಾರ, ಭಾನುವಾರ ಬಂತು ಅಂದ್ರೆ ಮಾಂಸಾಹಾರ ಪ್ರಿಯರ ಮನೆಗಳಲ್ಲಿ ವಿವಿಧ ಬಗೆಯ ಭಕ್ಷ್ಯಗಳ ಘಮ ಮೂಗಿಗೆ ಬಡಿಯುತ್ತದೆ. ನೀವು ಚಿಕನ್ ಪ್ರಿಯರಾಗಿದ್ದರೆ ಲಾಲಿಪಪ್ ರೆಸಿಪಿಯನ್ನು ಟ್ರೈ ಮಾಡಿ. ಇದನ್ನು ಸೈಡ್ ಡಿಶ್ ಆಗಿಯೂ ತಿನ್ನಬಹುದು. ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ಖಾದ್ಯ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ರೆಸಿಪಿ
ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ರೆಸಿಪಿ (Canva)

ಶನಿವಾರ, ಭಾನುವಾರ ಬಂತು ಅಂದ್ರೆ ಮಾಂಸಾಹಾರ ಪ್ರಿಯರ ಮನೆಗಳಲ್ಲಿ ವಿವಿಧ ಬಗೆಯ ಭಕ್ಷ್ಯಗಳ ಘಮ ಮೂಗಿಗೆ ಬಡಿಯುತ್ತದೆ. ನೀವು ಚಿಕನ್‌ನಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಅಂದುಕೊಂಡಿದ್ದರೆ ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ಖಾದ್ಯವನ್ನು ಮನೆಯಲ್ಲೇ ಬಹಳ ಸರಳವಾಗಿ ತಯಾರಿಸಬಹುದು. ಇದನ್ನು ಮಾಡುವುದು ತುಂಬಾನೇ ಸುಲಭ. ಮಸಾಲೆಗಳನ್ನು ಹಾಕಿ ಮ್ಯಾರಿನೇಟ್ ಮಾಡಿರುವ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಕರಿದರೆ ರುಚಿಕರ ಚಿಕನ್ ಲಾಲಿಪಪ್ ಸಿದ್ಧ. ಹಾಗಿದ್ದರೆ ಮನೆಯಲ್ಲೇ ಚಿಕನ್ ಲಾಲಿಪಪ್ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕನ್ ಲಾಲಿಪಪ್ ಪಾಕವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಚಿಕನ್ (ರೆಕ್ಕೆ ಅಥವಾ ಲೆಗ್)- 1 ಕೆಜಿ, ಮೆಣಸಿನ ಪುಡಿ- 3 ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಉಪ್ಪು, ನಿಂಬೆರಸ- 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಗರಂ ಮಸಾಲೆ- 1 ಚಮಚ, ಸೋಯಾ ಸಾಸ್- 2 ಚಮಚ, ಮೈದಾ ಹಿಟ್ಟು- 1 ಕಪ್, ಕಾರ್ನ್ ಫ್ಲೋರ್- 1 ಕಪ್, ಎಣ್ಣೆ- ಕರಿಯಲು.

ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಂಗಡಿಯಿಂದ ಕೋಳಿ ಮಾಂಸ ತರುವಾಗ ಚಿಕನ್ ಲಾಲಿಪಪ್‌ಗಾಗಿಯೇ ತರಿಸಿ. ಅದೇ ಆಕಾರದಲ್ಲಿ ಬೇಕಾದಂತೆ ಕತ್ತರಿಸಿ ಕೊಡುತ್ತಾರೆ. ನಂತರ ಈ ಮಾಂಸಕ್ಕೆ ನಿಂಬೆರಸ, ಉಪ್ಪು, 2 ಚಮಚ ಮೆಣಸಿನ ಪುಡಿ, ಗರಂ ಮಸಾಲೆ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10 ರಿಂದ 15 ನಿಮಿಷ ಮುಚ್ಚಿಡಿ.

ಈ ವೇಳೆ ಇನ್ನೊಂದು ತಟ್ಟೆಯಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್, 1 ಚಮಚ ಮೆಣಸಿನ ಪುಡಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಗಟ್ಟಿಯಾಗಿಯೂ ಅಲ್ಲ ತುಂಬಾ ತೆಳುವಾಗಿಯೂ ಹಿಟ್ಟು ಇರಬಾರದು. ಬೋಂಡಾ, ಬಜ್ಜಿಗೆ ಮಾಡುವ ಹದದಂತೆ ಕಲಸಿಕೊಳ್ಳಿ. ನಂತರ ಇದಕ್ಕೆ 15 ನಿಮಿಷ ಮ್ಯಾರಿನೇಟ್ ಮಾಡಿಟ್ಟ ಚಿಕನ್ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ. ಮತ್ತೆ 10 ನಿಮಿಷಗಳ ಕಾಲ ಇದಕ್ಕೆ ಮುಚ್ಚಳವನ್ನು ಮುಚ್ಚಿ.

ನಂತರ ಒಲೆ ಮೇಲೆ ಬಾಣಲೆಯಿಟ್ಟು ಕರಿಯಲು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಒಂದೊಂದಾಗಿ ಚಿಕನ್ ಮಿಶ್ರಣವನ್ನು ಕರಿಯಿರಿ. 5 ರಿಂದ 6 ನಿಮಿಷಗಳ ಕಾಲ ಇದನ್ನು ಚೆನ್ನಾಗಿ ಕರಿಯಬೇಕು. ಬಳಿಕ ಇದನ್ನು ಒಂದು ತಟ್ಟೆಗೆ ಎತ್ತಿಡಿ. ಇಷ್ಟು ಮಾಡಿದರೆ ಗರಿಗರಿಯಾದ ಹಾಗೂ ರುಚಿಕರವಾದ ಚಿಕನ್ ಲಾಲಿಪಪ್ ತಿನ್ನಲು ಸಿದ್ಧ. ರೆಸ್ಟೋರೆಂಟ್ ಶೈಲಿಯ ಚಿಕನ್ ಲಾಲಿಪಪ್ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತೆ. ಇದನ್ನು ಟೊಮೆಟೊ ಸಾಸ್‌ನೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.

Whats_app_banner